ಕಾರ್ಮಿಕರ ಪಿಂಚಣಿ ಹೆಚ್ಚಿಸಲು ಆಗ್ರಹ

ಚಿತ್ರದುರ್ಗ:

       ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಎ.ಐ.ಟಿ.ಯು.ಸಿ.ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

          ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕ್‍ನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಎ.ಐ.ಟಿ.ಯು.ಸಿ ಕಾರ್ಯಕರ್ತರು ಕಾರ್ಮಿಕರ ಹಿತವನ್ನು ಕಡೆಗಣಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

           ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎ.ಐ.ಟಿ.ಯು.ಸಿ. ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ಕಾರ್ಮಿಕರಿಗಾಗಿಯೇ ಇರುವ ಕಲ್ಯಾಣ ಮಂಡಳಿಯನ್ನು ರಾಜ್ಯ ಸರ್ಕಾರ ರಾಜಕೀಯ ಲಾಭಕ್ಕಾಗಿ ದುರಪಯೋಗಪಡಿಸಿಕೊಳ್ಳುತ್ತಿರುವುದನ್ನು ತಡೆಗಟ್ಟಬೇಕು. 55 ವರ್ಷ ಪೂರೈಸಿರುವ ಮಹಿಳೆ ಹಾಗೂ 60 ವರ್ಷ ಪೂರೈಸಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಈಗ ನೀಡುತ್ತಿರುವ ಮಾಸಿಕ ಪಿಂಚಣಿ ಒಂದು ಸಾವಿರ ರೂ.ಗಳನ್ನು ಐದು ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

          ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ವಿವಾಹಕ್ಕಾಗಿ ನೀಡುತ್ತಿರುವ ಐವತ್ತು ಸಾವಿರ ರೂ.ಗಳನ್ನು ಒಂದು ಲಕ್ಷಕ್ಕೆ ಏರಿಸಬೇಕು. ಕೆಲಸ ಮಾಡುವಾಗ ಕಾರ್ಮಿಕ ಅಪಘಾತದಿಂದ ಮೃತಪಟ್ಟರೆ ಹತ್ತು ಲಕ್ಷ ರೂ.ಗಳ ಪರಿಹಾರ ಕೊಡಬೇಕು. ಸ್ವಾಭಾವಿಕವಾಗಿ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಐದು ಲಕ್ಷ ರೂ.ಪರಿಹಾರ ಕೊಡಬೇಕು. ಕೈಕಾಲು ಕಳೆದುಕೊಂಡರೆ ಎರಡು ಲಕ್ಷ ರೂ.ಪರಿಹಾರ ನೀಡಬೇಕು. ಇ.ಎಸ್.ಐ., ಪಿ.ಎಫ್, ಬೋನಸ್ ಮತ್ತು ಗ್ರಾಚುಟಿ ಯೋಜನೆಗಳ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಕಡ್ಡಾಯವಾಗಿ ನೀಡಬೇಕು ಎಂದು ಆಗ್ರಹಿಸಿದರು.

            ಚಿತ್ರದುರ್ಗ ನಗರ ಮತ್ತು ಸುತ್ತಮುತ್ತಲಿನಲ್ಲಿ ಹಾಗೂ ಎಲ್ಲಾ ತಾಲೂಕಿನಲ್ಲಿಯೂ ಕಾರ್ಮಿಕರಿಗಾಗಿ ರಾಜ್ಯ ಸರ್ಕಾರ ಜಮೀನು ಖರೀಧಿಸಿ ನಿವೇಶನಗಳನ್ನಾಗಿ ಮಾಡಿ ಮನೆಗಳನ್ನು ಕಟ್ಟಿಸಿಕೊಡಬೇಕು. ಮದುವೆಗೆ ಸಹಾಯಧನ ಪಡೆಯಲು ಹಾಲಿ ಇರುವ ಕಾಲಮಿತಿಯನ್ನು ಹೆಚ್ಚಿಸಬೇಕು.

            ಸದಸ್ಯತ್ವನ್ನು ನವೀಕರಿಸಲು ಹಾಗೂ ಪ್ರತಿ ವರ್ಷಕ್ಕೊಮ್ಮೆ ವಿಧಿಸುವ ಷರತ್ತನ್ನು ಬದಲಾಯಿಸಿ ಮೊದಲಿನಂತೆ ಮೂರು ವರ್ಷಕ್ಕೊಮ್ಮೆ ಸದಸ್ಯತ್ವವನ್ನು ನವೀಕರಿಸಬೇಕು. ಏಕೆಂದರೆ ಲಕ್ಷಾಂತರ ಫಲಾನುಭವಿಗಳು ನವೀಕರಿಸಿಲ್ಲ ಎಂದು ಕಾರ್ಮಿಕರ ಕಷ್ಟಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದರು.

             ನರೇಗಾ ಯೋಜನೆಯ ವಿಶೇಷ ನೊಂದಣಿ ಅಭಿಯಾನದಲ್ಲಿ ನಿಜವಾದ ಕಟ್ಟಡ ಕಾರ್ಮಿಕರನ್ನು ನೊಂದಣಿ ಮಾಡುತ್ತಿರುವುದರಿಂದ ಸರ್ಕಾರವು ಮಂಡಳಿಗೆ ಯೋಜನೆಯ ವೆಚ್ಚದ ಶೇ.1 ರಷ್ಟು ಸೆಸ್ಸನ್ನು ಪಾವತಿಸಿ ನೊಂದಾಯಿಸುವ ಹಾಗೂ ಸೌಲಭ್ಯ ವಿತರಣೆಯಲ್ಲಿ ಆಗಿರುವ ವಿಳಂಬವನ್ನು ತುರ್ತಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.

             ಎ.ಐ.ಟಿ.ಯು.ಸಿ. ಸಂಘಟನಾ ಕಾರ್ಯದರ್ಶಿ ಕೆ.ಇ.ಸತ್ಯಕೀರ್ತಿ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಅಣ್ಣಪ್ಪ, ಉಪಾಧ್ಯಕ್ಷ ಸೋಮಶೇಖರಪ್ಪ, ಕಾರ್ಯದರ್ಶಿ ಪ್ರಭು, ಎನ್.ಶಿವಕುಮಾರ್, ನಾಗರಾಜ್, ಪ್ರಕಾಶ್, ಎಂ.ಡಿ.ರಾಜು, ಮಲ್ಲಪ್ಪ, ವಿಶ್ವನಾಥ್ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link