ತುಮಕೂರು
ಕುಂಚಿಟಿಗ ಜನಾಂಗವನ್ನು ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಮತ್ತು ಜನಾಂಗದ ವಿವಿಧ ಬೇಡಿಕೆಗಳ ಕುರಿತು ಏ.4 ರಂದು ಸಂಘದ ಆಶ್ರಯದಲ್ಲಿ ಕುಂಚಿಟಿಗ ಜನಾಂಗದ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಕರ್ನಾಟಕ ರಾಜ್ಯದಲ್ಲಿ ಕುಂಚಿಟಿಗ ಜನಾಂಗವು ಅಲ್ಪಸಂಖ್ಯಾತರಾಗಿದ್ದು, ರಾಜ್ಯದ ತುಮಕೂರು, ಚಿತ್ರದುರ್ಗ, ಮೈಸೂರು, ಬೆಂಗಳೂರು, ಶಿವಮೊಗ್ಗ, ಹಾವೇರಿ, ಬಳ್ಳಾರಿ ಸೇರಿದಂತೆ ರಾಜ್ಯದ ಇನ್ನೂ ಹಲವು ಭಾಗಗಳಲ್ಲಿ ಚದುರಿದಂತೆ ವಾಸಿಸುತ್ತಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದ ಅತಿ ಸೂಕ್ಷ್ಮ ಜನಾಂಗವಾಗಿರುತ್ತದೆ.
ಜೀವನೋಪಾಯಕ್ಕೆ ಬಹುತೇಕ ಕೃಷಿಯಾಧಾರಿತ ಕಸುಬುಗಳನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದು, ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಜನಾಂಗವನ್ನು ಪ್ರತ್ಯೇಕವಾಗಿ ಕುಂಚಿಟಿಗವೆಂದೇ ಪರಿಗಣಿಸಿದ್ದು, ಶೈಕ್ಷಣಿಕವಾಗಿ ಮತ್ತು ಉದ್ಯೋಗ ಆಧಾರಿತ ನೇಮಕಾತಿಗಳಲ್ಲಿ ವರ್ಗ-3 ಎ ಗುಂಪಿನ ಸವಲತ್ತುಗಳನ್ನು ಪಡೆಯಲಾಗುತ್ತಿದೆ.
ಆದರೆ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕುಂಚಿಟಿಗ ಜನಾಂಗವನ್ನು ಕೈಬಿಟ್ಟಿದ್ದು ಹಲವು ವರ್ಷಗಳಿಂದ ಈ ಬಗ್ಗೆ ಹೋರಾಟಗಳ ಮೂಲಕ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಒತ್ತಡ ತಂದಾಗ್ಯೂ ಕೆಲ ಕಾಣದ ಕೈಗಳು ನಡೆಸುವ ಹುನ್ನಾರದಿಂದಾಗಿ ಸೇರ್ಪಡೆಗೊಂಡಿಲ್ಲ.
ಪ್ರಸ್ತುತ ರಾಜ್ಯ ಸರ್ಕಾರ ಕುಂಚಿಟಿಗ ಜನಾಂಗದ ಜೀವನಶೈಲಿ, ಬದುಕು, ಆಗುಹೋಗುಗಳ ಬಗ್ಗೆ ಕುಲಶಾಸ್ತ್ರ ಅಧ್ಯಯನ ನಡೆಸಿ ವರದಿ ನೀಡುವಂತೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಆದೇಶ ನೀಡಿದ್ದರ ಪರಿಣಾಮ ವಿಶ್ವವಿದ್ಯಾನಿಲಯವು ಕುಂಚಿಟಿಗ ಜನಾಂಗದ ಬಗ್ಗೆ ಅಧ್ಯಯನ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಪ್ರಸ್ತುತ ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಿದ್ಧತೆಯಲ್ಲಿರುವುದರಿಂದ ಪ್ರಸ್ತುತ ಲೋಕಸಭಾ ಚುನಾವಣೆ ಬಂದಿರುವುದರಿಂದ ನಮ್ಮ ಸಮಾಜದ ಹಲವು ಬೇಡಿಕೆಗಳ ಬಗ್ಗೆ ಚರ್ಚಿಸಿ ಕುಂಚಿಟಿಗ ಜನಾಂಗದ ಇನ್ನೂ ಹಲವು ಸಾಧಕ ಬಾಧಕಗಳ ಬಗ್ಗೆ ಜನಾಂಗವು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸ್ಪಷ್ಟ ತೀರ್ಮಾನಕ್ಕೆ ಬರಲಾಯಿತು.
ಈ ಸಭೆಯಲ್ಲಿ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕುಂಚಿಟಿಗ ಜನಾಂಗವನ್ನು ಸೇರ್ಪಡೆ ಮಾಡುವುದು, ಕುಂಚಿಟಿಗ ಜನಾಂಗಕ್ಕೆ ರಾಜಕೀಯ ಪ್ರಾಮುಖ್ಯತೆ ನೀಡುವುದರ ಮೂಲಕ ಅಧಿಕಾರ ನೀಡುವುದು, ಸದಾ ಬರಗಾಲದ ಬೇಗುದಿಗೆ ಸಿಲುಕಿ ಬದುಕು ಬೆಂಗಾಡಾಗಿರುವ ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ, ಹಿರಿಯೂರು, ಗುಬ್ಬಿ ತಾಲ್ಲೂಕುಗಳಿಗೆ ನದಿ ಮೂಲದ ನೀರಾವರಿ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವುದು, ಕುಂಚಿಟಿಗ ಜನಾಂಗವನ್ನು ಒಕ್ಕಲಿಗ ಗುಂಪಿನಲ್ಲಿ ಪರಿಗಣಿಸಿ ಸವಲತ್ತುಗಳಿಂದ ವಂಚಿತವಾಗಿರುವುದನ್ನು ತಪ್ಪಿಸಿ ಕುಂಚಿಟಿಗ ಜನಾಂಗಕ್ಕೆ ಪ್ರತ್ಯೇಕ ಮೀಸಲಾತಿ ಸೌಲಭ್ಯ ಒದಗಿಸುವುದು, ರಾಜ್ಯ ಸರ್ಕಾರದ 2019-20ನೇ ಸಾಲಿನ ಆಯವ್ಯಯದಲ್ಲಿ ಅತಿ ಹಿಂದುಳಿದ ಸೂಕ್ಷ್ಮ ಸಮುದಾಯಗಳಿಗೆ ರೂ.134 ಕೋಟಿ ಹಣ ಮೀಸಲಿಟ್ಟಿದ್ದು, ಈ ಹಣದಲ್ಲಿ ಕುಂಚಿಟಿಗ ಜನಾಂಗವು ಅತಿ ಹೆಚ್ಚು ಸಂಖ್ಯೆಯಲ್ಲಿರುವ ತುಮಕೂರು ಜಿಲ್ಲೆಗೆ ಆದ್ಯತೆ ನೀಡಿ ಜನಾಂಗದ ಅಭಿವೃದ್ಧಿಗಾಗಿ ನಮ್ಮ ಸಂಘಕ್ಕೆ ರೂ.5 ಕೋಟಿ ಅನುದಾನ ಒದಗಿಸುವುದೂ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸಭೆಯ ಮುಂದಿಡಲಾಯಿತು. ಈ ಸಂದರ್ಭದಲ್ಲಿ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷರಾದ ಆರ್.ದೊಡ್ಡಲಿಂಗಪ್ಪ, ಕಾರ್ಯಾಧ್ಯಕ್ಷ ಆರ್.ಕಾಮರಾಜ್, ಕಾರ್ಯದರ್ಶಿ ಬಿ.ಕೆ.ದೊಡ್ಡವೀರಯ್ಯ ಅವರುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
