ಸ್ವಚ್ಚತೆ ಜಾಗೃತಿ ಆಂದೋಲನದ ಪರಿಣಾಮಕಾರಿ ಅನುಷ್ಟಾನಕ್ಕೆ ತನ್ನಿ: ಸಿಇಓ

ದಾವಣಗೆರೆ

      ಗ್ರಾಮಗಳಲ್ಲಿ ವ್ಯವಸ್ಥಿತವಾಗಿ ಘನತ್ಯಾಜ್ಯ ನಿರ್ವಹಿಸಲು ‘ಸ್ವಚ್ಛಮೇವ ಜಯತೆ’ ಆಂದೋಲನಕ್ಕೆ ಚಾಲನೆ ನೀಡಲಾಗುತ್ತಿದ್ದು, ಜನರಲ್ಲಿ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸುವ ಮೂಲಕ ಪರಿಣಾಮಕಾರಿಯಾಗಿ ಎಲ್ಲರೂ ಈ ಆಂದೋಲನವನ್ನು ಯಶಸ್ವಿಗೊಳಿಸಬೇಕೆಂದು ಜಿ.ಪಂ. ಸಿಇಓ ಹೆಚ್. ಬಸವರಾಜೇಂದ್ರ ಕರೆ ನೀಡಿದರು.

      ಜಿಲ್ಲಾ ಪಂಚಾಯತ್‍ನ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ, ಸ್ವಚ್ಛಮೇವ ಜಯತೆ ಆಂದೋಲನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಗ್ರಾ.ಪಂ ಗಳಲ್ಲಿ ಘನ ತ್ಯಾಜ್ಯ ಕಾರ್ಯಕ್ರಮದ ಅನುಷ್ಟಾನಕ್ಕಾಗಿ 2019-20 ನೇ ಸಾಲಿನಲ್ಲಿ ಸ್ವಚ್ಛಮೇವ ಜಯತೆ ಆಂದೋಲನಕ್ಕೆ ಚಾಲನೆ ನೀಡಲಾಗುತ್ತಿದೆ.

      ಇದರ ಅಂಗವಾಗಿ ಜೂನ್ 6 ರಿಂದ ಜೂನ್ 30 ರವರೆಗೆ ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯತಿ ಹಂತದಲ್ಲಿ ವಿವಿಧ ಜನಜಾಗೃತಿ ಕಾರ್ಯಕ್ರಮಗಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

       ಸ್ವಚ್ಚವೇವ ಜಯತೆ ಕಾರ್ಯತಂತ್ರ : ಸ್ವಚ್ಛಮೇವ ಜಯತೆ ಆಂದೋಲನದಡಿ ವೈಯಕ್ತಿಕ ಗೃಹ ಶೌಚಾಲಯ, ಸ್ವಚ್ಛತಾ ರಥ ಆಯೋಜನೆ, ಸಮುದಾಯ ಶೌಚಾಲಯ ಬಳಕೆ ಅಭಿಯಾನ, ಶಾಲೆ ಮತ್ತು ಅಂಗನವಾಡಿ ಶೌಚಾಲಯ ಬಳಕೆ, ಪ್ರತಿ ಗ್ರಾಮದಲ್ಲಿ ಗೋಡೆ ಬರಹ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಮುದ್ರಣ ಹಂಚಿಕೆ, ಕೈತೊಳೆಯುವ ಅಭಿಯಾನ ತರಬೇತಿ ಕಾರ್ಯಕ್ರಮಗಳ ಆಯೋಜನೆ, ಸ್ವಚ್ಛತಾ ಪ್ರತಿಜ್ಞಾವಿಧಿ ಸ್ವೀಕಾರ, ಶಾಲಾ ಮಕ್ಕಳಿಂದ ಜಾಥಾ, ಸ್ವಚ್ಛತೆಗಾಗಿ ಶ್ರಮದಾನ ಮತ್ತು ರೇಡಿಯೋ, ಟಿವಿ, ಪತ್ರಿಕೆ, ಸಾಮಾಜಿಕ ಮಾಧ್ಯಮಗಳ ಮೂಲಕ ಸ್ವಚ್ಛತೆ ಕಾಪಾಡುವ ಕುರಿತು ಪ್ರಚಾರ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸ್ವಚ್ಛತೆ ಕುರಿತು ಜೂನ್ ಮಾಹೆಯಾದ್ಯಂತ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಜಲವರ್ಷ:

      2019ರ ವರ್ಷವನ್ನು ಜಲವರ್ಷ ಎಂದು ಘೋಷಿಸಲಾಗಿದ್ದು, ಜಲಾಮೃತ ಯೋಜನೆಯಡಿ ಜಲಸಂರಕ್ಷಣೆ, ಜಲಸಾಕ್ಷರತೆ, ಜಲಪ್ರಜ್ಞೆ, ಹಾಗೂ ಹಸೀರಿಕರಣ ಅಂಶಗಳ ಮೂಲಕ ಜನರಿಗೆ ನೀರಿನ ಬಳಕೆ ಮತ್ತು ಅದರ ಅವಶ್ಯಕತೆ ಕುರಿತು ಜಾಗೃತಿ ಮೂಡಿಸಲಾಗುವುದು. ಹಸೀರಿಕರಣ ಯೋಜನೆಯಡಿ ಜಿಲ್ಲೆಯಾದ್ಯಂತ ರೂ.3 ಲಕ್ಷ ಸಸಿ ನೆಡಲು ಯೋಜನೆ ರೂಪಿಸಲಾಗಿದ್ದು, ಅಂಗನವಾಡಿಗಳು, ವಸತಿನಿಲಯಗಳು ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಸ್ಥಳಾವಕಾಶವಿರುವಲ್ಲಿ ಗಿಡಗಳನ್ನು ನೆಡಲಾಗುವುದು.

ಗಿಡ ಬೆಳೆಸಿ 

       ಸರ್ಕಾರಿ ಕಚೇರಿಗಳ ಆವರಣದಲ್ಲಿ ಕಾಂಕ್ರೀಟ್ ಹಾಕಿಸಿದ್ದರೆ ಅದನ್ನು ತೆಗೆಸಿ, ಎಲ್ಲಿ ಸಾಧ್ಯವೋ ಅಲ್ಲಿ ಗಿಡಗಳನ್ನು ನೆಡಲು ಸಕಲ ಸಿದ್ದತೆ ಮಾಡಿಕೊಳ್ಳಿ. ಜೂನ್ 5 ರಿಂದ ಜಿಲ್ಲೆಯಲ್ಲಿ ಮುಂಗಾರು ಆರಂಭವಾಗುತ್ತಿದ್ದು, ಗಿಡಗಳ ಬೆಳವಣಿಗೆಗೆ ಪೂರಕ ವಾತವರಣ ನಿರ್ಮಾಣವಾಗಲಿದೆ ಎಂದರು.

       ಗಿಡಕ್ಕೆ ಮಕ್ಕಳ ನಾಮಫಲಕ ಹಾಕಿ: ಶಾಲಾ ಆವರಣದಲ್ಲಿ ಗಿಡನೆಟ್ಟು ಮೂರು ಮಕ್ಕಳಿಗೆ ಒಂದು ಗಿಡದಂತೆ ಮಕ್ಕಳ ಹೆಸರಿನ ನಾಮಫಲಕ ಹಾಕಿ ಗಿಡವನ್ನು ಬೆಳೆಸುವ ಜವಾಬ್ದಾರಿಯನ್ನು ಅವರಿಗೇ ನೀಡಿದಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಗಿಡಗಳನ್ನು ಬೆಳೆಸುವ ಕುರಿತು ಆಸಕ್ತಿ ಮೂಡುವ ಜೊತೆಗೆ ಭವಿಷ್ಯದಲ್ಲಿ ಗಿಡ-ಮರಗಳ ಪ್ರಯೋಜನಗಳ ಬಗ್ಗೆ ತಿಳಿಯುತ್ತದೆ ಎಂದರು.

       ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್ ಮಾತನಾಡಿ, ಮಳೆ ನೀರನ್ನು ಹರಿದು ಹೋಗಲು ಬಿಡುವುದರಿಂದ ನೀರಿನ ಜೊತೆ ಮಣ್ಣು ಸಹ ಹರಿದು ಭೂಮಿಯ ಮೇಲ್ಮೈ ಪದರ ಹಾಳಾಗುತ್ತದೆ. ಜಲವರ್ಷ 2019 ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 252 ಕೆರೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ಮಾಡಲಾಗಿದೆ. ಕೆರೆಗಳು, ಗೋಕಟ್ಟೆಗಳ ಹೂಳೆತ್ತುವುದು, ಚೆಕ್‍ಡ್ಯಾಂಗಳನ್ನು ನಿರ್ಮಾಣ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರನ್ನು ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

       ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಯೋಜನೆಗೂ ಆಯ್ಕೆಯಾಗದ 20 ಸಾವಿರ ಹೆಕ್ಟೆರ್ ಭೂಪ್ರದೇಶವನ್ನು ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ನರೇಗಾದಡಿ ಜಮೀನುಗಳಿಗೆ ಬದುಗಳನ್ನು ನಿರ್ಮಿಸಿ ಭೂ ಸವಕಳಿಯನ್ನು ತಡೆಗಟ್ಟಲಾಗುವುದು. 41 ಹಳ್ಳಿಗಳಲ್ಲಿ 8 ಕಲ್ಯಾಣಿಗಳು, 14 ಕಟ್ಟೆಗಳು ಮತ್ತು 11 ಗೋಕಟ್ಟೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಜಲ ಮೂಲಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು.

       ಕಾರ್ಯಕ್ರಮದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಭೀಮಾನಾಯ್ಕ್, ಡಿಡಿಪಿಐ ಪರಮೆಶ್ವರ್, ಡಿಎಚ್‍ಓ. ಡಾ. ತ್ರಿಪುಲಾಂಭ, ತೋಟಗಾರಿಕೆಯ ಉಪನಿರ್ದೇಶಕರಾದ ಲಕ್ಷ್ಮಿಕಾಂತ್ ಬೊಮ್ಮನ್ನರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link