ಸಬ್ ರಿಜಿಸ್ಟ್ರಾರ್ ಕಛೇರಿ ಸುತ್ತಮುತ್ತ ಅನಧಿಕೃತ ಅಂಗಡಿಗಳು !

ತುಮಕೂರು:

    ನಗರದ ಕೇಂದ್ರ ಸ್ಥಳವಾದ ಸಬ್ ರಿಜಿಸ್ಟ್ರಾರ್ ಕಛೇರಿಯ ಸುತ್ತಮುತ್ತ ಗೂಡಂಗಡಿಗಳದ್ದೇ ಕಾರುಬಾರು. ಪಾಲಿಕೆಯ ಜಾಗದಲ್ಲಿ ಚರಂಡಿಯ ಮೇಲೆ ಎಲ್ಲವನ್ನೂ ಬ್ಲಾಕ್ ಮಾಡಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ವಾಹನಗಳ ಓಡಾಟಕ್ಕಂತೂ ತೀವ್ರ ತೊಂದರೆಯಾಗಿದೆ. ಅಷ್ಟೇ ಏಕೆ ಸಾರ್ವಜನಿಕರೂ ಓಡಾಡುವಂತಿಲ್ಲ. ಅಷ್ಟರ ಮಟ್ಟಿಗೆ ಈ ಗೂಡಂಗಡಿಗಳು ತಲೆಎತ್ತಿವೆ.

   ಇವರಿಗೆ ಯಾವುದೇ ಲೈಸೆನ್ಸ್ ಇಲ್ಲದಿದ್ದರೂ ಸಹ ಅದ್ಯಾವ ಪುಣ್ಯಾತ್ಮರ ಕೃಪಾಕಟಾಕ್ಷದಿಂದ ಅಂಗಡಿಗಳನ್ನಿಟ್ಟು ಕೊಂಡಿದ್ದಾರೋ ತಿಳಿಯದಾಗಿದೆ. ಈ ಜಾಗದಲ್ಲಿ ಚರಂಡಿಗಳು ಕ್ಲೀನ್ ಆಗದೆ ಗಬ್ಬು ವಾಸನೆ ಬೀರುತ್ತಿವೆ. ಒಂದು ಕಡೆ ಮೂತ್ರ ವಿಸರ್ಜನಾ ವಾಸನೆ. ಮತ್ತೊಂದು ಕಡೆ ಗೂಡಂಗಡಿಗಳ ದರ್ಬಾರು. ಇತ್ತೀಚೆಗೆ ಮಹಾನಗರ ಪಾಲಿಕೆ ವತಿಯಿಂದ ಚರಂಡಿ ಕ್ಲೀನ್ ಮಾಡಲು ಬಂದಿದ್ದರು. ಆದರೆ ಈ ಅನಧಿಕೃತ ಅಂಗಡಿಗಳವರಿಗೆ ಹೆದರಿ ಅರ್ಧಂಬರ್ಧ ಕ್ಲೀನ್ ಮಾಡಿ ಹೋದದ್ದು ನಿಜಕ್ಕೂ ವಿಪರ್ಯಾಸವೇ ಸರಿ.

    ಇನ್ನು ಇಲ್ಲಿಗೆ ಬರುವ ಜನರು ತಮ್ಮ ವಾಹನಗಳನ್ನು ಬೀದಿ ಬದಿಯಲ್ಲೇ ನಿಲ್ಲಿಸುವಂತಾಗಿದೆ. ಪೊಲೀಸರು ಆಗಾಗ್ಗೆ ಬಂದು ಅವುಗಳನ್ನು ತೆರವುಗೊಳಿಸುವ ಮೂಲಕ ದಂಡ ವಿಧಿಸುತ್ತಾರೆ. ಇದಕ್ಕೆ ಬಲಿಯಾಗುವವರು ಬೇರೆ ಯಾರೂ ಅಲ್ಲ ರೈತರು ಮತ್ತು ಇಲ್ಲಿನ ಕೆಲಸ ಕಾರ್ಯಗಳಿಗೆ ಬರುವ ಜನಸಾಮಾನ್ಯರು. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಗೂಂಡಾಗಿರಿ ಪ್ರದರ್ಶಿಸುವುದಲ್ಲದೆ ಹಲ್ಲೆಗೆ ಮುಂದಾಗುತ್ತಾರೆ.

   ಇನ್ನು ಇಲ್ಲಿರುವ ಹೋಟೆಲ್‍ಗಳಲ್ಲಿ ಯಾವುದೇ ಶುಚಿತ್ವ ಇರುವುದಿಲ್ಲ. ಇಲ್ಲಿನ ಕೆಲವು ಟೀ ಅಂಗಡಿಗಳಲ್ಲಿ ರಾಜಾರೋಷವಾಗಿಯೇ ಬೀಡಿ, ಸಿಗರೇಟು ಮಾರಾಟ ಮಾಡಲಾಗುತ್ತಿದೆ. ಹೋಟೆಲ್‍ಗೆ ಅಂಗಡಿಗಳ ಬಳಿ ಹೋದವರು ಬರೀ ಸಿಗರೇಟ್ ಧೂಮ ಕುಡಿಯಬೇಕಾಗುತ್ತದೆ. ಧೂಮಪಾನ ನಿಷೇಧವಿದ್ದರೂ ಸಹ ಇಲ್ಲಿನ ಧೂಮಪಾನಿಗಳಿಗೇನೂ ಕೊರತೆ ಇಲ್ಲ.

