ದಾವಣಗೆರೆ
ಭಾನುವಾರ ರಾತ್ರಿ ಸುರಿದ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಬುಧವಾರ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರೊಂದಿಗೆ ತಾಲ್ಲೂಕಿನ ಪುಟಗನಾಳ್, ಅರಸಾಪುರ ತಾಂಡ ಹಾಗೂ ಮಾಗಾನಹಳ್ಳಿ ಭತ್ತದ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಮಳೆಯಿಂದ ಹಾನಿಗೊಳಗಾಗಿರುವ ಸಂತ್ರಸ್ತರ ಸಂಕಷ್ಟ ಆಲಿಸಿ, ಸಾಂತ್ವಾನ ಹೇಳಿದರು.
ತಾಲೂಕಿನ ಪುಟಗನಾಳು ಗ್ರಾಮದ ನಾಗರಾಜ ನಾಯ್ಕ ಎಂಬುವರ ಮನೆ ಸಂಪೂರ್ಣ ನೆಲಸಮವಾಗಿದ್ದು, ಈ ಮನೆಯ ಪೀರಿ ಬಾಯಿ ಎಂಬವವರು ಮೃತಪಟ್ಟಿದ್ದಾರೆ. ಅವರಿಗೆ ಆದಷ್ಟು ಬೇಗ ಪರಿಹಾರ ನೀಡಬೇಕೆಂದು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು, ಅವರ ಬ್ಯಾಂಕ್ ಮಾಹಿತಿ ಪಡೆದುಕೊಂಡು ಇಂದೇ ಆರ್.ಟಿ.ಜಿ.ಎಸ್ ಮುಖಾಂತರ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇವೇಳೆ ಗ್ರಾಮಸ್ಥರು, ನಮ್ಮ ಊರಿಗೆ ಸ್ಮಶಾನ ಇಲ್ಲ. ಹೀಗಾಗಿ, ಯಾರಾದರೂ ಸತ್ತರೆ ಅಂತ್ಯಕ್ರಿಯೆ ನಡೆಸಲು ಪರದಾಡಬೇಕಾಗುತ್ತದೆ. ಆದ್ದರಿಂದ ಸ್ಮಶಾನಕ್ಕೆ ಜಾಗ ಒದಗಿಸಬೇಕೆಂದು ಮನವಿ ಮಾಡಿದರು.ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಈಗಾಗಲೇ ಒಂದು ಎಕರೆ ಜಮೀನು ಗುರುತಿಸಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಜಾಗ ನೀಡಲಾಗುವುದು ಎಂದರು.
ಆಗ ಗ್ರಾಮಸ್ಥರು ಒಂದು ಎಕರೆ ಜಾಗ ಸಾಕಾಗುವುದಿಲ್ಲ. ಕನಿಷ್ಟ 2 ಎಕರೆ ನೀಡಬೇಕೆಂದು ಮನವಿ ಮಾಡಿದರು. ನಂತರ ಅರಸಾಪುರ ತಾಂಡದ ಭೀಮಾ ನಾಯ್ಕ ಮತ್ತು ಲಕ್ಷ್ಮೀಬಾಯಿ ಎಂಬುವವರ ಮನೆಗಳು ಭಾಗಶಃ ಕುಸಿದಿರುವುದನ್ನು ವೀಕ್ಷಿಸಿ, ಮಾಗಾನಹಳ್ಳಿಯಲ್ಲಿ ಜೋರು ಮಳೆಗೆ ತೆನೆ ಹಂತಕ್ಕೆ ಬಂದು ಬಿದ್ದಿರುವ ಭತ್ತದ ಗದ್ದೆಗಳನ್ನು ವೀಕ್ಷಿಸಿದರು.
ಈ ವೇಳೆ ರೈತ ಬಿ.ತುಕಾರಾಂ, ನಾವು ಮೂವರು ಸಹೋದರರಿದ್ದು, ಒಟ್ಟು 8 ಎಕರೆ ಭತ್ತದ ಗದ್ದೆ ಹಾಳಾಗಿದೆ. ಈ ಹಿಂದಿನ ಬೆಳೆಯೂ ಈ ಹಂತಕ್ಕೆ ಬಂದಾಗ ಇದೇ ಪರಿಸ್ಥಿತಿ ಬಂದಿದ್ದರಿಂದ ಆ ಬೆಳೆಯೂ ಕೈಗೆ ಸಿಗಲಿಲ್ಲ. ಹಿಂದಿನ ಬೆಳೆಯ ಪರಿಹಾರವೂ ಬಂದಿಲ್ಲ. ಹಾಗಾಗಿ 2 ಬೆಳೆಯ ಪರಿಹಾರವನ್ನು ಆದಷ್ಟು ಬೇಗ ನೀಡುವಂತೆ ಮನವಿ ಮಾಡಿದರು.ನಂತರ ದಾವಣಗೆರೆ ನಗರದ ಶಂಕರ ವಿಹಾರ ಬಡಾವಣೆಗೆ ಭೇಟಿ ನೀಡಿ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು .ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ತಹಶೀಲ್ದಾರ್ ಸಂತೋಷ್‍ಕುಮಾರ್, ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.