ದಾವಣಗೆರೆ :
ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ 10 ಲಕ್ಷ ರೂ. ಮೌಲ್ಯದ ಬಾಂಡ್ ತೆಗೆದುಕೊಂಡು ಪ್ರಾಪರ್ಟಿ ಸೀಜ್ ಮಾಡುವುದರ ಜೊತೆಗೆ ಭದ್ರತಾ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜನ ಸಂಪರ್ಕ ಸಭೆ ನಡೆಸಿ, ಸಾರ್ವಜನಿಕರ ಆಹ್ವಾಲು ಸ್ವೀಕರಿಸಿ ಅವರು ಮಾತನಾಡಿದರು.
ಜನ ಸಂಪರ್ಕ ಸಭೆಯಲ್ಲಿ ರೈತ ಮುಖಂಡ ಆರ್.ಪರಮೇಶ್ವರಪ್ಪ ಹಾಗೂ ಆಲೂರು ಗ್ರಾಮಸ್ಥರು ಅರ್ಜಿ ನೀಡಿ, ತಾಲೂಕಿನ ಆಲೂರು ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಸಾರ್ವಜನಿಕರು ಜೀವನ ನಡೆಸುವುದು ತೊಂದರೆಯಾಗಿದೆ. ಆದ್ದರಿಂದ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ದಾವಣಗೆರೆ ತಹಶೀಲ್ದಾರ್ ಸಂತೋಷ್‍ಕುಮಾರ್, ಅಕ್ರಮ ಗಣಿಗಾರಿಕೆ ಮಾಡುತ್ತಿರುವ 12 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ದೂರು ದಾಖಲಿಸಿದರೂ ಮತ್ತೆ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿದ್ದರೆ, ಅಂಥವರ 10 ಲಕ್ಷ ರೂ. ಮೌಲ್ಯದ ಬಾಂಡ್ ತೆಗೆದುಕೊಂಡು ಪ್ರಾಪರ್ಟಿ ಸೀಜ್ ಮಾಡಿ ಹಾಗೂ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಹಶೀಲ್ದಾರ್ ಸಂತೋಷ್‍ಕುಮಾರ್ ಅವರಿಗೆ ಸೂಚಿಸಿದರು.
ದಾವಣಗೆರೆಯ ಜಾಲಿನಗರದ ಶಾಬಿನಾ ಬಾನು ಎಂಬುವರು ಅರ್ಜಿ ಸಲ್ಲಿಸಿ, ತಮಗೆ ಮನೆ ಹಾಗೂ ಯಾವುದೇ ನಿವೇಶನ ಇಲ್ಲ. ಆದ್ದರಿಂದ ಆಶ್ರಯ ಯೋಜನೆಯಡಿ ಮನೆ ಮಂಜೂರು ಮಾಡಿಕೊಡುವ ಮೂಲಕ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಆಶ್ರಯ ಮನೆ ಅಥವಾ ನಿವೇಶನಕ್ಕೆ ಮಹಾನಗರ ಪಾಲಿಕೆಗೆ ನೀವು ಅರ್ಜಿ ನೀಡಬೇಕು. ಈಗ ಇಲ್ಲಿಂದ ಪಾಲಿಕೆಗೆ ಮುಂದಿನ ಕ್ರಮಕ್ಕಾಗಿ ಈ ಅರ್ಜಿಯನ್ನು ಕಳುಹಿಸಲಾಗುವುದು. ಪಾಲಿಕೆ ವತಿಯಿಂದ ನಿವೇಶನ ರಹಿತರಿಂದ ಅರ್ಜಿ ತೆಗೆದುಕೊಳ್ಳುತ್ತಿಲ್ಲವೆಂಬ ದೂರಿದೆ.