    ಇಲ್ಲಿನ ಅರಣ್ಯ ಕಚೇರಿ ಮುಂದೆ ಜೆರಾಕ್ಸ್ ಅಂಗಡಿ, ಜ್ಯೂಸ್ ಅಂಗಡಿ, ಕಬ್ಬಿನ ಹಾಲು, ಟೀ ಅಂಗಡಿಗಳು ಪೈಪೋಟಿಯಿಂದ ವ್ಯವಹಾರ ನಡೆಸುತ್ತಾರೆ. ಕಬ್ಬಿನ ಜಲ್ಲೆ ಹಾಗೂ ಜೆರಾಕ್ಸ್ ಬೋರ್ಡ್‍ಗಳನ್ನು ಸಾರ್ವಜನಿಕ ಓಡಾಟ ಜಾಗದಲ್ಲೇ ಇಟ್ಟಿರುವುದರಿಂದ ಓಡಾಡಲು ಬಹಳ ತೊಂದರೆ ಪಡಬೇಕಾಗುತ್ತದೆ. ಇಷ್ಟಾದರೂ ಯಾರೂ ಸಹ ಚಕಾರ ಎತ್ತದೆ ಇರುವುದು ಇವರ ವ್ಯವಹಾರಕ್ಕೆ ಇಂಬು ನೀಡಿದಂತಾಗಿದೆ. ಆಗೊಮ್ಮೆ ಕ್ರಮ ಕೈಗೊಂಡರೂ ಅದು ಒಂದೆರಡು ದಿನಕ್ಕೆ ಮಾತ್ರ ಸೀಮಿತವಾಗಿ ಮತ್ತೆ ಅದೇ ರಾಗ ಅದೇ ಹಾಡು ಎಂಬಂತಾಗುತ್ತದೆ.

    ಕೆಲವರಂತೂ ಓಮ್ನಿ ವ್ಯಾನ್‍ಗಳಲ್ಲೇ ಜೆರಾಕ್ಸ್, ಕಂಪ್ಯೂಟರ್, ಟೈಪಿಂಗ್ ಎಲ್ಲವನ್ನೂ ಇಟ್ಟುಕೊಂಡು ಬಂದವರಿಂದ ಒಂದಕ್ಕೆ ಎರಡರಂತೆ ವಸೂಲಿ ಮಾಡಿ ದಿನಕ್ಕೆ 10 ಸಾವಿರಕ್ಕೂ ಹೆಚ್ಚು ವಹಿವಾಟು ನಡೆಸುತ್ತಾರೆ. ಒಬ್ಬೊಬ್ಬರು 2-3 ವ್ಯಾನ್ ಇಟ್ಟುಕೊಂಡು ವ್ಯವಹರಿಸುತ್ತಿದ್ದಾರೆ. ಎಲ್ಲವೂ ಇದರಲ್ಲಿಯೇ ಆಗುವುದರಿಂದ ಸಂಜೆಯ ವೇಳೆಗೆ ವಾಹನಗಳನ್ನು ಅಲ್ಲಿಂದ ತೆರವುಗೊಳಿಸುತ್ತಾರೆ.ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳು ಸಿಮೆಂಟ್ ಆಸನಗಳಿವೆ. ಈ ಆಸನಗಳಲ್ಲಿ ಮಧ್ಯವರ್ತಿಗಳೇ

    ಕುಳಿತುಕೊಂಡು ವ್ಯವಹರಿಸುತ್ತಾರೆ. ಅನೇಕ ಹೆಣ್ಣು ಮಕ್ಕಳು ಕುಳಿತುಕೊಳ್ಳಲು ಹಿಂಜರಿಯುತ್ತಾರೆ. ಕೆಲವರು ಕೂತಿದ್ದರೆ ಅವರನ್ನು ಎಬ್ಬಿಸಿ ಇವರುಗಳು ಕುಳಿತುಕೊಳ್ಳುವ ಜಾಣ್ಮೆ ನಿಜಕ್ಕೂ ಮೆಚ್ಚುವಂತಹದ್ದು. ಇನ್ನಾದರೂ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರಾಗಿರುವ ಆಯುಕ್ತ ಟಿ.ಭೂಪಾಲನ್ ಅವರು ಇಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕುವುದರ ಮೂಲಕ ಅನಧಿಕೃತ ಅಂಗಡಿಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap