ತುಮಕೂರು:
ತುಮಕೂರು ನಗರದಲ್ಲಿ ಕೆಲ ಶ್ರೀಮಂತರು ನಿರ್ಮಿಸಿರುವ ಲೇಔಟ್‍ಗಳಿಗೆ ಅಕ್ರಮವಾಗಿ ಗ್ರಾಮಾಂತರ ಪ್ರದೇಶದ ಕೆರೆ ಕಟ್ಟೆಗಳಿಂದ ಅಕ್ರಮವಾಗಿ ಮಣ್ಣು ಅಗೆದು ತುಂಬಿಸುವ ಕೆಲಸ ಮಾಡುತ್ತಿದ್ದು,ತಾಲೂಕು ಆಡಳಿತ ಕೂಡಲೇ ಈ ಅಕ್ರಮವನ್ನು ತಡೆಗಟ್ಟುವಂತೆ ಅಲ್ ಇಂಡಿಯಾ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಒತ್ತಾಯಿಸಿದೆ.
ತುಮಕೂರು ತಾಲೂಕು ವಡ್ಡರಹಳ್ಳಿ ಕೆರೆಯಲ್ಲಿ ಕೆಲವರು ಆರ್.ಟಿ.ಓ ನಂಬರ್ ಇಲ್ಲದೆ ಜೆಸಿಬಿ ಮತ್ತು ಟಿಪ್ಪರ್ ಲಾರಿಯಲ್ಲಿ ಕೆರೆಯ ಮಣ್ಣನ್ನು ಸಾಗಿಸುತ್ತಿರುವುದನ್ನು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಸದಸ್ಯರು ಪ್ರಶ್ನಿಸಿದ್ದು, ಸರಕಾರದ ನಿಯಮದ ಪ್ರಕಾರ ಒಂದು ಗ್ರಾಮದ ಕೆರೆಯ ಹೂಳನ್ನು ಬಳಕೆ ಮಾಡಿಕೊಳ್ಳುವ ಅಧಿಕಾರ ಆ ಕೆರೆಯ ಅಚ್ಚುಕಟ್ಟುದಾರರಿಗೆ ಮಾತ್ರ ಇದೆ.ಇದಕ್ಕೆ ಸದರಿ ಗ್ರಾ.ಪಂನ ಅನುಮತಿ ಕಡ್ಡಾಯ.
ಆದರೆ ಕೆರೆಯಲ್ಲಿ ಸುಮಾರು 10 ಅಡಿಗೂ ಹೆಚ್ಚು ಅಳದಲ್ಲಿ ಮಣ್ಣು ತೆಗೆದು ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂದೆ ಕೆಲವರು ನಿರ್ಮಿಸಿರುವ ಲೇಔಟ್‍ಗೆ ತುಂಬಿಸುತಿದ್ದು,ಕೂಡಲೇ ಕೆರೆಯಲ್ಲಿ ಮಣ್ಣು ತೆಗೆಯುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದು,ಈ ವೇಳೆ ಟಿಪ್ಪರ್ ಮಣ್ಣು ತುಂಬಿಸುತಿದ್ದ ವ್ಯಕ್ತಿ ಹೆಬ್ಬೂರು ಪೊಲೀಸ್ ಠಾಣೆಗೆ ಪೋನ್ ಮಾಡಿ,ಇನ್ಸ್‍ಪೆಕ್ಟರ್ ಅವರನ್ನು ಕರೆಯಿಸಿಕೊಂಡು, ಅಕ್ರಮವಾಗಿ ಮಣ್ಣು ತೆಗೆಯುವುದನ್ನು ಪ್ರಶ್ನಿಸಿದ ಸಮಿತಿ ಕಾರ್ಯಕರ್ತರ ಅವಾಚ್ಚ ಶಬ್ದಗಳಿಂದ ನಿಂದಿಸಿ, ಸಂಘಟನೆಯ ಹೆಸರಿನಲ್ಲಿ ಹಣ ಕೇಳಲು ಬಂದಿದ್ದೀರ ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ನಿರ್ಮಿಸಿರುವ ಲೇಔಟ್ ಹಳ್ಳದಲ್ಲಿದ್ದು, ಸದರಿ ಲೇಔಟ್‍ಗೆ ಈ ಹಿಂದೆ ಡಾನ್‍ಬಾಸ್ಕೋ ಶಾಲೆಯ ಹಿಂಬಾಗದಲ್ಲಿದ್ದ ಶೆಟ್ಟಳ್ಳಯ್ಯನ ಕಟ್ಟೆಯಿಂದ ಮಣ್ಣು ತೆಗೆದು ತುಂಬಿಸಲಾಗುತ್ತಿತ್ತು.ಮಾಧ್ಯಮದಲ್ಲಿ ಈ ಬಗ್ಗೆ ವರದಿಯಾದ ನಂತರ, ಗ್ರಾಮಾಂತರದ ವಡ್ಡರಹಳ್ಳಿ ಕೆರೆಯ ಮಣ್ಣು ತೆಗೆಯಲಾಗುತ್ತಿದೆ ಎಂದು ಸಮಿತಿ ಸದಸ್ಯರು ಆರೋಪಿಸಿದ್ದಾರೆ.
ಅಕ್ರಮವಾಗಿ ಕೆರೆಯಲ್ಲಿ ಮಣ್ಣು ತೆಗೆಯುವುದನ್ನು ತಡೆಯಬೇಕಾದ ಪೊಲೀಸರೇ, ಅಕ್ರಮ ನಡೆಸುತ್ತಿರುವವರೊಂದಿಗೆ ಷಾಮೀಲಾಗಿ ಪ್ರಶ್ನಿಸಿದವರ ಮೇಲೆಯೇ ದರ್ಪ ತೋರಿರುವುದು ಖಂಡನೀಯ. ಕೂಡಲೇ ತಾಲೂಕು ಆಡಳಿತ ವಡ್ಡರಹಳ್ಳಿ ಕೆರೆಯಿಂದ ಮಣ್ಣು ತೆಗೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಇದುವರೆಗೂ ತೆಗೆದು ಸಾಗಿಸುವ ಮಣ್ಣಿನ ಒಟ್ಟು ಮೌಲ್ಯವನ್ನು ವಸೂಲಿ ಮಾಡಿ ಸರಕಾರಕ್ಕೆ ಜಮಾ ಮಾಡುವಂತೆ ಅಲ್ ಇಂಡಿಯಾ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಕಾರ್ಯಕರ್ತರು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದು,ಈ ಸಂಬಂಧ ಮನವಿಯನ್ನು ಸಹ ತಹಶೀಲ್ದಾರರಿಗೆ ಸಲ್ಲಿಸಲಾಗಿದೆ ಎಂದು ಅಲ್ ಇಂಡಿಯಾ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್,ಪ್ರಧಾನ ಕಾರ್ಯದರ್ಶಿ ಜಿ.ಆರ್.ಗಿರೀಶ್, ಕಾನೂನು ಘಟಕದ ಜಿಲ್ಲಾಧ್ಯಕ್ಷ ಎಸ್.ಆರ್.ಅಭಿನಯ್ ,ಸುರೇಶ್, ರಾಜೀವ್ ಮತ್ತಿತರರು ಒತ್ತಾಯಿಸಿದ್ದಾರೆ.