ಚಿತ್ರದುರ್ಗ:
ದೇಶಕ್ಕೆ ಮದ್ದುಗುಂಡಿನಿಂದ ಸ್ವಾತಂತ್ರ್ಯ ಸಿಗಲಿಲ್ಲ. ಅಹಿಂಸಾ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿತು ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದರು.
ನಗರದ ಭೋವಿ ಗುರುಪೀಠದ ಆವರಣದಲ್ಲಿ ಎಸ್‍ಜೆಎಸ್ ಸಮೂಹ ಸಂಸ್ಥೆಗಳಿಂದ ಬುಧವಾರ ನಡೆದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮ ದಿನಾಚರಣೆ ಅಂಗವಾಗಿ ಸ್ವಚ್ಛತೆ ಸ್ವ ಇಚ್ಛೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವನದಲ್ಲಿ ಬರುವ ಘಟನೆಗಳನ್ನು ಪ್ರೀತಿ, ಅಹಿಂಸೆಯಿಂದ ಗೆಲ್ಲಬಹುದಾಗಿದೆ. ಜಗಳ ಆಡುವುದರಲ್ಲಿ ಅರ್ಥವಿಲ್ಲ. ಗಾಂಧೀ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಆದರ್ಶಪ್ರಾಯರಾಗಿ ಬೆಳೆಯಬೇಕು ಎಂದು ತಿಳಿಸಿದರು.
ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಗಾಂಧಿ ಬ್ರೀಟಿಷರ ವಿರುದ್ಧ ಹೋರಾಟವನ್ನು ಸತ್ಯ, ಅಹಿಂಸೆ ಮೂಲಮಂತ್ರವಾಗಿ ಬಳಸಿಕೊಂಡು ನಡೆಸಿದ ಹೋರಾಟ ವಿಶ್ವದಲ್ಲಿ ಮಾದರಿ ಹಾಗೂ ಪಾಲನೆ ಮಾಡುವಂತಹ ಅಂಶವಾಗಿದೆ. ಶಸ್ತ್ರಸ್ತ್ರ ಹೋರಾಟಕ್ಕೆ ಹಿಂಬು ನೀಡದ ಗಾಂಧಿ ಅವರು ಜಗತ್ತಿಗೆ ಮಾದರಿಯಾದರು. ಮೌಲ್ಯ, ಆದರ್ಶಗಳನ್ನು ಬಿತ್ತಿದವರು ಎಂದು ತಿಳಿಸಿದರು.
ಅಥಣಿಯ ಶಿವಬಸವ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮ ಬಾಲ ಗಂಗಾಧರ್ ತಿಲಕ್ ಅವರಿಂದ ಆರಂಭಗೊಂಡ ಹೋರಾಟ ಅನೇಕರ ತ್ಯಾಗ ಬಲಿದಾನ ನಡೆದಿದೆ. ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಪ್ರೇರಣೆಯಾದವರು. ಸತ್ಯ, ಅಹಿಂಸೆ, ತಾಳ್ಮೆಯನ್ನು ಗಾಂಧೀಜಿ ಅವರು ಕಲಿಸಿಕೊಟ್ಟಿದ್ದಾರೆ. ಈಗಿನ ಯುವ ಪೀಳಿಗೆಗೆ ಇದು ಸ್ಫೂರ್ತಿಯಾಗಬೇಕಿದೆ. ಪ್ರಾಮಾಣಿಕತೆ ಪ್ರತಿಯೊಬ್ಬರಲ್ಲೂ ಹೆಚ್ಚಾದಂತೆ ಭ್ರಷ್ಟಾಚಾರ ದೇಶದಿಂದ ದೂರ ಹೋಗುತ್ತದೆ ಎಂದು ಶ್ರೀಗಳು ತಿಳಿಸಿದರು.
ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಅಸತ್ಯದ ವಿರುದ್ಧ ಸತ್ಯದ ಸಂಘರ್ಷ, ಹಿಂಸೆಯ ವಿರುದ್ಧ ಅಹಿಂಸೆಯ ಸಂಘರ್ಷ, ಮಾನವನ ಬದಲಾವಣೆಯ ಅಂಶದ ಮಾದರಿಯಾಗಿದೆ. ವ್ಯಕ್ತಿಯನ್ನು ವಿಮರ್ಶೆಯಿಂದ ನೋಡಿದಾಗ ವ್ಯಕ್ತಿ ಸಾಧನೆಗಳು ಗೋಚರಿಸುತ್ತವೆ. ಅವನ ಸಾಧನೆ ಎತ್ತರಕ್ಕೆ ಬೆಳೆದಂತೆಲ್ಲಾ ಸರ್ವಕಾಲಕ್ಕೂ ಸಲ್ಲುವಂತಹ ವ್ಯಕ್ತಿಯಾಗಿ ಸಮಾಜದಲ್ಲಿ ಉಳಿಯುತ್ತಾರೆ.
ಸ್ವಚ್ಛತೆ ಎಂಬುದು ಪ್ರತಿಯೊಬ್ಬರಲ್ಲೂ ಮೂಡಬೇಕು.
ಸ್ವಚ್ಛತೆ ಸ್ವ ಇಚ್ಛೆಯಿಂದ ಬರಬೇಕೇ ವಿನಃ ಒತ್ತಡದಿಂದ ಬರಬಾದರು. ಒತ್ತಡದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಜನತೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಗೊಳಿಸುವಂತಹ ಸ್ವ ಇಚ್ಛೆಯನ್ನು ಹೊಂದಬೇಕು. ಗಾಂಧೀಜಿ ಅವರು ಸ್ವ ಇಚ್ಛೆಯಿಂದಲೇ ತಾನು ವಾಸವಿದ್ದ ಸುತ್ತಮುತ್ತಲಿನ ಬೀದಿ, ಮನೆಗಳ ಸುತ್ತ ಸ್ವಚ್ಛತೆಗೊಳಿಸಿ ಮಾದರಿಯಾಗಿದ್ದವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಓಂ ವೃಕ್ಷಾಶ್ರಮದ ತಿಪ್ಪೇರುದ್ರಸ್ವಾಮೀಜಿ, ಮಾನಸ ಮೂವೀಸ್ ಮಾಲೀಕರಾದ ವಿ.ಶೇಖರ್, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಪ್ರಾಂಶುಪಾಲರಾದ ಕನಕದಾಸ್, ಸುಕೋ ಬ್ಯಾಂಕ್ ವ್ಯವಸ್ಥಾಪಕ ಪಾಲಯ್ಯ, ಮುಖ್ಯ ಶಿಕ್ಷಕರಾದ ಉಮೇಶ್, ನಾಗರಾಜ್, ಹನುಮಂತಪ್ಪ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