ಆದ್ದರಿಂದ ಎಲ್ಲರೂ ಜಿಲ್ಲಾಡಳಿತಕ್ಕೆ ಬಂದು ಅರ್ಜಿ ನೀಡುತ್ತಿರುವುದು ವಿಷಾಧನೀಯ ಎಂದು ಬೇಸರ ವ್ಯಕ್ತಪಡಿಸಿ, ಅರ್ಜಿ ಸ್ವೀಕರಿಸುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಕಡ್ಡಾಯವಾಗಿ ಅರ್ಜಿ ಸ್ವೀಕರಿಸಬೇಕು ಹಾಗೂ ದೊಡ್ಡಬಾತಿ ಬಳಿ ಸುಮಾರು 15 ರಿಂದ 20 ಎಕರೆ ನಿವೇಶನಕ್ಕಾಗಿ ಜಾಗ ಗುರುತಿಸಿ ಈ ವಾರಾಂತ್ಯದೊಳಗೆ ದರ ನಿಗದಿಗೊಳಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಬೇಕೆಂದು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಅವರಿಗೆ ಸೂಚಿಸಿದರು.
ಯುವಕರಿಬ್ಬರು ಅರ್ಜಿ ಸಲ್ಲಿಸಿ, ಪೂಜಾ ಸೆಕ್ಯುರಿಟಿ ಏಜೆನ್ಸಿ ವತಿಯಿಂದ ಹೊರ ಗುತ್ತಿಗೆ ಆಧಾರದಲ್ಲಿ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ನಿಯಮಾನುಸಾರ ವೇತನ ಮತ್ತು ಇತರೆ ಸೌಲಭ್ಯ ನೀಡುತ್ತಿಲ್ಲ. ಆದ್ದರಿಂದ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಯಿಸಿದ ಡಿಸಿ ಡಾ.ಬಗಾದಿ ಗೌತಮ್, ಕಾರ್ಮಿಕ ಅಧಿಕಾರಿಗಳನ್ನು ಕಳುಹಿಸಿ ಅವಶ್ಯಕತೆ ಇದ್ದರೆ ಏಜೆನ್ಸಿ ವಿರುದ್ದ ಪ್ರಕರಣ ದಾಖಲಾಗಿಸಲಾಗುವುದು. ಸಭೆಗೆ ಗೈರಾದ ಕಾರ್ಮಿಕ ಅಧಿಕಾರಿಯವರನ್ನು ದೂರವಾಣಿ ಮೂಲಕ ಸಭೆಗೆ ಬರಲು ಸೂಚಿಸಿ, ಜನಸ್ಪಂದನ ಸಭೆಗಳಿಗೆ ಗೈರು ಹಾಜರಾಗುತ್ತಿರುವ ಇವರ ವಿರುದ್ಧ ಶಿಸ್ತಿನ ಕ್ರಮ ಏಕೆ ಜರುಗಿಸಬಾರದು ಎಂದು ಸೂಚ್ಯವಾಗಿ ಎಚ್ಚರಿಸಿದರು.
ನಿಟುವಳ್ಳಿ ನಿವಾಸಿ ಶ್ವೇತಾ ಎಸ್ ಅರ್ಜಿ ಸಲ್ಲಿಸಿ, ನನ್ನ ತಂದೆಯವರು ಹಲವಾರು ವರ್ಷಗಳಿಂದ ಹೃದಯ ತೊಂದರೆಯಿಂದ ಬಳಲುತ್ತಿದ್ದು, ಇದೀಗ ವೈದ್ಯರು ಅವರ ಹೃದಯ ಸರಿಯಾಗಿ ಕಾರ್ಯನಿರ್ವಹಿಸಲು ಸಿಆರ್‍ಟಿ ಮಷೀನ್‍ನ್ನು ಅಳವಡಿಸಬೇಕೆಂದು ಹೇಳಿರುತ್ತಾರೆ. ಈ ಮಷೀನ್ ದುಬಾರಿಯಾಗಿದ್ದು, ಬಿಪಿಎಲ್ ಕಾರ್ಡಿದ್ದರೂ ರಿಯಾಯಿತಿ ಮತ್ತಿತರೆ ಕಡಿತ ಲಭ್ಯವಿಲ್ಲ. ಬಡವರಾಗಿರುವ ತಮಗೆ ಈ ಮಷೀನ್ ಖರೀದಿಸಿ ಅಳವಡಿಸುವುದು ಕಷ್ಟವಾದ್ದರಿಂದ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಆಯುಷ್‍ಮಾನ್ ಭಾರತ್ ಯೋಜನೆಯಡಿ ರೂ. 5 ಲಕ್ಷದವರೆಗೆ ಚಿಕಿತ್ಸೆ ಉಚಿತವಾಗಿದ್ದು, ಈ ಯೋಜನೆಯಡಿ ಸೌಲಭ್ಯ ದೊರಕಿಸಿಕೊಡುವಂತೆ ಡಿಹೆಚ್‍ಓ ಅವರಿಗೆ ಸೂಚಿಸಿ, ಈ ಯೋಜನೆಯಡಿ ಸಾಧ್ಯವಾಗದ ಪಕ್ಷದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ ಈ ಸೌಲಭ್ಯ ಒದಗಿಸಲು ಕ್ರಮ ಜರುಗಿಸುವಂತೆ ಡಿಹೆಚ್‍ಓ ಡಾ.ತ್ರಿಪುಲಾಂಬ ಇವರಿಗೆ ಸೂಚಿಸಿದರು.
