ತುಮಕೂರು
ವಿಶೇಷ ಲೇಖನ : ಆರ್.ಎಸ್.ಅಯ್ಯರ್
ಕೈಗಾರಿಕಾ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚುತ್ತಿದೆ. ಹೊರರಾಜ್ಯಗಳ ಕಾರ್ಮಿಕರ ಸಂಖ್ಯೆಯೂ ಅಧಿಕವಾಗಿದ್ದು, ಅವರೆಲ್ಲರ ಆರೋಗ್ಯ ತಪಾಸಣೆ ಅಸ್ಪಷ್ಟವಾಗಿದೆ. ಇವೆರಡೂ ಪ್ರಮುಖ ಕಾರಣಗಳಿಂದ ನಮ್ಮ ವಾರ್ಡ್‍ನಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ- ಇದು ತುಮಕೂರು ನಗರದ 2 ನೇ ವಾರ್ಡ್ (ಅಂತರಸನಹಳ್ಳಿ)ನ ಕಾರ್ಪೊರೇಟರ್ ಎಸ್.ಮಂಜುನಾಥ್ (ಬಿಜೆಪಿ) ಅವರ ಕಳವಳ.
ತುಮಕೂರು ನಗರದಿಂದ ಮಧುಗಿರಿ ಕಡೆಗೆ ತೆರಳುವ ಮಾರ್ಗದಲ್ಲಿರುವ ಅಂತರಸನಹಳ್ಳಿ ಒಳಗೊಂಡ 2 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ ಇದೆ. ಈ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ರೈಸ್ ಮಿಲ್‍ಗಳು ಮತ್ತು ಗ್ರಾನೈಟ್ ಕಾರ್ಖಾನೆಗಳಿಂದ ಮಾಲಿನ್ಯ ಅಧಿಕವಾಗಿದೆ. ಜೊತೆಗೆ ಹೊರರಾಜ್ಯಗಳ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಇಲ್ಲಿಗೆ ವಲಸೆ ಬಂದಿದ್ದು, ಅವರಿಂದಲೂ ಆರೋಗ್ಯ ಸಮಸ್ಯೆ ಎದುರಾಗಬಹುದು ಹಾಗೂ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂಬುದೇ ಈಗ ಅಲ್ಲಿನ ನಿವಾಸಿಗಳ ಆತಂಕವಾಗಿದೆ.
ಇಲ್ಲಿನ ರೈಸ್ ಮಿಲ್‍ಗಳಿಂದ ಧೂಳಿನ ಕಣಗಳು ಹೊರಹೊಮ್ಮುತ್ತಿದ್ದು, ಇದರಿಂದ ಸಂಚಾರಿಗರ ಕಣ್ಣಿಗೆ ಸದಾ ಧೂಳು ಬಿದ್ದು ಸಮಸ್ಯೆ ಉಂಟಾಗುತ್ತಿದೆ. ಆಹಾರ ಪದಾರ್ಥಗಳಿಗೂ ಧೂಳು ತುಂಬುತ್ತಿದ್ದು, ಉಸಿರಾಟಕ್ಕೂ ಸಮಸ್ಯೆಯಾಗುತ್ತಿದೆ. ಇನ್ನು ಗ್ರಾನೈಟ್ ಕಾರ್ಖಾನೆಯ ತ್ಯಾಜ್ಯ ಪದಾರ್ಥಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದಲ್ಲದೆ ಅನೇಕ ಕಾರ್ಖಾನೆಗಳ ತ್ಯಾಜ್ಯ ರಾಸಾಯನಿಕ ನೀರು ಹೊರಕ್ಕೆ ಹರಿದುಬರುತ್ತಿದೆ.
