ಐಎಂಎ ಕಂಪನಿಯಿಂದ ಹಣ ಕೊಡಿಸಲು ಒತ್ತಾಯ

ದಾವಣಗೆರೆ:

      ಬೆಂಗಳೂರಿನ ಐಎಂಎ ಕಂಪನಿಯಲ್ಲಿ ಹಣ ಹೂಡಿ, ವಂಚನೆಗೆ ಒಳಗಾಗಿರುವ ಜನರಿಗೆ ಹಣ ವಾಪಾಸ್ ಕೊಡಿಸಬೇಕೆಂದು ಒತ್ತಾಯಿಸಿ, ಹಣ ಕಳೆದುಕೊಂಡಿರುವವರು ಮಂಗಳವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

       ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಐಎಂಎ ಕಂಪನಿಯಿಂದ ವಂಚನೆಗೊಳಗಾಗಿರುವವರು, ತಮಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿ, ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್, ಇಎಂಎ ಕಂಪನಿಯ ಮಾಲೀಕ ಮನ್ಸೂರ್ ಖಾನ್ ಇಸ್ಲಾಂ ಧರ್ಮವನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡು, ಬ್ಯಾಂಕ್‍ಗಳಲ್ಲಿ ಹಣ ಹೂಡಿ ಬಡ್ಡಿ ತಿನ್ನುವುದು ಹರಾಮ್ ಕೆಲಸವಾಗಿದ್ದು, ಇದಕ್ಕೆ ಇಸ್ಲಾಂ ಧರ್ಮದಲ್ಲಿ ಆಸ್ಪದವಿಲ್ಲ. ಆದ್ದರಿಂದ ನೀವು ಐಎಂಎ ಕಂಪನಿಯಲ್ಲಿ ಹಣ ಹೂಡಿದರೆ, ಬಡ್ಡಿ ಕೊಡುವುದಿಲ್ಲ. ಬದಲಿಗೆ ನಿಮ್ಮನ್ನೂ ಶೇರುದಾರರನ್ನಾಗಿ ಪರಿಗಣಿಸಿ, ಲಾಭಾಂಶ ನೀಡುತ್ತೇವೆ. ಇದು ಹಲಾಲ್ ದುಡ್ಡು, ಧರ್ಮದಿಂದ ಬರುವ ಗಳಿಕೆಯಾಗಿದೆ ಎಂಬುದಾಗಿ ಧರ್ಮಗುರುಗಳಿಂದ ಹೇಳಿಸಿ, ನಂಬಿಸಿ ಸಾವಿರಾರು ಜನರಿಂದ ಸಾವಿರಾರು ಕೋಟಿ ಹೂಡಿಕೆ ಮಾಡಿಸಿ, ಈಗ ಹಣ ಹೂಡಿದವರಿಗೆ ಪಂಗನಾಮ ಹಾಕಿ, ತಲೆ ಮರೆಸಿಕೊಂಡಿದ್ದಾರೆಂದು ಆರೋಪಿಸಿದರು.

