ಶ್ರೀ ಸಿದ್ದರಾಮೇಶ್ವರರ ತತ್ವಾದರ್ಶ ಅಳವಡಿಸಿಕೊಳ್ಳಲು ಕರೆ

ಗುಬ್ಬಿ

          ಗುರು ಶ್ರೀಸಿದ್ದರಾಮೇಶ್ವರರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಸಾಮಾಜಿಕ ಬದುಕಿನಲ್ಲಿ ಅಳವಡಿಸಿಕೊಂಡಾಗ ಸುಸಂಸ್ಕತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ನೊಳಂಬ ವೀರಶೈವ ಸಮಿತಿಯ ರಾಜ್ಯ ನಿರ್ದೇಶಕ ಮೋಹನ್ ಕುಮಾರ್ ತಿಳಿಸಿದರು.

         ತಾಲ್ಲೂಕಿನ ಲಕ್ಕೇನಹಳ್ಳಿ ಗ್ರಾಮಕ್ಕೆ 846ನೇ ಸಿದ್ದರಾಮೇಶ್ವರ ಜಯಂತಿಯು 2019ನೇ ಜನವರಿ 14 ಹಾಗೂ 15ರಂದು ನಡೆಯಲಿದ್ದು ಅದರ ರಥ ಹಾಗೂ ದಾಸೋಹಕ್ಕೆ ಬೇಕಾದ ಪದಾರ್ಥಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶತಮಾನಗಳ ಹಿಂದೆಯೇ ಕೆರೆ, ಕಟ್ಟೆಗಳನ್ನು ನಿರ್ಮಾಣ ಮಾಡಿ ಸಾಮಾಜಿಕ ಸೇವೆಯನ್ನು ಮಾಡುತ್ತ ಬಂದಂತಹ ಶಿವಶರಣ ಶ್ರೀ ಸಿದ್ದರಾಮೇಶ್ವರರು ಅವರ ಆದರ್ಶ ನಮಗೆ ದಾರಿದೀಪವೆಂದು ತಿಳಿಸಿದರು.

            ಪ್ರತಿವರ್ಷವು ಸಹ ನಾಡಿನಲ್ಲಿ ಈ ಜಯಂತಿಯು ನಡೆಯುತ್ತ ಬಂದಿದ್ದು ಈ ಭಾರಿ ಗುಬ್ಬಿ ತಾಲ್ಲೂಕಿನ ಬಾಗೂರು ಗೇಟಿನಲ್ಲಿ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ. ಈ ರಥ ಯಾತ್ರೆಯು ತಾಲ್ಲೂಕಿನಲ್ಲೆಡೆ ಸಂಚಾರ ಮಾಡುತ್ತಿದೆ. ರಥ ಬಂದಂತಹ ಸಂದರ್ಭದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸಹಾಯ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.

            ಸಮಿತಿಯ ಕಾರ್ಯಾಧ್ಯಕ್ಷ ಶಂಕರಾನಂದ ಮಾತನಾಡಿ ಜಯಂತಿಗೆ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು ಮೂರು ಲಕ್ಷ ಭಕ್ತರು ಆಗಮಿಸಲಿದ್ದು, ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ಸೇವಾ ಮನೋಭಾವದಿಂದ ಶರಣ ಬಂಧುಗಳ ಸಮಿತಿಯು ಕೆಲಸ ಮಾಡುತ್ತಿದೆ.

            ಜಾತ್ಯತೀತವಾಗಿ, ಪಕ್ಷಾತೀತವಾಗಿ, ಎಲ್ಲರೂ ಕೈ ಜೋಡಿಸಿದರೆ ಈ ಕೆಲಸ ಸುಗಮವಾಗಲಿದೆ. ಲೋಕ ಕಲ್ಯಾಣಕ್ಕಾಗಿ ಶ್ರೀ ಸಿದ್ದರಾಮೇಶ್ವರರು ಸಾಕಷ್ಟು ವಚನಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಪ್ರತಿ ವಚನಗಳು ಸಹ ಸಮಾಜದ ಬದಲಾವಣೆ, ಶೋಷಿತರ ವರ್ಗಕ್ಕೆ ಬೇಕಾದಂತಹ ಧೈರ್ಯವನ್ನು ತುಂಬುತ್ತವೆ.

            ಸಮಾಜದಲ್ಲಿ ಹೇಗೆ ನಾವು ಬದುಕಬೇಕು ಎಂಬ ವಿಷಯವನ್ನು ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ತಮ್ಮ ವಚನಗಳಲ್ಲಿ ಬರೆದಿದ್ದಾರೆ. ಅಂತಹ ವಚನಕಾರ, ಶ್ರೇಷ್ಠ ಶರಣರ ಜಯಂತಿಯನ್ನು ಗುಬ್ಬಿಯಲ್ಲಿ ಜನವರಿ 14 ಹಾಗೂ 15 ರಂದು ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು, ಜೊತೆಗೆ ಹೆಚ್ಚಿನ ಸಹಕಾರವನ್ನು ತಾಲ್ಲೂಕಿನ ಜನತೆ ನೀಡಬೇಕು ಎಂದು ತಿಳಿಸಿದರು.

              ಸಮಿತಿಯ ಕಾರ್ಯಾಧ್ಯಕ್ಷ ಎಸ್.ಡಿ.ದಿಲೀಪ್‍ಕುಮಾರ್ ಮಾತನಾಡಿ ಡಿ.8 ರಿಂದ ಈ ರಥವು ತಾಲ್ಲೂಕಿನಲ್ಲಿ ಸಂಚಾರ ಮಾಡುತ್ತಿದೆ. ಈಗಾಗಲೆ ಹಲವು ಗ್ರಾಮ ಪಂಚಾಯತಿಗಳಲ್ಲಿ ರಥವು ಸಂಚಾರ ಮಾಡಿದ್ದು ಸಾಕಷ್ಟು ಸಹಕಾರ ನಮಗೆ ಸಿಕ್ಕಿದೆ. ಕಾರ್ಯಕ್ರಮಕ್ಕೆ ಮೂರರಿಂದ ನಾಲ್ಕು ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು ಕೇವಲ ಕಾರ್ಯಕ್ರಮವಾಗದೆ ಸಮಾಜದ ಅಭಿವೃದ್ದಿಗೆ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ತಿಳಿಸಿದರು.

             ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಉದಯ್ ಕುಮಾರ್, ವೀರಶೈವ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಸಿದ್ದಲಿಂಗಮೂರ್ತಿ, ಮುಖಂಡರಾದ ಶಶಿಧರ್‍ತಿಪ್ಪೂರು, ಬಸವಲಿಂಗಪ್ಪ, ದಿವ್ಯಪ್ರಕಾಶ್, ವಿಶ್ವರಾಧ್ಯ, ರೇಣುಕಪ್ರಸಾದ್ ಸೇರಿದಂತೆ ಮಠದ ಶಿಕ್ಷಕರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link