ಜಗಳೂರು ತಾಲೂಕಿನ ಆರ್.ಎಸ್ ತಿಪ್ಪೇಸ್ವಾಮಿ ಎಂಬುವವರು ಎಲ್ಲ ದಾಖಲಾತಿಗಳನ್ನು ನೀಡಿದರೂ ರೂ.13600 ಬೆಳೆ ಪರಿಹಾರ ಹಣ ಇನ್ನೂ ಸಂದಾಯವಾಗಿಲ್ಲ. ಪರಿಹಾರ ಹಣ ಕೊಡಿಸಬೇಕಾಗಿ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳು ಬೆಳೆ ಪರಿಹಾರಕ್ಕೆ ಸಂಬಂಧಿಸಿದ ವಿಷಯ ನಿರ್ವಾಹಕರನ್ನು ಕರೆಯಿಸಿ, ಮನವಿದಾರರ ದಾಖಲಾತಿಗಳನ್ನು ಪರಿಶೀಲಸಿ, ಪರಿಹಾರ ಹಣವನ್ನು ಶೀಘ್ರವಾಗಿ ಅರ್ಜಿದಾರರ ಖಾತೆಗೆ ವರ್ಗಾವಣೆ ಮಾಡುವಂತೆ ಸೂಚಿಸಿದರು.
ಶ್ರೀಕಾಂತ್ ಇವರು ಯಾವುದೇ ಮಹಜರ್ ಮಾಡದೇ ತಮ್ಮ ಮತದಾರರ ಗುರುತಿನ ಚೀಟಿಯನ್ನು ಡಿಲೀಟ್ ಮಾಡಲಾಗಿದೆ. ಬಿಎಲ್‍ಓಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿಯನ್ನು ಸರಿಪಡಿಸುವಂತೆ ಕೋರಿದರು.
ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು, ಹೊಸದಾಗಿ ಫಾರಂ 6 ನೀಡಲು ತಿಳಿಸಿ, ಹಾಗೆ ಡಿಲೀಟ್ ಆದವರ ಪಟ್ಟಿಯನ್ನು ನೀಡಿದಲ್ಲಿ ಕೂಡಲೇ ಸರಿಪಡಿಸಲು ತಿಳಿಸಲಾಗುವುದು ಎಂದರು.
ಜಿ.ಪಂ. ಸಿಇಓ ಎಸ್ ಅಶ್ವತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಜಿ ಪಂ ಉಪ ಮುಖ್ಯ ಕಾರ್ಯದರ್ಶಿ ಜಿ.ಎಸ್.ಷಡಾಕ್ಷರಪ್ಪ, ಮಹಾನಗರಪಾಲಿಕೆ ಉಪ ಆಯುಕ್ತ ರವೀಂದ್ರ ಬಿ ಮಲ್ಲಾಪುರ, ತಹಶೀಲ್ದಾರ್ ಸಂತೋಷ್‍ಕುಮಾರ್, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