ಕಲ್ಪನೆ ವಿಸ್ತರಿಸುವ ಭರದಲ್ಲಿ ಇತಿಹಾಸಕ್ಕೆ ಧಕ್ಕೆ

ದಾವಣಗೆರೆ:

       ಕೆಲ ಬರಹಗಾರರು ತಮ್ಮ ಕಲ್ಪನೆಯನ್ನು ವಿಸ್ತರಿಸುವ ಧಾವಂತದಲ್ಲಿ ಇತಿಹಾಸದ ಸತ್ಯ ತಿರುಚಿ ಹೇಳುವ ಖಯಾಲಿ ಬೆಳೆಸಿಕೊಂಡಿದ್ದಾರೆಂದು ಚಿತ್ರದುರ್ಗದ ಪ್ರಾಚ್ಯವಸ್ತು ಸಂಶೋಧಕ ಡಾ.ಬಿ.ರಾಜಶೇಖರಪ್ಪ ಬೇಸರ ವ್ಯಕ್ತಪಡಿಸಿದರು.

       ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ವಿಶ್ವ ಕಲ್ಯಾಣ ಪರಿಸರ ಗ್ರಾಹಕ ಪರಿಷತ್, ಸಮಗ್ರ ಸಾಹಿತ್ಯ ವೇದಿಕೆ ಮತ್ತು ನವ ಚೈತನ್ಯ ಸೇವಾ ಸಂಸ್ಥೆ ಆಶ್ರಯದಲ್ಲಿ ಹಿರಿಯ ಸಾಹಿತಿ ಎಸ್.ಮಲ್ಲಿಕಾರ್ಜುನಪ್ಪ ಅವರ ಚಿತ್ರದುರ್ಗದ ದಳವಾಯಿ ಮುದ್ದಣ್ಣನ ಕುರಿತು ಬರೆದಿರುವ ಐತಿಹಾಸಿಕ ಕೃತಿ ‘ಅನಾವರಣ’ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಬರಹಗಾರ ಹೆಚ್ಚು ಕಲ್ಪನೆಯ ಆಳಕ್ಕೆ ಹೋದಂತೆ ಇತಿಹಾಸದ ಕಾಲಗರ್ಭದಲ್ಲಿರುವ ಸತ್ಯದಿಂದ ದೂರ ಸರಿಯುತ್ತಾ ಹೋಗುತ್ತಾನೆ. ಇತಿಹಾಸಕ್ಕೆ ಧಕ್ಕೆ ಬಂದರೂ ಪರವಾಗಿಲ್ಲ. ಆದರೆ, ತನ್ನಲ್ಲಿರುವ ಕಲ್ಪನೆಗೆ ಧಕ್ಕೆಯಾಗಬಾರದೆಂಬ ಧೋರಣೆ ಇರುವ ಬರಹಗಾರರಿಂದ ಇತಿಹಾಸದ ಸತ್ಯ ಸಂಗತಿಗಳು ಮರೆಮಾಚುತ್ತಿವೆ ಎಂದು ಹೇಳಿದರು.

       ಕವಿಗಳು, ಬರಹಗಾರರು ಕಥೆ, ಕಾದಂಬರಿ, ಸಿನಿಮಾಗಳ ಮೂಲಕ ಓದುಗರಿಗೆ, ಪ್ರೇಕ್ಷಕರಿಗೆ ಮನರಂಜನೆ ನೀಡುವ ಆತುರದಲ್ಲಿ ಇತಿಹಾಸದ ಸತ್ಯಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿಯಾಗಿದೆ. ನಾಡಿನ ಶ್ರೇಷ್ಠ ಕಾದಂಬರಿಕಾರ ಎನಿಸಿಕೊಂಡಿರುವ ಚಿತ್ರದುರ್ಗದ ತರಾಸು ಸಹ ತಮ್ಮ ‘ದುರ್ಗಾಸ್ತಮಾನ’ ಕಾದಂಬರಿಯಲ್ಲಿ ಕಲ್ಪನೆಗೆ ಹೆಚ್ಚು ಒತ್ತು ನೀಡಿ ಇತಿಹಾಸದ ಸತ್ಯಗಳನ್ನು ಮರೆ ಮಾಚಿದ್ದಾರೆ ಎಂದು ಆರೋಪಿಸಿದರು. 

