ಸದ್ಯದ ಸ್ಥಿತಿಯಲ್ಲಿ ಕಾವ್ಯ ಬರೆಯುವುದು ಕಷ್ಟದ ಕೆಲಸ: ಡಾ.ಅಗ್ರಹಾರ ಕೃಷ್ಣಮೂರ್ತಿ

ತುಮಕೂರು

      ಸಮಕಾಲೀನ ಭಾರತದ ಸಾಂಸ್ಕೃತಿಕ-ರಾಜಕೀಯ ಸಂದರ್ಭದಲ್ಲಿ ಕಾವ್ಯ ಬರೆಯುವುದು ಸವಾಲಿನ ಕೆಲಸವಾಗಿದ್ದು, ಕವಿ ಅನಿವಾರ್ಯವಾಗಿ ಸಂಕೇತದ ಮೊರೆ ಹೋಗಬೇಕಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಹಾಗೂ ವಿಮರ್ಶಕ ಡಾ.ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದರು.

     ಭಾನುವಾರ ತುಮಕೂರು ನಗರದ ಕನ್ನಡಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗರಿಕೆ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಉಪನ್ಯಾಸಕ ಎಚ್.ಗೋವಿಂದಯ್ಯ ದ್ವಾರನಕುಂಟೆ ಅವರ ಉರಿದ ಮರ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

      ಸದ್ಯದ ಸ್ಥಿತಿಯಲ್ಲಿ ಕಾವ್ಯ ಕಟ್ಟುವುದು ಕಷ್ಟದ ಕೆಲಸ. ಭಿನ್ನ ಪರಿಸ್ಥಿತಿಯಲ್ಲಿ ಕವಿ ಪರಿಭಾಷೆಯ ಮೂಲಕ ಕಾವ್ಯ ಕಟ್ಟುವಂತಾಗಿದೆ. ದಲಿತ ಅನುಭವ ಲೋಕದಿಂದ ಬಂದು ಕಾವ್ಯ ರಚನೆ ಮಾಡುವುದು ಭಾವಪ್ರಪಂಚವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಉರಿದ ಮರ ಕವನ ಸಂಕಲನ ಜೈವಿಕ ವಸ್ತುವನ್ನು ಒಳಗೊಂಡಿದೆ. ಇದು ವೃಕ್ಷ ಸಂಪತ್ತಿನ ನಾಶದ ಕುರಿತು ಮಾತನಾಡುತ್ತದೆ. ಭಾವ ಪ್ರಪಂಚವನ್ನು ವಿಸ್ತರಿಸಲು ಜೈವಿಕ ಅಂಶಗಳು ಸಹಕಾರಿಯಾಗಿ ಬೆಳೆಯುತ್ತ ಹೋಗುತ್ತದೆ. ಉರಿದ ಮರ ದೇಶದ ಅವನತಿಯನ್ನು ಸೂಚಿಸುತ್ತದೆ. ಗೋವಿಂದಯ್ಯನವರ ಕಾವ್ಯದಲ್ಲಿ ದಲಿತರ ನೋವು, ದುಃಖ, ದುಮ್ಮಾನ, ಶೋಷಣೆ ದನಿಯಾಗಿ ಬಂದಿದೆ. ಕವಿ ಬರೆದುದೆಲ್ಲವೂ ಕಲಾಕೃತಿಗಳೇ ಆಗಿವೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

     ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಕೆ.ಬಿ.ಸಿದ್ದಯ್ಯ, ದಲಿತ ಶಬ್ದ ಇತ್ತೀಚಿನ ದಿನಗಳಲ್ಲಿ ಮಹತ್ವದ ಚರ್ಚೆಗೆ ಒಳಗಾಗುತ್ತಿದೆ. ದಲಿತ ಶಬ್ದವನ್ನು ಕಡತಗಳಿಂದ ತೆಗೆದುಹಾಕುವಂತಹ ಕೆಲಸ ನಡೆಯುತ್ತಿದೆ. ದಲಿತ ಪದವನ್ನು ವ್ಯಾಖ್ಯಾನಿಸುವ ರೀತಿಯೇ ಬದಲಾಗಿದೆ. ದಲಿತ ಪದ ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ. ತುಳಿತಕ್ಕೊಳಗಾದ ಎಲ್ಲಾ ಜಾತಿಗಳು ದಲಿತ ಪದದಲ್ಲಿ ಸೇರಿ ಹೋಗುತ್ತವೆ ಎಂದು ಹೇಳಿದರು

        ಕೇಂದ್ರ ಸರ್ಕಾರ ದಲಿತ ಪದವನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದೆ. ಇದರ ಹಿಂದೆ ರಾಜಕಾರಣ ಇದೆ. ದಲಿತ ಜಾತಿ ಸೂಚಕವಲ್ಲ. ಅದು ವಿಶಾರ್ಥವನ್ನು ಒಳಗೊಂಡಿದೆ. ದಲಿತರು ಎಂಬ ಪದ ಎಲ್ಲಾ ಜಾತಿಯ ದಮನಿತರನ್ನು ಒಳಗೊಳ್ಳುತ್ತದೆ. ಅದೇ ಕಾರಣಕ್ಕೆ ಆ ಪದವನ್ನು ಕೈಬಿಡಲು ಚಿಂತನೆ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಅಭಿಪ್ರಾಯಪಟ್ಟರು.

     ಕಣ್ಣೆದುರಿನ ಲೋಕ ಮತ್ತು ಬೆನ್ನ ಹಿಂದೆ ಕಟ್ಟಿಕೊಂಡಿರುವ ಲೋಕದ ನಡುವೆ ನಿಂತು ಕಾವ್ಯ ಕಟ್ಟಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿದೆ. ಆದ್ದರಿಂದ ಇಂದು ಕಾವ್ಯ ಕಟ್ಟುವುದು ದೊಡ್ಡ ಸವಾಲಿನ ಕೆಲಸ. ಕವಿ ಈ ಎರಡು ಸನ್ನಿವೇಶಗಳನ್ನು ಎದುರುಗೊಂಡು ಕಾವ್ಯ ಕಟ್ಟಬೇಕಾಗಿದೆ. ಆದರೆ ಇಂದು ಕವಿಗಳು ಬೆನ್ನಹಿಂದೆ ಕಟ್ಟಿಕೊಂಡಿರುವ ಲೋಕವನ್ನು ಮರೆಯುತ್ತಿದ್ದಾರೆ. ಅನುಭವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

      ಕಾರ್ಯಕ್ರಮದಲ್ಲಿ ಪ್ರಜಾಪ್ರಗತಿ ದಿನಪತ್ರಿಕೆ ಸಂಪಾದಕ ಎಸ್.ನಾಗಣ್ಣ, ಲೇಖಕ ಡಾ.ಮುದ್ದವೀರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಕೃತಿಯ ಕರ್ತೃ ಎಚ್.ಗೋವಿಂದಯ್ಯ ದ್ವಾರನಕುಂಟೆ, ಪ್ರಾಂಶುಪಾಲ ಡಾ.ಮುತ್ತೇಗೌಡ, ಪ್ರಕಾಶಕ ಮತ್ತು ಪತ್ರಕರ್ತ ಕೆ.ಈ.ಸಿದ್ದಯ್ಯ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಕೆ.ರವಿಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಜಿ.ಶಾಂತರಾಜ್ ನಿರೂಪಿಸಿದರು. ಉಪನ್ಯಾಸಕ ಹಾಗೂ ಜಾನಪದ ಗಾಯಕ ಕಂಟಲಗೆರೆ ಸಣ್ಣಹೊನ್ನಯ್ಯ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap