ಮಲೇಷ್ಯಾ
ಮಲೇಷ್ಯಾ ಮಹಿಳಾ ತಂಡದ ವಿರುದ್ಧ ಐದು ಪಂದ್ಯಗಳ ದ್ವಿಪಕ್ಷೀಯ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವನಿತೆಯರು 3-0 ಗೆಲುವು ದಾಖಲಿಸಿದ್ದಾರೆ.
ಭಾರತದ ಪರ ವಂದನಾ ಕಟಾರಿಯಾ (17, 60ನೇ ನಿಮಿಷ) ಹಾಗೂ ಲಾಲ್ಮೆಮಿಯಾಮಿ (38ನೇ ನಿಮಿಷ) ಗೋಲು ಬಾರಿಸಿ ಜಯದಲ್ಲಿ ಮಿಂಚಿದರು.
ಪಂದ್ಯದ ಆರಂಭದಲ್ಲಿ ಆತಿಥೇಯ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಭಾರತದ ಗೋಲ್ ಕೀಪರ್ ಸವಿತಾ ಅಮೋಘವಾಗಿ ರಕ್ಷಿಸಿ ಗೋಲು ತಡೆದರು. ಇದೇ ಅವಧಿಯಲ್ಲಿ ಲಾಲ್ಮೆಮಿಯಾಮಿ ಗೋಲು ಬಾರಿಸಲು ಮುಂದಾದರು. ಆದರೆ, ಮಲೇಷ್ಯಾ ಗೋಲಿ ಈ ಪ್ರಯತ್ನಕ್ಕೆ ಬ್ರೇಕ್ ಹಾಕಿದರು. ಭಾರತಕ್ಕೂ ಒಂಬತ್ತನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತಾದರೂ, ಗೋಲಿನ ಖಾತೆ ತೆರೆಯಲಿಲ್ಲ.
ಮೊದಲಾವಧಿಯ ಆಟದಲ್ಲಿ ಉಭಯ ತಂಡಗಳು ಗೋಲು ಬಾರಿಸದೆ ಸಮಬಲ ಸಾಧಿಸಿದವು. ಎರಡನೇ ಅವಧಿಯ ಆರಂಭದಲ್ಲೇ ವಂದನಾ ಸಿಕ್ಕ ಅವಕಾಶವನ್ನು ಬಳಸಿಕೊಂಡು, ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಮೂರನೇ ಅವಧಿಯಲ್ಲಿ ಲಾಲ್ಮೆಮಿಯಾಮಿ ಅಬ್ಬರಿಸಿದರು. ಮಲೇಷ್ಯಾ ರಕ್ಷಣಾ ವಿಭಾಗವನ್ನು ವಂಚಿಸಿದ ಇವರು ತಂಡದ ಗೋಲಿನ ಸಂಖ್ಯೆ ಹೆಚ್ಚಿಸಿದರು. ಭಾರತ ಈ ಅವಧಿಯ ಅಂತ್ಯಕ್ಕೆ 2-0 ಮುನ್ನಡೆ ಸಾಧಿಸಿತು.
ಇನ್ನು ಕೊನೆಯ ಅವಧಿಯ ಕೊನೆಯ ಕ್ಷಣದಲ್ಲಿ ವಂದನಾ ಮತ್ತೊಂದು ಗೋಲು ಬಾರಿಸಿ ಮಿಂಚಿದರು. ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.