ಬೆಂಗಳೂರು
ಪಾದರಾಯನಪುರದ ಕಾರ್ಪೋರೇಟರ್ ಇಮ್ರಾನ್ ಪಾಷಾ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಂದ ಹಿನ್ನೆಲೆಯಲ್ಲಿ ಬೆಂಬಲಿಗರಿಂದ ರೋಡ್ ಶೋ ಆಯೋಜಿಸಲಾಗಿದ್ದು, ಇದಕ್ಕೆ ಪೊಲೀಸರು ತಡೆಯೊಡ್ಡಿ ಇಮ್ರಾನ್ ಪಾಷಾ ಅವರನ್ನು ವಶಕ್ಕೆ ಪಡೆದು ನಿಷೇಧಾಜ್ಞೆ ವಿಧಿಸಿದ್ದಾರೆ.
ಕೊರೊನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಇಮ್ರಾನ್ ಪಾಷಾ ಅವರನ್ನು ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಅವರ ಬೆಂಬಲಿಗರು ದಾರಿಯುದ್ಧಕ್ಕೂ ಹೂವಿನ ಹಾರ ಹಾಕಿ ಬೈಕ್ ಮೇಲೆ ಜಯಘೋಷ ಮೊಳಗಿಸುತ್ತಿದ್ದರು.ನಿಮಗೆ ರೋಡ್ ಶೋ ಮಾಡಲು ಅನುಮತಿ ನೀಡಿದವರು ಯಾರು? ತಕ್ಷಣವೇ ರೋಡ್ ಶೋ ನಿಲ್ಲಿಸಿ. ಇಲ್ಲದಿದ್ದರೇ ನಿಮ್ಮ ವಿರುದ್ಧ ದೂರು ದಾಖಲಿಸಬೇಕಾಗುತ್ತದೆ ಎಂದು ಕಾರಿನಲ್ಲಿದ್ದ ಇಮ್ರಾನ್ ಪಾಷಾ ಅವರಿಗೆ ಎಸ್ ಐ ಸತೀಶ್ ಖಡಕ್ ಎಚ್ಚರಿಕೆ ನೀಡಿದರು.
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದಲ್ಲದೇ, ಜನರು ಮಾಸ್ಕ್ ಆಗಲೀ, ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ.
ಒಂದು ಹೆಜ್ಜೆ ಮುಂದೆ ಇಟ್ಟರೂ ಸರಿ ಇರುವುದಿಲ್ಲ. ರೋಡ್ ಶೋ ಮಾಡುವುದು ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿದ ಎಸ್ ಐ ಸತೀಶ್ ಅವರೊಬ್ಬರೆ ಜೆಜೆ ನಗರ ಪೊಲೀಸ್ ಠಾಣೆ ಬಳಿ ಪಾಷಾ ಬೆಂಬಲಿಗರಿದ್ದ 150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ತಡೆದರು.ಈ ಸಂದರ್ಭದಲ್ಲಿ ಎಸ್‍ಐ ಹಾಗೂ ಬೆಂಬಲಿಗರ ಮಧ್ಯೆ ವಾಗ್ವಾದ ನಡೆಯಿತು. ಪೊಲೀಸರ ನಡೆಯಿಂದ ಆಕ್ರೋಶಗೊಂಡ ಇಮ್ರಾನ್ ಬೆಂಬಲಿಗರು ಜೋರಾಗಿ ವಾಹನ ಹಾರ್ನ್ ಮಾಡಿ ಗದ್ದಲ ಎಬ್ಬಿಸಿದ್ದು ಕಂಡು ಬಂತು.
ಗೊಂದಲದ ಹಿನ್ನೆಲೆಯಲ್ಲಿ ಪಾದರಾಯನಪುರಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಭೇಟಿ ನೀಡಿ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡರು.ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಜೆಜೆ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಪೊಲೀಸ್ ಆಯುಕ್ತರು ಜೆಜೆ ನಗರ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಘೋಷಿಸಿದರು.
ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಇಮ್ರಾನ್ ಪಾಷಾ ಮೆರವಣಿಗೆ ಮಾಡಿದ್ದು, ತಪ್ಪು. ಪಾದರಾಯನಪುರದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಆದರೂ, ಮೆರವಣಿಗೆ ಮಾಡಿರುವುದು ಕ್ರಿಮಿನಲ್ ಅಪರಾಧ. ಹೀಗಾಗಿ ಇಮ್ರಾನ್ ಪಾಷಾ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜೆಜೆನಗರ ಪೊಲೀಸ್ ಬಳಿ ಜಮಾಯಿಸಿದ್ದ ಇಮ್ರಾನ್ ಬೆಂಬಲಿಗರನ್ನು ಆಯುಕ್ತರು ಚದುರಿಸಿದರು.
ಭದ್ರತೆಗಾಗಿ ಸ್ಥಳದಲ್ಲಿ ಕೆಎಸ್‍ಆರ್‍ಪಿ ತುಕಡಿ ನಿಯೋಜಿಸಲಾಗಿದ್ದು, ಕೆಲ ನಿಮಿಷದಲ್ಲಿ ಇಡೀ ಏರಿಯಾ ಹಿಡಿತಕ್ಕೆ ಬರಬೇಕು ಎಂದು ಪೊಲೀಸ್ ಆಯುಕ್ತರು ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದಾರೆ. ಸದ್ಯ ಇಮ್ರಾನ್ ಪಾಷಾನನ್ನು ಅಜ್ಞಾತ ಸ್ಥಳದಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