       ಐಎಂಎ ಕಂಪನಿಯಲ್ಲಿ ಹಣ ಹೂಡಿರುವವರಲ್ಲಿ ಅತೀ ಹೆಚ್ಚಯ ಜನ ಕಡು ಬಡವರು, ಕೂಲಿ ಕಾರ್ಮಿಕರು, ಮಂಡಕ್ಕಿ, ಅವಲಕ್ಕಿ ಭಟ್ಟಿ ಕಾರ್ಮಿಕರು, ಗ್ಯಾರೇಜ್ ಕಾರ್ಮಿಕರು, ಆಟೋ, ಲಾರಿ, ಬಸ್ಸು, ಗೂಡ್ಸ್ ವಾಹನ ಚಾಲಕರು, ಬೀಡಿ ಕಟ್ಟುವ, ಮನೆಗೆಲಸದ ಮಹಿಳೆಯರು, ಹಮಾಲರು, ಫುಟ್‍ಪಾತ್ ವ್ಯಾಪಾರಸ್ಥರು, ಗುಜರಿ ಆಯುವವರು, ಗಂಡನಿಂದ ದೂರವಾದ ಮಹಿಳೆಯರು, ವಿಧುವೆಯರೆ ಹೆಚ್ಚಾಗಿದ್ದಾರೆ. ದಾವಣಗೆರೆಯೊಂದರಲ್ಲೇ ಸುಮಾರು 4 ಸಾವಿರಕ್ಕೂ ಹೆಚ್ಚು ಜನರು ಹತ್ತಾರೂ ಕೋಟಿ ರೂ.ಗಳನ್ನು ಐಎಂಎ ಕಂಪನಿ ಸ್ಥಳೀಯ ಶಾಖೆಯಲ್ಲಿ ಹೂಡಿಕೆ ಮಾಡಿದ್ದು, ಈಗ ಇಲ್ಲಿನ ಶಾಖೆ ನಿರ್ದೇಶಕ, ಅಡ್ವೈಸರ್‍ಗಳು ನಾಪತ್ತೆಯಾಗಿದ್ದಾರೆಂದು ದೂರಿದರು.

       ಐಎಂಎ ಶಾಖೆ ಆರಂಭಕ್ಕೂ ಮುನ್ನ ಆರ್ಥಿಕವಾಗಿ ಸ್ಥಿತಿವಂತರೇ ಅಲ್ಲದಿದ್ದ, ಇಲ್ಲಿನ ನಿರ್ದೇಶಕ, ಅಡ್ವೈಸರ್‍ಗಳು ಕೋಟಿಗಟ್ಟಲೇ ಬೇನಾಮಿ ಆಸ್ತಿ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಬೇಕು ಐಎಂಎ ಕಂಪನಿ ವಂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಸ್‍ಐಟಿ ಮೂಲಕ ತನಿಖೆ ನಡೆಸಲು ಮುಂದಾಗಿದೆ. ಆದರೆ, ಎಸ್‍ಐಟಿ ತನಿಖೆಯಿಂದ ಸಾವಿರಾರು ಜನರಿಗೆ ನ್ಯಾಯ ಸಿಗುವ ವಿಶ್ವಾಸವಿಲ್ಲ.

      ಐಎಂಎ ಕಂಪನಿ ಮಾಲೀಕನ ಜೊತೆಗೆ ರಾಜ್ಯ ಸರ್ಕಾರದ ಪ್ರಭಾವಿ ನಾಯಕರು, ಪ್ರಮುಖ ಹುದ್ದೆಯಲ್ಲಿದ್ದವರೂ ಸಂಪರ್ಕ ಹೊಂದಿರುವುದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಕೇಂದ್ರ ಸರ್ಕಾರವೂ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ, ಕಂಪನಿಯಿಂದ ಹಣ ವಾಪಾಸ್ ಕೊಡಿಸಿ, ಬಡ ಜನರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.

       ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಉಮೇಶ್ ಪಾಟೀಲ್, ಸಮಾಜ ಸೇವಕರಾದ ತನ್ವೀರ್ ಅಹಮ್ಮದ್, ಮಿರ್ಜಾ ಖಲೀಂವುಲ್ಲಾ, ಸೈಯದ್ ಜಾಫರ್, ಮಹಮ್ಮದ್ ಹಮೀದ್, ಕೆ.ತನ್ವೀರ್ ಅಹಮ್ಮದ, ಡಿ.ಎಂ.ರೋಷನ್ ಜಮೀರ್, ಮಹಮ್ಮದ್ ಖಾಸಿಂ ತಾಜ್, ಎಸ್.ಮಹಮ್ಮದ್ ಅಲಿ, ಹಫೀಜ್, ಮೊಹಸೀನ್ ಆನಗೋಡು, ಸೈಯದ್ ಪೀರ್, ಮುಜಾಹಿದ್, ಜಮೀರ್, ರಿಯಾಜ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap