ಆಂತರಿಕ ಭದ್ರೆತೆಯಲ್ಲಿ ಭಾರತ ಬಲಿಷ್ಠ: ಐಜಿಪಿ

ದಾವಣಗೆರೆ :

    ದೇಶವು ಆಂತರಿಕ ಭದ್ರತೆಯಲ್ಲಿ ಬಲಿಷ್ಠವಾಗಿರುವುದರಿಂದ ನಮ್ಮ ರಾಷ್ಟ್ರದ ಮುಂದಿರುವ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದೇವೆ ಎಂದು ಪೂರ್ವವಲಯದ ಮಹಾ ನಿರೀಕ್ಷಕರಾದ ಅಮ್ರಿತ್ ಪಾಲ್ ತಿಳಿಸಿದರು.

    ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಮಾರು 15 ವರ್ಷಗಳ ಹಿಂದೆ 3200ರಿಂದ 3300 ಯೋಧರು ಹುತಾತ್ಮ ರಾಗುತ್ತಿದ್ದರು. ಆದರೆ, ಈಗ ಈ ಪ್ರಮಾಣ 300ಕ್ಕೆ ಇಳಿದಿದೆ. ಇದು ನಮ್ಮ ದೇಶದ ಆಂತರಿಕ ಸುರಕ್ಷತೆಯ ಪ್ರತೀಕವಾಗಿದೆ ಎಂದು ಬಣ್ಣಿಸಿದರು.

    ಜನ ಸಾಮಾನ್ಯರ ಶಾಂತಿ ಮತ್ತು ಸುರಕ್ಷತೆಗಾಗಿ ನಮ್ಮ ದೇಶದ ಸೈನಿಕರು ಮತ್ತು ಪೊಲೀಸರು ಸದಾ ಕರ್ತವ್ಯನಿರತರಾಗಿದ್ದು, ಕರ್ತವ್ಯದೊಂದಿಗೆ ತಮ್ಮ ಆರೋಗ್ಯ ಮತ್ತು ದೇಹ ರಕ್ಷಣೆಯ ಬಗ್ಗೆಯೂ ಕಾಳಜಿ ವಹಿಸುವ ಅವಶ್ಯಕತೆ ಇದೆ ಎಂದರು.ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ಕರ್ತವ್ಯ ನಿರ್ವಹಿಸುವ ಸೈನಿಕರು ಮತ್ತು ಪೊಲೀಸರ ಕರ್ತವ್ಯ ಶ್ಲಾಘನೀಯವಾಗಿದೆ. ದೇಶದ ರಕ್ಷಣೆ ಮಾಡುವಲ್ಲಿ ಸೈನಿಕರ ಪಾತ್ರ ಹೆಚ್ಚು ಮಹತ್ವವಾಗಿದ್ದು, ದೇಶದ ಮತ್ತು ಜನರ ಹಿತರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವ ಇವರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದರು.

    ನಮ್ಮ ಸೈನಿಕರು ಮತ್ತು ಪೊಲೀಸ್ ಸಿಬ್ಬಂದಿ ದೇಶ ರಕ್ಷಣೆಯಲ್ಲಿ ತೊಡಗಿಕೊಂಡು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜಮ್ಮು, ಕಾಶ್ಮೀರ, ಛತ್ತೀಸ್‍ಗಡ, ಓರಿಸ್ಸಾ, ಬಿಹಾರ್ ನಂತಹ ಹಿಮ ಮಿಶ್ರಿತ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವವರು ಸದೃಢ ದೇಹ ಮತ್ತು ಉತ್ತಮವಾದ ಆರೋಗ್ಯವನ್ನು ಹೊಂದಿರಬೇಕು.

    ಆಗ ಮಾತ್ರ ಅವರು ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದ ಅವರು, 1951ರಲ್ಲಿ ಚೀನಾದ ಲಡಾಕ್‍ನಲ್ಲಿ ನಡೆದ ಘಟನೆಯನ್ನು ನಾವು ಇಂದಿಗೂ ಸ್ಮರಿಸಿಕೊಳ್ಳುವ ಅಗತ್ಯವಿದೆ. ಕರುಣ್‍ಸಿಂಗ್ ನೇತೃತ್ವದ ನಮ್ಮ ಸಿಆರ್‍ಪಿಎಫ್ ತಂಡವು ದೊಡ್ಡ ಸಂಖ್ಯೆಯ ಸೈನಿಕರನ್ನು ಹೊಂದಿದ್ದ ಚೀನಾ ದೇಶದ ವಿರುದ್ದ ಹೋರಾಡಿ, ಗೆಲವು ಸಾಧಿಸಿಕೊಂಡಂತಹ ಸೈನ್ಯ ನಮ್ಮದು. ಈ ಘಟನೆಯಲ್ಲಿ ನಮ್ಮ 10 ಜನ ಸಿಆರ್‍ಪಿಫ್ ಯೋಧರು ಮರಣ ಹೊಂದಿದ್ದರು ಎಂದು ಮಾಹಿತಿ ನೀಡಿದರು.

     ಯೋಧರು ಸರಿಯಾದ ಸಮಯಕ್ಕೆ ಮೆಡಿಕಲ್ ಚೆಕಪ್ ಮಾಡಿಸಿಕೊಂಡು, ಪ್ರೋಟೀನ್ ಅಂಶ ಹೆಚ್ಚಾಗಿರುವ ಆಹಾರವನ್ನು ಸೇವಿಸಬೇಕು. ಅಗತ್ಯವಿದ್ದರೆ ಸೂಕ್ತವಾದ ಚಿಕಿತ್ಸೆ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.

      ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ನಮ್ಮ ದೇಶದ ರಕ್ಷಣೆ ಮತ್ತು ನಮ್ಮ ಶಾಂತಿಯುತ ಜೀವನಕ್ಕೆ ಮುಖ್ಯ ಕಾರಣಕರ್ತರೆಂದರೆ ಈ ದೇಶದ ಸೈನಿಕರು ಮತ್ತು ಪೊಲೀಸರು. ದೇಶದ್ಯಾಂತ ಇಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ದೇಶದಲ್ಲಿ ಅನೇಕ ಪೊಲೀಸರು ಮತ್ತು ಯೋಧರು ಹುತಾತ್ಮರಾಗುತ್ತಾರೆ. ಹುತಾತ್ಮ ಪೊಲೀಸ್ ಮತ್ತು ಯೋಧರ ಆತ್ಮಕ್ಕೆ ಶಾಂತಿ ಮತ್ತು ಗೌರವ ವಂದನೆ ಸಲ್ಲಿಸಲು ಇದು ಸೂಕ್ತ ಸಮಯ. ಅವರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ನಾವೆಲ್ಲಾ ಆತ್ಮಸ್ಥೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.

       ಜಿಲ್ಲೆಯ ಹುತಾತ್ಮ ಪೊಲೀಸರ ಕುಟುಂಬ ವರ್ಗದವರು ಹಾಗೂ ವಯೋನಿವೃತ್ತಿ ಹೊಂದಿದ ಯೋಧರು ಕಾರ್ಯಕ್ರಮದಲ್ಲಿ ಹಾಜರಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೀವ್.ಎಂ, ಜಿಲ್ಲಾ ಅಭಿಯೋಜಕ ಉಪ ನಿರ್ದೇಶಕಿ ಕಲ್ಪನಾ, ಡಿ.ಎ.ಆರ್ ಡಿವೈಎಸ್‍ಪಿ ಪ್ರಕಾಶ್.ಪಿ.ಬಿ, ಮಹಾನಗರಪಾಲಿಕೆ ಸದಸ್ಯರಾದ ದಿನೇಶ್ ಕೆ.ಹೆಚ್., ಉಮೇಶ್ ಹಾಗೂ ನಗರದ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಗರೀಕರು ಭಾಗವಹಿಸಿದ್ದರು.

 

Recent Articles

spot_img

Related Stories

Share via
Copy link