ಹೊನ್ನಾಳಿ:
ರಾಜಕೀಯ ಮೇಲಾಟದಲ್ಲಿ ರಾಜ್ಯದ ಜನಸಾಮಾನ್ಯರ ಗೋಳು ಹೇಳತೀರದಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಹೇಳಿದರು.
ಇಲ್ಲಿನ ಗುರುಭವನದಲ್ಲಿ ಬುಧವಾರ ತಾಲೂಕು ಅಖಂಡ ಕರ್ನಾಟಕ ರೈತ ಸಂಘ(ಪಕ್ಷಾತೀತ)ದ ವತಿಯಿಂದ ಹಮ್ಮಿಕೊಂಡ 37ನೇ ವರ್ಷದ ರೈತ ಹುತಾತ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ಎರಡು ತಿಂಗಳುಗಳಿಂದಲೂ ರಾಜಕಾರಣಿಗಳು ಹಾಗೂ ಸರಕಾರ ಚುನಾವಣೆಗಳಲ್ಲಿ ಬಿಜಿಯಾಗಿವೆ. ಬೇಸಿಗೆಯಲ್ಲಿ ರೈತರು ಎದುರಿಸಬಹುದಾದ ಬರಗಾಲ ಹಾಗೂ ಕುಡಿಯುವ ನೀರಿನ ತೊಂದರೆ ಮತ್ತಿತರ ಸಮಸ್ಯೆಗಳ ಬಗ್ಗೆ ಸರಕಾರ ಗಮನಹರಿಸದೇ ಚುನಾವಣೆ, ನೀತಿಸಂಹಿತೆ, ಫಲಿತಾಂಶಗಳ ಬಗ್ಗೆ ಚಿಂತಿಸುತ್ತಾ ಕಾಲಹರಣ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಮಗನ ಗೆಲುವಿಗೆ ದೇವರ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಮತಯಂತ್ರಗಳಲ್ಲಿ ಅಡಗಿರುವ ಅಭ್ಯರ್ಥಿಯ ಭವಿಷ್ಯವನ್ನು ದೇವರು ಬದಲಿಸಲು ಸಾಧ್ಯವೇ ಎಂಬುದಾಗಿ ಪ್ರಶ್ನಿಸಿದರು. ಮುಂಬರುವ ದಿನಗಳಲ್ಲಾದರೂ ಆಳುವ ಜನಪ್ರತಿನಿಧಿಗಳು ಕಾಲಹರಣ ಮಾಡದೇ ನೀರಿನ ಬವಣೆಯನ್ನು ನಿವಾರಿಸಲು ಮುಂದಾಗುವಂತೆ ಒತ್ತಾಯಿಸಿದರು. ಸಾಲ ಮನ್ನಾ ಯೋಜನೆಯ ಅನುಷ್ಠಾನ ವೇಳೆ ಜಿಲ್ಲೆ ಜಿಲ್ಲೆಗಳಲ್ಲಿ ತಾರತಮ್ಯ ನಡೆಸದೇ ಸಣ್ಣ, ದೊಡ್ಡ ರೈತರೆನ್ನದೇ ಸಮರ್ಪಕವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ದೊಡ್ಡೆರೇಹಳ್ಳಿ ನಾಗರಾಜಪ್ಪ ಮಾತನಾಡಿ, ಮಳೆ ಬರದೇ ಮೋಡಗಳ ಕಡೆ ಮುಖ ಮಾಡಿರುವ ರೈತನಿಗೆ ಮಳೆ ಬಿದ್ದ ತಕ್ಷಣವೇ ಗುಣಮಟ್ಟದ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರಗಳನ್ನು ಸರಕಾರ ಸಮರ್ಪಕವಾಗಿ ವಿತರಿಸಬೇಕು. ಜೊತೆಗೆ ಬಗರ್‍ಹುಕುಂ ಸಮಿತಿ ರಚಿಸಬೇಕು. ತಾಲೂಕಿನ ಸರ್ವೇ ಇಲಾಖೆಯಲ್ಲಿನ ಕಾರ್ಯಗಳು ಮಂದಗತಿಯಲ್ಲಿ ಸಾಗಿದ್ದು, ರೈತರು ಅನೇಕ ಸಮಸ್ಯೆ ಎದುರಿಸುವಂತಾಗಿದೆ. ಇದನ್ನು ತಪ್ಪಿಸಬೇಕು. ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನವನ್ನು 6 ರೂ.ಗಳಿಂದ 10 ರೂ.ಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ನ್ಯಾಮತಿ ತಾಲೂಕು ಅಧ್ಯಕ್ಷ ಬೆಳಗುತ್ತಿ ಬಿ.ಎಚ್. ಉಮೇಶ್ ಮಾತನಾಡಿ, ನ್ಯಾಮತಿ ತಾಲೂಕಿನ ವ್ಯಾಪ್ತಿಯಲ್ಲಿರುವ ಸುಮಾರು 50 ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರಕಾರ ಅಂಗೀಕಾರ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಅರಬಗಟ್ಟೆ ಕೆ.ಸಿ. ಬಸಪ್ಪ ಮಾತನಾಡಿ, ರೈತರ ಚಿಂತನೆಗಳಿಗೆ ಸರಕಾರಿ ಅಧಿಕಾರಿಗಳು ಸ್ಪಂದಿಸದೇ ರೈತರನ್ನು ಗುಲಾಮರಂತೆ ಕಾಣುತ್ತಿದ್ದಾರೆ.
ಇದನ್ನು ವಿರೋಧಿಸಲು ರೈತ ಸಂಘಟನೆ ಬಲವರ್ಧನೆಗೊಳ್ಳಬೇಕಿದೆ. ರೆರ್ಸಾಟ ರಾಜಕಾರಣಕ್ಕೆ ಮುಂದಾಗುವ ಸರಕಾರಗಳು ರೈತರನ್ನು ಸಾವಿನ ದವಡೆಗೆ ದೂಡುತ್ತಿವೆ. ರೈತರ ಅಭಿವೃದ್ಧಿಪರ ಕೆಲಸಗಳಿಗೆ ಕೇಂದ್ರ ಸರಕಾರವು ರಾಜ್ಯದ ಮೇಲೆ, ರಾಜ್ಯ ಸರಕಾರವು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರವೃತ್ತಿ ಕೊನೆಗೊಳ್ಳಬೇಕು ಎಂದು ತಿಳಿಸಿದರು.
ರೈತ ಮುಖಂಡರಾದ ಹಾವೇರಿಯ ಪ್ರಕಾಶ್ ಬಾರ್ಕಿ, ಹಿರೇಕೆರೂರಿನ ಬಸವನಗೌಡ, ಹೊಸಜೋಗದ ಮುರುಗೇಶಪ್ಪ, ಸುಂಕದಕಟ್ಟೆ ಕರಿಬಸಪ್ಪ, ನೀಲಕಂಠ ರಾಯ್ಕರ್, ಗೋಪಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.ಪ್ರಗತಿಪರ ಶೇಂಗಾ ಬೆಳೆಗಾರ ರಾಕೇಶ್, ಅಧಿಕಾರಿ ಸೊರಟೂರು ಎಚ್.ಬಿ. ಸಂತೋಷ್‍ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮೊದಲು ಎಚ್. ಕಡದಕಟ್ಟೆ ವೃತ್ತದ ಎಚ್.ಎಸ್. ರುದ್ರಪ್ಪನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರೈತ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.