ಸಂದರ್ಭ ಬಂದಾಗ ಹರಿಹರ-ಕೂಡಲಸಂಗಮ ಪೀಠ ಒಂದಾಗಲಿವೆ

ದಾವಣಗೆರೆ:

   ಹರಿಹರ ಪಂಚಮಸಾಲಿ ಪೀಠ, ಕೂಡಲ ಸಂಗಮ ಪೀಠವೆಂಬ ಭೇದವಿಲ್ಲ. ಸಮಯ-ಸಂದರ್ಭ ಬಂದಾಗ ಎಲ್ಲರೂ ಒಂದಾಗುತ್ತೇವೆ ಎಂದು ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ

    ಜಿಯಲ್ಲೆಯ ಹರಿಹರದ ಹೊರವಲಯದ ಪಂಚಮಸಾಲಿ ಪೀಠದ ಆವರಣದಲ್ಲಿ ಭಾನುವಾರ ಲಿಂಗೈಕ್ಯ ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ 81ನೇ ಜಯಂತ್ಯುತ್ಸವ ಹಾಗೂ ಪಂಚಮಸಾಲಿ ಸಮಾಜದ ನೂತನ ಶಾಸಕ, ಸಚಿವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

   ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠವನ್ನು ಕಾಯಕ, ದಾಸೋಹ, ಶಿವಯೋಗ ಕೇಂದ್ರವನ್ನಾಗಿಸುವ ಮೂಲಕ ಪುಣ್ಯಕ್ಷೇತ್ರವಾಗಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ. ಬೇರೆ ಬೇರೆ ಮಠಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ, ಇತಿಹಾಸವಿಲ್ಲದೇ ಶೀಘ್ರ ನಿರ್ಮಾಣಗೊಂಡು ಜಗದ್ವಿಖ್ಯಾತಿಯಾಗಿ ಇತಿಹಾಸ ಸೃಷ್ಟಿಸಿರುವ ಏಕೈಕ ಪೀಠ ಪಂಚಮಸಾಲಿ ಪೀಠ. ಇದು ಯಾವ ಸಮುದಾಯವನ್ನು ತುಳಿದು, ಟೀಕೆ ಮಾಡಿ ಬೆಳೆಯುವ ಪೀಠವಲ್ಲ. ಸರ್ವಧರ್ಮವನ್ನು ಒಗ್ಗೂಡಿಸಿಕೊಂಡು ಬೆಳೆಯುತ್ತಿರುವ ಪೀಠವಾಗಿದೆ. ಆದ್ದರಿಂದಲೇ ನಮ್ಮ ನಾಮಫಲಕಗಳಲ್ಲಿ ಸಮಾನತೆ ಸಾರಿದ ಬಸವಣ್ಣ, ರೇಣುಕಾಚಾರ್ಯ, ಅಕ್ಕಮಹಾದೇವಿಯವರ ಭಾವಚಿತ್ರಗಳಿವೆ ಎಂದರು.

    ಯೋಗ ಯುಕ್ತ, ರೋಗ ಮುಕ್ತ ಸಮಾಜ ನಮ್ಮ ಕನಸಾಗಿದೆ. ಅಕ್ಟೋಬರ್ 9ರಿಂದ ನಮ್ಮ ಪೀಠದಲ್ಲಿ 148 ಖಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸಾ ಕೇಂದ್ರವನ್ನು ಆರಂಭಿಸುವ ಮೂಲಕ ಪೀಠ ಯೋಗ ಪೀಠವಾಗಲಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲಿಗೆ ನಾನು ಬಂದು ಇಂದಿಗೆ ನೂರು ದಿನಗಳಾದವು. ಅಂದು ಒಂದು ತಂದೆ-ತಾಯಿ ಬಿಟ್ಟು ಬಂದಿದ್ದಕ್ಕೆ ಇಂದು 80 ಲಕ್ಷ ಸಮಾಜದ ತಂದೆ-ತಾಯಿಯಂದಿರು ಸಿಕ್ಕಿದ್ದಾರೆ ಎಂದರು.

    ನನಗೆ ಆದರ್ಶ ಮಠ ಸಿರಿಗೆರೆಯಾದರೆ, ಆದಿಚುಂಚನಗಿರಿ ಸ್ವಾಮೀಜಿ ಹಾಗೂ ಶೃಂಗೇರಿ ಪೀಠ ಸ್ವಾಮೀಜಿಗಳು ಆದರ್ಶ ವ್ಯಕ್ತಿಗಳಾಗಿದ್ದಾರೆ. ನಮ್ಮ ಸಮಾಜದ ಲಕ್ಷ್ಮೀ ಹೆಬ್ಬಾಳಕರ್ ಕೇವಲ ಬೆಳಗಾವಿ ಶಾಸಕಿಯಲ್ಲ. ಇಡೀ ಸಮಾಜದ ಮನೆಮಗಳು. ಅಂದಿನ ಪಂಚಮಸಾಲಿ ವೀರ ಕಿತ್ತೂರು ಚೆನ್ನಮ್ಮನಂತೆ ಇಂದಿನ ಚೆನ್ನಮ್ಮ ನಮ್ಮ ಲಕ್ಷ್ಮೀ ಹೆಬ್ಬಾಳಕರ್. ಅವರ ಉನ್ನತಿಗೆ ಸಮಾಜ ಸದಾ ಬೆಂಗಾವಲಾಗಿರುತ್ತದೆ ಎಂದರು.

      ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಪಂಚಮಸಾಲಿ ಸಮಾಜ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಸಮಾಜ. ಆದ್ದರಿಂದ ಕೂಡಲಸಂಗಮ ಹಾಗೂ ಹರಿಹರ ಪೀಠಗಳ ಸಂಗಮವಾದರೆ ಸಮಾಜಕ್ಕೆ ಮತ್ತಷ್ಟು ಬಲ ಬರುತ್ತದೆ. ಈ ನಿಟ್ಟಿನಲ್ಲಿ ಶ್ರೀಗಳು, ಹಿರಿಯರು ಯೋಚಿಸಬೇಕು. ಬೆಳಗಾವಿಯಿಂದ ಈವರೆಗೆ ಕಾಂಗ್ರೆಸ್‍ನಿಂದ ಯಾರೊಬ್ಬ ಲಿಂಗಾಯಿತರು ಈವರೆಗೆ ಶಾಸಕಿಯಾಗಿಲ್ಲ. ನಮ್ಮ ಸಮುದಾಯ ಕಡಿಮೆಯಿದ್ದರೂ ಮರಾಠಿಯವರು ನನ್ನ ಗೆಲವಿಗೆ ಕೈಜೋಡಿಸಿದರು. ಇದಕ್ಕೆ ಕಾರಣ ನಮ್ಮ ಸಮಾಜದ ಆದರ್ಶ, ಸಂಸ್ಕøತಿ ಎಂದರು.

      ಬೀಳಗಿ ಶಾಸಕ ಮುರುಗೇಶ್ ನಿರಾಣಿ ಮಾತನಾಡಿ, ಆರೂವರೆ ಕೋಟಿ ಕನ್ನಡಿಗರಲ್ಲಿ 80 ಲಕ್ಷ ಪಂಚಮಸಾಲಿಗಳಿದ್ದಾರೆ. ನಾವು ಗುಡಿಗಿದರೆ ವಿಧಾನಸೌಧ ನಡುಗುತ್ತದೆ. ವೀರಶೈವ ಲಿಂಗಾಯಿತರು ಒಟ್ಟು 58 ಶಾಸಕರಿದ್ದು, ಅದರಲ್ಲಿ 21 ಜನ ಶಾಸಕರು ಪಂಚಮಸಾಲಿಗಳು. ಆದರೂ, ಜನಸಂಖ್ಯೆಗನುಗುಣವಾಗಿ ನಮಗೆ ಪ್ರಾತಿನಿಧ್ಯ ದೊರೆತಿಲ್ಲ. ಇದಕ್ಕೆ ಕಾರಣ ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆ ಎಂದು ಬೇಸರ ವ್ಯಕ್ತಪಡಿಸಿದರು.

    ಮೀಸಲಾತಿ ಕೆಲವೇ ಸಮುದಾಯಕ್ಕೆ ಮೀಸಲಾಗಿದೆ. ಮೀಸಲಾತಿ ಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನಮ್ಮ ಸಮುದಾಯದಲ್ಲೂ ಅತ್ಯಂತ ಕಡುಬಡವರಿದ್ದಾರೆ. ಅಂತಹವರಿಗೂ ಮೀಸಲಾತಿ ದೊರೆಯಬೇಕು. ಪಂಚಮಸಾಲಿಗಳಿಗೂ 2ಎ ಕೆಟಗರಿ, ಒಬಿಸಿ ದೊರೆತರೆ ಅನುಕೂಲ ಎಂದರು.

    ಪೀಠದ ಪ್ರಧಾನ ಧರ್ಮದರ್ಶಿ ಬಿಸಿ ಉಮಾಪತಿ ಪ್ರಾಸ್ತಾವಿಕ ಮಾತನಾಡಿದರು. ಆರೋಗ್ಯ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಸಿಸಿ ಪಾಟೀಲ, ಬಸವರಾಜ ಬೊಮ್ಮಾಯಿ, ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ್ ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಎಲ್ಲಾ ಶಾಸಕರು, ಸಚಿವರನ್ನು ಸನ್ಮಾನಿಸಲಾಯಿತು.

     ಕಾರ್ಯಕ್ರಮದಲ್ಲಿ ಪೀಠದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಶಾಸಕರಾದ ಕಳಕಪ್ಪ ಬಂಡಿ, ಅರವಿಂದ ಲಿಂಬಾವಳಿ, ವಿರೂಪಾಕ್ಷಪ್ಪ ಬಳ್ಳಾರಿ, ಸಂಸದ ಶಿವಕುಮಾರ್ ಉದಾಸಿ, ಹನಸಿ ಸಿದ್ದೇಶ್, ನಾಗನಗೌಡರು, ಮಲ್ಲಣ್ಣ ಅಂಗಡಿ, ಗುರುಶಾಂತಪ್ಪ, ಬಿ. ನಾಗನಗೌಡರು, ಪಿ.ಡಿ. ಶಿರೂರು, ಪ್ರೇಮಾ ಮತ್ತಿತರರಿದ್ದರು.ಚಂದ್ರಶೇಖರ್ ಪೂಜಾರ್ ಸ್ವಾಗತಿಸಿದರು. ಸುನೀತಾ ಪ್ರಾರ್ಥಿಸಿದರು. ಮಹಾಂತೇಶ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap