ತುಮಕೂರು:
ಈ ಬಾರಿಯ ಲೋಕಸಭಾ ಚುನಾವಣೆಯ ಮತದಾನದ ಪ್ರಮಾಣ 2014ರ ಲೋಕಸಭಾ ಚುನಾವಣೆಗಿಂತ ಶೇ.5 ರಷ್ಟು ಹೆಚ್ಚಳವಾಗಿದೆ. 2014 ರಲ್ಲಿ 72.54 ರಷ್ಟು ಮತದಾನವಾಗಿದ್ದರೆ, ಈ ಬಾರಿ 77.03 ರಷ್ಟು ಮತದಾನವಾಗಿದೆ.
8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ 1518144 ಒಟ್ಟು ಮತದಾರರಿದ್ದು, 1101187 ಮತದಾರರು ಮತದಾನ ಮಾಡಿದ್ದರು. ಈ ಬಾರಿ 1608000 ಒಟ್ಟು ಮತದಾರರಿದ್ದು, 1238624 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ತುಮಕೂರು ಗ್ರಾಮಾಂತರದಲ್ಲಿ 2014ರ ಚುನಾವಣೆಯಲ್ಲಿ ಅತ್ಯಧಿಕ ದಾಖಲೆಯ 78.07 ರಷ್ಟು ಮತದಾನವಾಗಿತ್ತು. ಈ ಬಾರಿ 81.87 ರಷ್ಟು ಮತದಾನವಾಗಿದೆ. ಈ ಬಾರಿಯೂ ದಾಖಲೆಯ ಮತದಾನವನ್ನು ಇಲ್ಲಿ ಗಮನಿಸಬಹುದು. ಕಡಿಮೆ ಮತದಾನದ ಹೆಗ್ಗಳಿಕೆ ಹೊಂದಿರುವ ತುಮಕೂರು ನಗರ ಕ್ಷೇತ್ರದಲ್ಲಿ ಈ ಬಾರಿಯೂ ಕಡಿಮೆ ಅಂದರೆ 65.42 ರಷ್ಟು ಮತದಾನವಾಗಿದೆ. ಕಳೆದ ಬಾರಿ 63.11 ರಷ್ಟು ಮತದಾನ ನಡೆದಿತ್ತು.
ತಿಪಟೂರಿನಲ್ಲಿ ಈ ಬಾರಿ 80.27, ತುರುವೇಕೆರೆಯಲ್ಲಿ 80 ರಷ್ಟು, ಗುಬ್ಬಿಯಲ್ಲಿ 80.29 ರಷ್ಟು, ಕೊರಟಗೆರೆಯಲ್ಲಿ 79.67 ರಷ್ಟು ಮತದಾನ ನಡೆದು ಹೆಚ್ಚು ಮತದಾನ ಪಡೆದ ಕ್ಷೇತ್ರಗಳಾಗಿವೆ. ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.74.38 ರಷ್ಟು ಮತದಾನವಾಗಿದೆ. ತುಮಕೂರಿನ ನಂತರದ ಸ್ಥಾನವನ್ನು ಮಧುಗಿರಿ ಪಡೆದಿದೆ.
ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 2014 ರಲ್ಲಿ 72.59 ರಷ್ಟು ಮತದಾನವಾಗಿತ್ತು. ಈ ಬಾರಿ 78.12 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಲ್ಲಿಯೂ ಮತದಾನದಲ್ಲಿ ಚೇತರಿಕೆ ಕಂಡುಬಂದಿದೆ. ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ಈ ಕ್ಷೇತ್ರಗಳು ಉತ್ತಮ ಮತದಾನದ ಕ್ಷೇತ್ರಗಳಾಗಿವೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಶಿರಾದಲ್ಲಿ 2014 ರಲ್ಲಿ 68.79 ರಷ್ಟು ಮತದಾನವಾಗಿದ್ದರೆ, ಈ ಬಾರಿ 74.16 ರಷ್ಟು ಮತದಾನವಾಗಿದೆ. ಪಾವಗಡದಲ್ಲಿ ಕಳೆದ ಬಾರಿ 63.22 ರಷ್ಟು ಮತದಾನವಾಗಿತ್ತು. ಈ ಬಾರಿ 64.48 ರಷ್ಟು ಮತದಾನವಾಗಿದೆ. ಬೆಂಗಳೂರು ಗ್ರಾಮಾಂತರಕ್ಕೆ ಒಳಪಡುವ ಕುಣಿಗಲ್‍ನಲ್ಲಿ ಕಳೆದ ಬಾರಿ 76.56 ರಷ್ಟಿದ್ದರೆ, ಈ ಬಾರಿ 77.08 ರಷ್ಟು ಮತದಾನವಾಗಿದೆ.
ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನದ ಸರಾಸರಿ ಪ್ರಮಾಣ ಅತ್ಯಂತ ಮಂದಗತಿಯಲ್ಲೇ ಸಾಗಿತ್ತು. ಮಧ್ಯಾಹ್ನ 3 ಗಂಟೆಯ ನಂತರ ಮತದಾನದಲ್ಲಿ ಏರಿಕೆ ಕಂಡಿರುವುದು ಅಂಕಿ ಅಂಶಗಳಿಂದ ಕಂಡುಬರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಜನರು ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿರುತ್ತಾರೆ. ಸಂಜೆಯವರೆಗೂ ಸಮಯವಿದೆ, ಹಾಕಿದರಾಯಿತು ಎಂಬ ಧೋರಣೆಯಲ್ಲಿರುತ್ತಾರೆ.
ಸಂಜೆಯ ವೇಳೆಗೆ ಮತದಾನ ಮಾಡಿರುವ ಸಾಧ್ಯತೆಗಳಿವೆ. ಹೀಗಾಗಿ ಮತದಾನ ಪ್ರಮಾಣದಲ್ಲಿ ಏರಿಕೆಯಾಗಿರುವುದು ಒಂದು ಕಡೆಯಾದರೆ ಇನ್ನು ಕೆಲವರು ಸಂಜೆಯ ಕೊನೆಯ ಹಂತದವರೆಗೂ ಕಾಯುತ್ತಿರುತ್ತಾರೆ. ಯಾರಾದರೂ ಅವರನ್ನು ನೋಡಿಕೊಳ್ಳಲಿಲ್ಲ ಎಂದರೆ, ಮಾತನಾಡಿಸಲಿಲ್ಲ ಎಂದರೆ ಮತದಾನ ಕೇಂದ್ರದ ಹತ್ತಿರಕ್ಕೂ ಸುಳಿಯುವುದಿಲ್ಲ. ಅಂತಹವರನ್ನು ಪಕ್ಷದ ಕಾರ್ಯಕರ್ತರು ಗುರುತಿಸಬಹುದು. ಮತ ಹಾಕಲು ಬೇಡಿಕೆ ಇಡಬಹುದು. ಇಂತಹ ಹಲವಾರು ಕಾರಣಗಳು ಕಂಡುಬರುತ್ತವೆ.