ವೃದ್ದಾಶ್ರಮ ಹೆಚ್ಚುತ್ತಿರುವುದು ನಮ್ಮ ಸಂಸ್ಕೃತಿಗೆ ಧಕ್ಕೆ

ದಾವಣಗೆರೆ

    ಮನೆಗಳಲ್ಲಿ ಹಿರಿಯ ನಾಗರಿಕರನ್ನು ಪೋಷಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವುದರಿಂದ ದೇಶದಲ್ಲಿ ದಿನದಿಂದ ದಿನಕ್ಕೆ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಮ್ಮ ಭಾರತೀಯ ಸಂಸ್ಕøತಿಗೆ ಧಕ್ಕೆ ಉಂಟಾಗಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

    ನಗರದ ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳ ಮಠದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಅಂಗವಿಕಲರ ಪುನರ್ವಸತಿ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ವಿಶ್ವ ಹಿರಿಯ ನಾಗರಿಕರ’ ದಿನಾಚರಣೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

    ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಿ, ಹೃದಯಾಶ್ರಮಗಳ ಸಂಖ್ಯೆ ಹೆಚ್ಚಾದರೆ ಮಾತ್ರ ದೇಶ ಶ್ರೀಮಂತಗೊಳ್ಳಲು ಸಾಧ್ಯವಾಗಲಿದೆ ಎಂದು ಅವರು ಪ್ರತಿಪಾದಿಸಿದರು.ಬಾಲ್ಯಾವಸ್ಥೆಯಲ್ಲಿ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಹೊರಗಡೆ ಕಳುಹಿಸದೇ, 15 ವರ್ಷಗಳವರೆಗೆ ಮನೆಯಲ್ಲಿಯೇ ಇರಿಸಿಕೊಂಡು ಶಿಕ್ಷಣ ಕೊಡಿಸಿ ಹೃದಯ ಶ್ರೀಮಂತಿಕೆ, ಸಂಸ್ಕೃತಿ, ಸಂಸ್ಕಾರಗಳನ್ನು ಮಕ್ಕಳಿಗೆ ಕಲಿಸುವುದರಿಂದ ವೃದ್ದಾಪ್ಯದಲ್ಲಿ ಅವರು ತಮ್ಮ ತಂದೆ ತಾಯಿಂದರನ್ನು ಅಕ್ಕರೆಯಿಂದ ಪೋಷಿಸಲು ಸಾಧ್ಯವಾಗಲಿದೆ. ಇದನ್ನು ಬಿಟ್ಟು ಸಣ್ಣವರಿದ್ದಾಗಲೇ ದೂರು ಕಳುಹಿಸಿ ಶಿಕ್ಷಣ ಕೊಡಿಸಿದರೆ, ಮುಪ್ಪಿನಲ್ಲಿ ಪೋಷಕರ ಪಾಲನೆ ಸರಿಯಾಗಿ ಮಾಡುವುದಿಲ್ಲ ಎಂದರು.

    ಪ್ರತಿಯೊಬ್ಬರ ಬದುಕಿನಲ್ಲಿ ಬಾಲ್ಯಾವಸ್ಥೆ, ಯೌವನಾವಸ್ಥೆ, ವೃದ್ದಾವಸ್ಥೆ ಎಂಬ ಮೂರು ಹಂತಗಳಿದ್ದು, ಬಾಲ್ಯದಲ್ಲಿ ಕನಸುಗಳು, ಯೌವನದಲ್ಲಿ ಉತ್ಸಾಹ, ವೃದ್ಯಾಪ್ಯದಲ್ಲಿ ಅನುಭವವಿರುತ್ತದೆ. ಹಿರಿಯ ನಾಗರಿಕರು ತಮ್ಮಲ್ಲಿರುವ ಅನುಭವಗಳನ್ನು ಯುವಕರಿಗೆ ಧಾರೆ ಎರೆಯುವ ಮೂಲಕ ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸಬೇಕೆಂದು ಸಲಹೆ ನೀಡಿದರು.

     ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ದೇಹಕ್ಕೆ ವಯಸ್ಸಾಗುತ್ತದೆಯೇ ಹೊರತು ಮನಸ್ಸಿಗಲ್ಲ. ಹಿರಿಯ ನಾಗರಿಕರು ಮಕ್ಕಳು, ಮೊಮ್ಮಕ್ಕಳನ್ನು ಕುರಿತು ಚಿಂತಿಸುವುದನ್ನು ಬಿಟ್ಟು ಈ ಕ್ಷಣದಲ್ಲಿ ಬದುಕುವುದನ್ನು ಕಲಿತರೆ ಸುಖವಾಗಿರಬಹುದು. ನಿಮ್ಮಂತೆಯೇ ನಿಮ್ಮ ಮಕ್ಕಳನ್ನು ಅಭಿವೃದ್ಧಿಯಾಗಲು ಬಿಡಿ. ಅವರ ಬಗ್ಗೆ ಚಿಂತಿಸವುದನ್ನು ನಿಲ್ಲಿಸಿ ಹಾಗೂ ನೀವು ಬೇರೆಯವರಿಂದ ನೀರಿಕ್ಷೆಗಳನ್ನು ಬಿಟ್ಟು ಬದುಕಬೇಕೆಂದು ಸಲಹೆ ನೀಡಿದರು.

     ಮಾನಸಿಕ ಶಾಂತಿಗಾಗಿ ಧ್ಯಾನ, ಯೋಗದ ಕಡೆ ಗಮನಹರಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ. ಹಿರಿಯರು ಸಮಾಜದೊಂದಿಗೆ ಉತ್ತಮವಾಗಿ ಹೊಂದಾಣಿಕೆಯೊಂದಿಗೆ ಬದುಕುವುದನ್ನು ಕಲಿತರೆ ನೆಮ್ಮದಿಯಿಂದ ಇರಬಹುದು ಎಂದರು.ಜಿ.ಪಂ ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿದ ಹಿರಿಯ ನಾಗರಿಕರನ್ನು ಬಿಟ್ಟರೆ ಉಳಿದ ಹಿರಿಯ ನಾಗರಿಕರನ್ನು ಅವರ ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಯಾರೂ ಸಹ ಹಿರಿಯ ನಾಗರಿಕರನ್ನು ಅವರ ಸಂಪತ್ತು ಹಾಗೂ ಆದಾಯವನ್ನು ನೋಡಿ ಗೌರವವನ್ನು ನೀಡಬೇಡಿ. ಅವರ ವಯಸ್ಸಿಗೆ ಗೌರವವನ್ನು ನೀಡಿ ಎಂದು ಕಿವಿಮಾತು ಹೇಳಿದರು.

    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು.ಎನ್.ಬಡಿಗೇರ್ ಮಾತನಾಡಿ, ಹಿರಿಯ ಚೇತನಗಳಿಗಾಗಿ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ಕಾನೂನು ಸೇವೆ ಒದಗಿಸಿ ಕೊಡುತ್ತೇವೆ. ನಿಮಗೆ ಮಕ್ಕಳು ಆಸ್ತಿ ನೀಡದಿದ್ದರೆ ಹಾಗೂ ಯಾವುದೇ ಇಲಾಖೆಗಳಿಂದ ಸವಲತ್ತುಗಳು ನೀಡುವಲ್ಲಿ ನಿರಾಕರಿಸಿದರೆ ಕಾನೂನು ಪ್ರಾಧಿಕಾರದಿಂದ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.

     ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ 60 ಜನ ಹಿರಿಯ ನಾಗರಿಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ನಾಗರಿಕ ಸಂಘದ ಅಧ್ಯಕ್ಷ ಎಸ್.ಟಿ.ಕುಸುಮ ಶ್ರೇಷ್ಠಿ, ಜಿಲ್ಲಾ ಹಿರಿಯ ನಾಗರಿಕ ಸಂಘದ ಕಾರ್ಯದರ್ಶಿ ಗುರುಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್ ವಿಜಯಕುಮಾರ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಯ ಅಧಿಕಾರಿ ಜಿ.ಎಸ್. ಶಶಿಧರ್, ಅಂಗವಿಕಲರ ಪುನರ್ ವಸತಿ ಕೇಂದ್ರದ ನಿರ್ದೇಶಕ ಜ್ಞಾನವೇಲ್, ಡಾ. ಬಿ.ಎಂ ವಿಶ್ವನಾಥ್, ಡಾ. ನಿರ್ಮಲ ಡಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap