ಚಿಕ್ಕನಾಯಕನಹಳ್ಳಿ
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೇಷ್ಮೆ ನೂಲು ಬಿಚ್ಚುವ ಕಾರ್ಮಿಕರಿಗೆ ಆಧುನಿಕ ಪದ್ದತಿ ಅಳವಡಿಸಿಕೊಳ್ಳಲು ತರಬೇತಿ ನೀಡುವಂತೆ ಬಿಜೆಪಿ ರಾಜ್ಯ ರೇಷ್ಮೆ ಬೆಳೆಗಾರರ ಪ್ರಕೋಷ್ಠ ರಾಜ್ಯಾಧ್ಯಕ್ಷ ಸಿ.ಬಿ.ಲೋಕೇಶ್‍ಗೌಡ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಷ್ಮೆ ಲಾಭದಾಯಕವಾದದ್ದು, ಇದರಲ್ಲಿ ಬಂಡವಾಳ ಹೆಚ್ಚಿಲ್ಲದೆ ಲಾಭ ಪಡೆಯಬಹುದು. ರೇಷ್ಮೆ ಕುಟುಂಬ ಆಧಾರಿತ ಕೃಷಿಯಾಗಿದ್ದು ರಾಜ್ಯದಲ್ಲಿ ಸುಮಾರು 1,30,600 ರೈತ ಕುಟುಂಬಗಳು ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿವೆ. 5900 ಜನ ರೇಷ್ಮೆ ನೂಲು ಬಿಚ್ಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ 4500 ಇದ್ದ ರೇಷ್ಮೆ ಬೆಳೆಗಾರರು ಪ್ರಸಕ್ತ 8600ಕ್ಕೂ ಹೆಚ್ಚು ರೈತರು ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ರೇಷ್ಮೆ ಬೆಳೆ ಬೆಳೆಯುವ ರೈತರು ಪ್ರತಿ ಒಂದು ಎಕರೆಗೆ 1.5ಲಕ್ಷದಿಂದ 2 ಲಕ್ಷರೂ. ಖರ್ಚು ತೆಗೆದು ಆದಾಯ ಗಳಿಸಬಹುದು ಎಂದು ತಿಳಿಸಿದರು.
ಯುವಕರು ನಗರ ಪ್ರದೇಶಗಳಿಗೆ ಗುಳೆ ಹೋಗದೆ ಕೃಷಿಯಲ್ಲೆ ಹೆಚ್ಚು ಲಾಭದಾಯಕವಾಗಿರುವ ರೇಷ್ಮೆಯನ್ನು ಬೆಳೆಯುವಂತೆ ಸಲಹೆ ನೀಡಿದ ಅವರು, ಕೇಂದ್ರ ಸರಕಾರ ರೇಷ್ಮೆ ಬೆಳೆಗಾರರಿಗೆ 2161 ಸಾವಿರ ಕೋಟಿ ಹಣವನ್ನು ಎರಡು ವರ್ಷಕ್ಕೆ ಮೀಸಲಿಟ್ಟಿದೆ. ರೇಷ್ಮೆ ಬೆಳೆ ಬೆಳೆದ ರೈತರಿಗೆ ಶೇ.90ರಷ್ಟು ಹಣವನ್ನು ಸಬ್ಸಿಡಿ ರೀತಿಯಲ್ಲಿ ನೀಡುತ್ತಿದೆ ಎಂದರು.
ಸರ್ಕಾರ 3.5ಲಕ್ಷ ರೂಗಳಷ್ಟು ರೇಷ್ಮೆಗೂಡು ಬೆಳೆಯುವ ರೈತರಿಗೆ ಮನೆ ಕಟ್ಟಲು ಸಹಾಯ ಧನ ನೀಡುತ್ತಿದೆ. ರಾಜ್ಯ ಸರ್ಕಾರ ರೇಷ್ಮೆ ಬೆಳೆಗಾರರಿಗಾಗಿಯೇ ಕೇವಲ 2 ಕೋಟಿ ರೂ. ತೆಗೆದಿಟ್ಟಿದ್ದು, ಇದು ರೇಷ್ಮೆ ಬೆಳೆ ಬೆಳೆಯುವ ರೈತರಿಗೆ ಸಾಕಾಗುವುದಿಲ್ಲ. ಆದ್ದರಿಂದ ಇನ್ನೂ ಹೆಚ್ಚು ಹಣ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ ಅವರು, ರೇಷ್ಮೆ ನೂಲು ಬಿಚ್ಚುವ ಕಾರ್ಮಿಕರಿಗೆ 5 ಲಕ್ಷಕ್ಕೂ ಹೆಚ್ಚು ಆರ್ಥಿಕ ಸಹಾಯ ಮಾಡುವಂತೆ ಒತ್ತಾಯಿಸಿದ ಅವರು, ರೇಷ್ಮೆ ಬೆಳೆಗಾರರ ಮಾರುಕಟ್ಟೆಯಲ್ಲಿ ಶೇ.60 ರಷ್ಟು ಸಿಸಿಟಿವಿಗಳು ಕೆಟ್ಟು ಹೋಗಿದ್ದು, ಅವುಗಳನ್ನು ಸರಿ ಮಾಡುವುದರ ಜೊತೆಯಲ್ಲಿ ರೇಷ್ಮೆ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು.
ದೇಶದ ಸಮರ್ಥ ಪ್ರಧಾನಮಂತ್ರಿ ನರೇಂದ್ರಮೋದಿಯವರು, ಸುಮಾರು 350ಕ್ಕೂ ಹೆಚ್ಚು ಉಗ್ರರನ್ನು ಧಮನ ಮಾಡಿ ದೇಶವೆ ಮೆಚ್ಚುವಂತಹ ಕೆಲಸ ಮಾಡಿದರು. ತನ್ನ ಕರ್ತವ್ಯಕ್ಕೆ ಒಂದು ದಿನವೂ ರಜೆ ಹಾಕದೆ ದೇಶಕ್ಕಾಗಿ ದುಡಿಯುತ್ತಿರುವ ಮೋದಿಯವರು, ಸ್ವಚ್ಛಭಾರತ್ ಯೋಜನೆಯಲ್ಲಿ 9ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಮಾಡಿ ಸಾರ್ವಜನಿಕರೆ ಮೆಚ್ಚುವಂತಹ ಕೆಲಸಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ್, ತಾ.ಬಿಜೆಪಿ ಅಧ್ಯಕ್ಷ ಹೆಚ್.ಆರ್.ಶಶಿಧರ್, ಜಿಲ್ಲಾ ಪ್ರತಿನಿಧಿ ಪ್ರಕಾಶ್, ಎ.ಪಿ.ಎಮ್.ಸಿ ಸದಸ್ಯ ಶಿವರಾಜ್, ಬಿಜೆಪಿ ಕಾರ್ಯದರ್ಶಿ ನಿರಂಜನ್‍ಮೂರ್ತಿ, ತಾ.ಪಂ.ಸದಸ್ಯ ಕೇಶವಮೂರ್ತಿ, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.