ಚಳ್ಳಕೆರೆ
ರಾಜ್ಯ ಸರ್ಕಾರ ಪ್ರತಿವರ್ಷವೂ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ದೃಷ್ಠಿಯಿಂದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ರೈತ ಸಮುದಾಯ ಹೆಚ್ಚು ಬೆಳೆಯನ್ನು ಬೆಳೆದು ಆರ್ಥಿಕ ಸಬಲತೆಯನ್ನು ಕಾಣುವ ದೃಷ್ಠಿಯಿಂದ ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕೆಂದು ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ತಿಳಿಸಿದರು.
ಅವರು, ಮಂಗಳವಾರ ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಾಲ್ಲೂಕಿನ ಸಮಸ್ತ ರೈತರಿಗೆ ಕೃಷಿ ಬೆಳವಣಿಗೆ ಕುರಿತು ಅನುಸರಿಸಬೇಕಾದ ಮಾಹಿತಿಯನ್ನು ತಿಳಿಸುವ ಸಮಗ್ರ ಕೃಷಿ ಅಭಿಯಾನ-2019ರ ಜಾಗೃತಿ ಜಾಥ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿ ಇಲಾಖೆಯೂ ಸೇರಿದಂತೆ ಹಲವಾರು ಇಲಾಖೆಗಳು ಕೃಷಿ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಬೇಕಿದ್ದು, ರೈತರು ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕು. ಕೃಷಿ ಇಲಾಖೆಯೂ ಸೇರಿದಂತೆ ಎಲ್ಲಾ ಇಲಾಖೆಗಳ ಯೋಜನೆಗಳು ಫಲಪ್ರದವಾಗಬೇಕಾದಲ್ಲಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಸಮಗ್ರ ಕೃಷಿ ಅಭಿಯಾನ ಜಾಗೃತಿ ಜಾಥ ಮೂಲಕ ರೈತರಿಗೆ ಸುಲಭವಾಗಿ ಸಿಗುವ ಯೋಜನೆಗಳ ಸೌಲಭ್ಯಗಳನ್ನು ಹಳ್ಳಿ ಹಳ್ಳಿಗೂ ತಿಳಿಸುವ ಸಲುವಾಗಿ ಈ ಅಭಿಯಾನವನ್ನು ಇಲಾಖೆ ಏರ್ಪಡಿಸಿದೆ. ರೈತರು ತಮ್ಮ ಎಲ್ಲಾ ಕೃಷಿ ಚಟುವಟಿಕೆಗಳ ಚಾಲನೆಗೆ ಮುನ್ನ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ಪಡೆಯಬೇಕು. ಬೆಳೆ ವಿಮೆ ಯೋಜನೆಯಡಿಯಲ್ಲಿ ತಮ್ಮ ದಾಖಲಾತಿಗಳನ್ನು ನೀಡಿ ಹೆಸರು ನೊಂದಾಯಿಸಿ ಕೊಳ್ಳಬೇಕು. ಯಾವುದೇ ಹಂತದಲ್ಲೂ ರೈತರು ಉದಾಸಿನ ತೋರದೆ ಕೃಷಿ ಇಲಾಖೆಯ ಸೌಲಭ್ಯಯವನ್ನು ಪಡೆಯಲು ಮುಂದಾಗಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಎನ್.ಮಾರುತಿ, ರೈತರು ಕೃಷಿ ಇಲಾಖೆಯೂ ಸೇರಿದಂತೆ ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ ಇಲಾಖೆಯ ಸೌಲಭ್ಯವನ್ನು ಪಡೆಯಲು ಪದೇ ಪದೇ ದಾಖಲಾತಿಗಳನ್ನು ಹಿಡಿದು ಕಚೇರಿಗೆ ಅಲೆಯಬೇಕಿಲ್ಲ. ಸರ್ಕಾರ ಪ್ರಸ್ತುತ ವರ್ಷದಿಂದಲೇ ರೈತರ ಸಹಾಯಕ್ಕಾಗಿ ಪ್ರೂಟ್ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆ ಅನ್ವಯ ಒಂದು ಬಾರಿ ರೈತ ಸಂಪರ್ಕ ಕೇಂದ್ರದಲಿ ನೊಂದಾಣೆಯಾದಲ್ಲಿ ರೈತರಿಗೆ ಖಾಯಂ ಸಂಖ್ಯೆಯನ್ನು ನೀಡಲಿದ್ದು, ಈ ಸಂಖ್ಯೆಯ ಆಧಾರದ ಮೇಲೆ ರೈತರ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಜಮೀನ ಪಹಣಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಭಾವಚಿತ್ರ, ಜಾತಿ ಪ್ರಮಾಣ ಪತ್ರಗಳನ್ನು ಪ್ರೂಟ್ ತಂತ್ರಾಂಶದಡಿ ಆಗಸ್ಟ್ 31ರೊಳಗೆ ನೊಂದಾಯಿಸಿಕೊಳ್ಳಬೇಕು. ನೊಂದಾಯಿತ ರೈತರು ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಕಿರಣ್, ಗಿರೀಶ್, ಕೃಷಿ ಅನುವುಗಾರರು ಉಪಸ್ಥಿತರಿದ್ದರು.