         ಯಾವತ್ತೂ ಸಹ ಇತಿಹಾಸ ನಮ್ಮನ್ನು ಸೆಳೆಯುವ ವಸ್ತುವಿಷಯವಾಗಿದೆ. ಅದಕ್ಕೆ ಅಂಥಹ ಕುತೂಹಲಕಾರಿ ಶಕ್ತಿ ಇದೆ. ಚರಿತ್ರೆ ಎಂದರೆ, ಸದಾ ನಡೆಯುತ್ತಲೇ ಇರುವುದು ಎಂದರ್ಥ. ಹೀಗಾಗಿ ಚರಿತ್ರೆಗೆ ಸ್ಥಿರವಾದ ರೂಪ ಇಲ್ಲ. ಈ ಕ್ಷಣ ಗತಕಾಲಕ್ಕೆ ಹೋದಂತೆ ಚರಿತ್ರೆಯಾಗುತ್ತದೆ. ಆ ಕಾರಣಕ್ಕಾಗಿಯೇ ಸ್ವಾಮಿ ವಿವೇಕಾನಂದರು ಸಹ ಭೂತಕಾಲ ತಿಳಿದವನಿಂದ ಮಾತ್ರ ವರ್ತಮಾನ ತಿಳಿಯಲು ಸಾಧ್ಯ ಎಂದಿದ್ದರು. ಅಂಬೇಡ್ಕರ್ ಕೂಡ ಇತಿಹಾಸ ತಿಳಿಯದವರಿಂದ ಇತಿಹಾಸ ನಿರ್ಮಾಣ ಮಾಡಲು ಸಾಧ್ಯ ಎಂಬುದಾಗಿ ಪ್ರತಿಪಾದಿಸಿದ್ದರು. ಆದರೆ, ಇಂದು ಇತಿಹಾಸದ ಅರಿವು ಇಲ್ಲದ ಕೆಲ ಸಾಹಿತಿಗಳು, ಬರಹಗಾರರು ತಮ್ಮ ಆಲೋಚನೆ, ಕಲ್ಪನೆಯ ಲಹರಿಯನ್ನೇ ಇತಿಹಾಸವನ್ನಾಗಿ ಮಾಡಲು ಹೊರಟಿದ್ದಾರೆಂದು ವಿಷಾಧ ವ್ಯಕ್ತಪಡಿಸಿದರು.

         ಚಿತ್ರದುರ್ಗದ ಪಾಳೇಗಾರರು ಶುದ್ಧ ಹಾಗೂ ಪಾರದರ್ಶಕ ಆಡಳಿತಕ್ಕೆ ಹೆಸರಾದವರು. ಅಲ್ಲದೆ, ದೈವಭಕ್ತರು ಸಹ ಆಗಿದ್ದರು. ಆದರೆ, ಪಾಳೇಗಾರರನ್ನು ಕೆಲವರು ದರೋಡೆಕೋರರು, ದಕ್ಷತೆ ಇಲ್ಲದವರು ಎಂದೆಲ್ಲ ತಮ್ಮ ಬರಹಗಳಲ್ಲಿ ಚಿತ್ರಿಸಿದ್ದಾರೆ. ಇದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಮರುಕಪಟ್ಟರು.

          ಇತಿಹಾಸದ ಕೆಲ ಸತ್ಯಗಳ ಬಗ್ಗೆ ಸಂಶೋಧಕರಲ್ಲಿಯೇ ಭಿನ್ನಾಭಿಪ್ರಾಯಗಳಿರುವುದು ನಿಜಕ್ಕೂ ಶೋಚನೀಯ ಸಂಗತಿ. ಸಂಶೋಧಕರ ಮಧ್ಯೆ ಇರುವ ಅಸೂಯೆ, ಸ್ವಪ್ರತಿಷ್ಟೆಯೇ ಇದಕ್ಕೆ ಕಾರಣವಾಗಿದೆ. ನಾನು ಹೇಳಿದ್ದೆ, ಸತ್ಯ ಎನ್ನುವ ಅಹಂಕಾರವೂ ಇತಿಹಾಸ ಇರುವುದಕ್ಕಿಂ ಭಿನ್ನ ಆಲೋಚನೆ ಸೃಷ್ಟಿಸುತ್ತದೆ. ಇತಿಹಾಸದ ಒಡಲೊಳಗೆ ಹುದುಗಿರುವ ಸತ್ಯಕ್ಕೆ ಧಕ್ಕೆ ಬಾರದಂತೆ ನೋಡಿ ಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

         ಕೃತಿಕಾರ ಎಸ್.ಮಲ್ಲಿಕಾರ್ಜುನಪ್ಪ ಪ್ರಾಸ್ತಾವಿಕ ಮಾತನಾಡಿ, ತಮ್ಮ ಕೃತಿಯಲ್ಲಿ ಆಗಿರುವ ತಪ್ಪು ಒಪ್ಪುಗಳನ್ನು ವಿಮರ್ಶಕರು ಬೆಳಕಿಗೆ ತಂದರೆ, ಮುಕ್ತಮಂಠದಿಂದ ಸ್ವಾಗತಿಸಿ ಸರಿಪಡಿಸಿ ಕೊಳ್ಳುತ್ತೇನೆ ಎಂದು ಹೇಳಿದರು.

         ಸಮಗ್ರ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ರೇವಣ್ಣ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಯು.ಎನ್.ಸಂಗನಾಳ್ ಮಠ ಕೃತಿ ಲೋಕಾರ್ಪಣೆ ಮಾಡಿದರು. ನಿವೃತ್ತ ಇತಿಹಾಸ ಉಪನ್ಯಾಸಕ ಕೆ.ಸಿದ್ದಪ್ಪ ಕೃತಿಯನ್ನು ವಿಶ್ಲೇಷಿಸಿದರು. ಶಿಕ್ಷಕಿ ಶ್ರೀಮತಿ ಜ್ಯೋತಿಲಕ್ಷ್ಮೀ ಅವರು ಮಹಾತ್ಮಾಗಾಂಧೀಜಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿ ಕುರಿತು ಉಪನ್ಯಾಸ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap