ತುಮಕೂರು

ತುಮಕೂರು ನಗರದ ಜಿಲ್ಲಾಡಳಿತದ ಕೇಂದ್ರವಾಗಿರುವ ಮಿನಿವಿಧಾನಸೌಧದಲ್ಲೇ ಇರುವ “ಪಡಸಾಲೆ”ಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆಯೆಂದು ಸಾರ್ವಜನಿಕರಿಂದ ದೂರುಗಳು ಬಂದಿವೆ.
ಮಿನಿವಿಧಾನ ಸೌಧದಲ್ಲಿ ತುಮಕೂರು ತಾಲ್ಲೂಕು ಕಚೇರಿ ಇದೆ. ಇದಕ್ಕೆ ಹೊಂದಿಕೊಂಡಂತೆ “ಪಡಸಾಲೆ”ಯನ್ನು ನಿರ್ಮಿಸಿದ್ದು, ಇದು ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರ ವಿವಿಧ ಅರ್ಜಿಗಳನ್ನು ಸ್ವೀಕರಿಸಿ, ಅದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಒದಗಿಸುವುದು ಈ “ಪಡಸಾಲೆ”ಯ ಕರ್ತವ್ಯ. ಆದರೆ ಇಲ್ಲಿ ಅವ್ಯವಸ್ಥೆ ತಲೆದೋರಿದ್ದು, ಈ ಕೇಂದ್ರವು ಸಾರ್ವಜನಿಕರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬುದು ಜನರ ದೂರು.
ಪಡಸಾಲೆಗೆ ಆಗಮಿಸಿದ್ದ ನಗರದ ನಾಗರಿಕ ಪ್ರಕಾಶ್ ಭಾರದ್ವಾಜ್ ಅವರು “ಪ್ರಜಾಪ್ರಗತಿ”ಯೊಂದಿಗೆ ಮಾತನಾಡುತ್ತ, “ಬೆಳಗ್ಗೆ 10 ಗಂಟೆಗೆ `ಪಡಸಾಲೆ’ಯ ಕೌಂಟರ್‍ಗಳು ಕಾರ್ಯಾರಂಭ ಮಾಡಬೇಕು. ಆದರೆ ಸಾರ್ವಜನಿಕರು ಬೆಳಗ್ಗೆ 9 ಗಂಟೆಗೂ ಮುಂಚಿನಿಂದಲೇ ಇಲ್ಲಿಗೆ ಬಂದು ಸರತಿಯಲ್ಲಿ ನಿಲ್ಲುತ್ತಿದ್ದಾರೆ.
ತುಂಬ ಹೊತ್ತು ನಿಲ್ಲಲಾಗದ ಕಾರಣ, ತಾವು ತಂದ ಬ್ಯಾಗು, ಪೇಪರ್, ಕವರ್ ಇತ್ಯಾದಿಗಳನ್ನೇ ಸರತಿಸಾಲಿನಲ್ಲಿಟ್ಟು ಕಾಯುತ್ತಿದ್ದಾರೆ. ಇಲ್ಲಿನ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರ ಮೇಲ್ವಿಚಾರಣೆ ಮಾಡಬೇಕಾದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಗಮನ ಹರಿಸುತ್ತಿಲ್ಲ. ಹೀಗಾಗಿ `ಪಡಸಾಲೆ’ಯು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ದೂರಿದರಲ್ಲದೆ, “ಜನಪ್ರತಿನಿಧಿಗಳು ಸ್ಥಳಕ್ಕಾಗಮಿಸಿ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಪಡಸಾಲೆ ಅವ್ಯವಸ್ಥೆ ಕುರಿತಂತೆ `ಪ್ರಜಾಪ್ರಗತಿ’ಯಲ್ಲಿ “ತುಮಕೂರು: ನಿರ್ಲಕ್ಷ್ಯ ಕ್ಕೊಳಗಾದ ಪಡಸಾಲೆ” ಎಂಬ ಶೀರ್ಷಿಕೆಯಡಿ ಸಚಿತ್ರ ಲೇಖನ ಪ್ರಕಟವಾಗಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ” ಎಂದು ಪ್ರಕಾಶ್ ಭಾರದ್ವಾಜ್ ವಿಷಾದದಿಂದ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