ಆಯಾ ಕಾರ್ಖಾನೆಗಳಲ್ಲೇ ತ್ಯಾಜ್ಯ ರಾಸಾಯನಿಕಗಳನ್ನು ಸಂಸ್ಕರಣೆಗೊಳಿಸಬೇಕು. ಆದರೆ ಆ ರೀತಿ ಮಾಡದೆ ಹಾಗೆಯೇ ಹೊರಕ್ಕೆ, ಕೆಲವೆಡೆ ಅಮಾನಿಕೆರೆಯ ರಾಜಕಾಲುವೆಗೆ ಹರಿಯಬಿಡುತ್ತಿರುವುದು ಅಪಾಯಕಾರಿಯಾಗಿದೆ. ಮತ್ತೆ ಕೆಲ ಕಾರ್ಖಾನೆಗಳ ಆವರಣದಲ್ಲೇ ತ್ಯಾಜ್ಯವಸ್ತುಗಳನ್ನು ರಾಶಿ ಹಾಕುತ್ತಿದ್ದು, ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಕಾರ್ಖಾನೆಗಳ ಒಳಭಾಗದಲ್ಲಿ ತ್ಯಾಜ್ಯ ನೀರಿನ ಸಂಗ್ರಹವಿದ್ದು, ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಮಂಜುನಾಥ್ ದೂರುಗಳ ಪಟ್ಟಿಯನ್ನೇ ಮುಂದಿಡುತ್ತಾರೆ.
ಹೊರರಾಜ್ಯದ ಕಾರ್ಮಿಕರು
ಅನೇಕ ಕಾರ್ಖಾನೆಗಳಿಗೆ ಹೊರ ರಾಜ್ಯದಿಂದ ಕಾರ್ಮಿಕರು ಉದ್ಯೋಗವನ್ನರಸಿಕೊಂಡು ಬಂದಿದ್ದಾರೆ. ನೂರಾರು ಸಂಖ್ಯೆಯಲ್ಲೇ ಈ ಹೊರರಾಜ್ಯದವರು ಇದ್ದಾರೆ. ಅವರಿಗೆ ಸೂಕ್ತ ವಸತಿ ಇಲ್ಲದೆ, ಒಂದೇ ಶೆಡ್‍ನಲ್ಲಿ ನೂರಕ್ಕೂ ಅಧಿಕ ಜನರು ತಂಗಲು ವ್ಯವಸ್ಥೆ ಮಾಡಿರುತ್ತಾರೆ. ಇವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆಯೇ? ಇವರ ಆರೋಗ್ಯ ಸ್ಥಿತಿಗತಿಗಳೇನು? ಎಂಬುದು ನಿಗೂಢವಾಗಿರುತ್ತದೆ. ಅಕಸ್ಮಾತ್ ಇವರಲ್ಲಿ ಯಾರಿಗಾದರೂ ಸಾಂಕ್ರಾಮಿಕ ರೋಗವಿದ್ದರೆ, ಅದು ಸಹಜವಾಗಿಯೇ ಸ್ಥಳೀಯ ಜನರಿಗೂ ಹರಡುವ ಸಂಭವವಿದೆ ಎಂಬ ಆತಂಕ ಇಲ್ಲಿನ ನಾಗರಿಕರನ್ನು ಕಾಡುತ್ತಿದೆ.
ನೋಡಿ, ಇತ್ತೀಚೆಗೆ ಇಲ್ಲಿನ ವಲಸೆ ಕಾರ್ಮಿಕರಲ್ಲಿ ಆನೆಕಾಲು ರೋಗ ಕಂಡುಬಂದಿತ್ತು. ಇಂತಹ ರೋಗ ಸ್ಥಳೀಯವಾಗಿ ಇಲ್ಲವೇ ಇಲ್ಲ. ಆದರೆ ಎಲ್ಲಿಂದಲೋ ಬಂದಿರುವ ಕಾರ್ಮಿಕರಲ್ಲಿ ಇದು ಪತ್ತೆಯಾಗಿದೆ. ಇವರಿಂದ ಇದು ಹರಡುವ ಸಂಭವ ಇದೆ. ಆರೋಗ್ಯ ಇಲಾಖೆ ನಡೆಸಿದ ತಪಾಸಣೆಯಿಂದಾಗಿ ಈ ರೋಗ ಪತ್ತೆಯಾಗಿದ್ದು, ಈ ರೋಗ ಹರಡದಂತೆ ಔಷಧೋಪಚಾರ ಮಾಡಲಾಗಿದೆ ಎನ್ನುತ್ತಾರೆ ಮಂಜುನಾಥ್.
ಕ್ರಮ ಕೈಗೊಳ್ಳಬೇಕು
ಕೈಗಾರಿಕಾ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಆಗದಂತೆ ಕಟ್ಟೆಚ್ಚರ ವಹಿಸಬೇಕು. ಅದಕ್ಕಾಗಿ ನೈರ್ಮಲ್ಯ ಕಾಪಾಡಬೇಕು. ದ್ರವರೂಪದ ತ್ಯಾಜ್ಯ ರಾಸಾಯನಿಕಗಳು ಆಯಾ ಕಾರ್ಖಾನೆಯಲ್ಲೇ ಸಂಸ್ಕರಣೆಗೊಳ್ಳುವಂತೆ ನೋಡಿಕೊಳ್ಳಬೇಕು. ಇಂತಹ ಹಾನಿಕಾರಕಗಳನ್ನು ಯಾವುದೇ ಕಾರಣಕ್ಕೂ ಹೊರಕ್ಕೆ ಹರಿಯಲು ಬಿಡಬಾರದು. ಆಯಾ ಕಾರ್ಖಾನೆಯಲ್ಲಿರುವ ಘನತ್ಯಾಜ್ಯ ಗಳನ್ನು ಸಮರ್ಪಕವಾಗಿ ವಿಲೇವಾರಿ ಆಗುವಂತೆ ಮಾಡಬೇಕು.
ಹೊರರಾಜ್ಯದ ಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುವುದನ್ನು ಕಡ್ಡಾಯಗೊಳಿಸಿ, ಆ ನಿಟ್ಟಿನಲ್ಲಿ ತಕ್ಷಣದಿಂದಲೇ ಕ್ರಮ ಕೈಗೊಳ್ಳಬೇಕು ಎಂಬುದು ಮಂಜುನಾಥ್ ಮುಂದಿಡುವ ಬೇಡಿಕೆಗಳು. ಈ ನಿಟ್ಟಿನಲ್ಲಿ ಜನರ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲಾಡಳಿತ, ತುಮಕೂರು ಮಹಾನಗರ ಪಾಲಿಕೆ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಲಿ, ಕಾರ್ಮಿಕ ಇಲಾಖೆ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಕಾರ್ಯೋನ್ಮುಖವಾಗಬೇಕು ಎಂಬುದು ಅವರ ಆಗ್ರಹ.
ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ರೈಸ್ ಮಿಲ್‍ಗಳು ಮತ್ತು ಗ್ರಾನೈಟ್ ಕಾರ್ಖಾನೆಗಳಿಂದ ಮಾಲಿನ್ಯ ಅಧಿಕವಾಗಿದೆ. ಜೊತೆಗೆ ಹೊರರಾಜ್ಯಗಳ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಇಲ್ಲಿಗೆ ವಲಸೆ ಬಂದಿದ್ದು, ಅವರಿಂದಲೂ ಆರೋಗ್ಯ ಸಮಸ್ಯೆ ಎದುರಾಗಬಹುದು ಹಾಗೂ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂಬುದೇ ಈಗ ಅಲ್ಲಿನ ನಿವಾಸಿಗಳ ಆತಂಕ.
ಪರಿಸರ ಮಾಲಿನ್ಯ ಆಗದಂತೆ ಕಟ್ಟೆಚ್ಚರ ವಹಿಸಬೇಕು. ಅದಕ್ಕಾಗಿ ನೈರ್ಮಲ್ಯ ಕಾಪಾಡಬೇಕು. ದ್ರವರೂಪದ ತ್ಯಾಜ್ಯ ರಾಸಾಯನಿಕಗಳು ಆಯಾ ಕಾರ್ಖಾನೆಯಲ್ಲೇ ಸಂಸ್ಕರಣೆಗೊಳ್ಳುವಂತೆ ನೋಡಿಕೊಳ್ಳಬೇಕು. ಇಂತಹ ಹಾನಿಕಾರಕಗಳನ್ನು ಯಾವುದೇ ಕಾರಣಕ್ಕೂ ಹೊರಕ್ಕೆ ಹರಿಯಲು ಬಿಡಬಾರದು. ಆಯಾ ಕಾರ್ಖಾನೆಯಲ್ಲಿರುವ ಘನತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಆಗುವಂತೆ ಮಾಡಬೇಕು. ಹೊರರಾಜ್ಯದ ಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುವುದನ್ನು ಕಡ್ಡಾಯಗೊಳಿಸಿ, ಆ ನಿಟ್ಟಿನಲ್ಲಿ ತಕ್ಷಣದಿಂದಲೇ ಕ್ರಮ ಕೈಗೊಳ್ಳಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