ಚಳ್ಳಕೆರೆ
ತಾಲ್ಲೂಕಿನ ತಳಕು ಹೋಬಳಿಯ ಚಿತ್ರನಾಯಕನಹಳ್ಳಿ ಗ್ರಾಮದ ದೇವರ ಎತ್ತುಗಳಿಗೆ ಪ್ರತಿನಿತ್ಯ ಮೇವು ಸಿಗುತ್ತಿಲ್ಲ ಎಂಬ ವರದಿಯನ್ನು ಪತ್ರಿಕೆಯನ್ನು ಗಮನಿಸಿದ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಸ್ವಾಮಿ ಕೂಡಲೇ ಗ್ರಾಮದ ದೇವರ ಎತ್ತುಗಳಿಗೆ ಮೇವು ಪೂರೈಸುವ ಭರವಸೆ ನೀಡಿದ್ದಾರೆಂದು ಗೋರಕ್ಷಣಾ ಸಮಿತಿ ಸದಸ್ಯ ಸಿ.ಪಿ.ಮಹೇಶ್‍ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಸುದ್ದಿಯನ್ನು ಗಮನಿಸಿದ ಜಪಾನಂದ ಸ್ವಾಮೀಜಿ ಈಗಾಗಲೇ ಕಳೆದ ಕೆಲವು ತಿಂಗಳುಗಳಿಂದ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಸೇದೇವರಹಟ್ಟಿ, ಕುರುಡಿಹಳ್ಳಿ ಲಂಬಾಣಿ ಹಟ್ಟಿ ಮುಂತಾದ ಗ್ರಾಮಗಳ ದೇವರ ಎತ್ತುಗಳಿಗೆ ಮೇವನ್ನು ಉಚಿತವಾಗಿ ಪೂರೈಸಲಾಗುತ್ತಿದೆ.
ಚಿತ್ರನಾಯಕನಹಳ್ಳಿಯ ದೇವರ ಎತ್ತುಗಳಿಗೂ ಸಹ ಬೆಂಗಳೂರಿನ ಇನ್ಪೋಸಿಸ್ ಫೌಂಡೇಷನ್ ವತಿಯಿಂದ ಶೀಘ್ರದಲ್ಲೇ ಮೇವನ್ನು ಪೂರೈಸಲಾಗುವುದು. ಸುದ್ದಿಯನ್ನು ಗಮನಿಸಿದ ನಮ್ಮ ಆಶ್ರಮ ಕೂಡಲೇ ಬೆಂಗಳೂರಿನ ಇನ್ಪೋಸಿಸ್ ಫೌಂಡೇಷನ್ ಗಮನಕ್ಕೆ ಈ ಸುದ್ದಿ ತಿಳಿಸಿದಾಗ ಅವರು ಕೂಡಲೇ ತಾತ್ಕಾಲಿಕವಾಗಿಯಾದರೂ ಒಂದು ಲೋಡ್ ಮೇವನ್ನು ತಕ್ಷಣವೇ ಗ್ರಾಮಕ್ಕೆ ತಲುಪಿಸುವಂತೆ ಸೂಚನೆ ನೀಡಿದ್ಧಾರೆ.
ಅವರ ಸೂಚನೆ ಹಿನ್ನೆಲೆಯಲ್ಲಿ ಈಗಾಗಲೇ ಮೇವು ಪೂರೈಕೆಗಾಗಿ ನೇಮಿಸಿದ ನಮ್ಮ ಸಂಸ್ಥೆಯ ಸಿಬ್ಬಂದಿ ಮೇವಿನ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದು, ಒಂದೆರಡು ದಿನಗಳಲ್ಲಿ ಚಿತ್ರನಾಯಕನಹಳ್ಳಿ ಗ್ರಾಮದ ದೇವರ ಎತ್ತುಗಳಿಗೆ ಮೇವು ವಿತರಿಸಲಾಗುವುದು ಎಂದು ಭರವಸೆ ನೀಡಿರುತ್ತಾರೆ.
ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಮಳೆ ಸಂಪೂರ್ಣವಾಗಿ ವಿಫಲವಾಗಿದ್ದು, ತಾಲ್ಲೂಕಿನ ಲಕ್ಷಾಂತರ ಜಾನುವಾರುಗಳು ಮೇವು ಹಾಗೂ ನೀರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿವೆ. ಪ್ರತಿನಿತ್ಯ ಜಾನುವಾರುಗಳಿಗೆ ಮೇವು ನೀರು ಪೂರೈಸುವುದೇ ರೈತರಿಗೆ ಸವಾಲಿನ ಕೆಲಸವಾಗಿದ್ದು, ಜಿಲ್ಲಾಡಳಿತವಾಗಲಿ ತಾಲ್ಲೂಕು ಆಡಳಿತವಾಗಲಿ ಈ ಬಗ್ಗೆ ಗಮನಹರಿಸದೇ ಇರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತ ಪಡಿಸಿದ್ಧಾರೆ. ಕಡೇಯ ಪಕ್ಷ ಮಳೆ ಬರುವತನಕವಾದರೂ ತಾಲ್ಲೂಕಿನ ಜಾನುವಾರುಗಳಿಗೆ ಮೇವು ಬ್ಯಾಂಕ್ ಸ್ಥಾಪಿಸಿ ಮೇವು ನೀಡುವಂತೆ ಮಹೇಶ್ ಜಿಲ್ಲಾ ಆಡಳಿತಕ್ಕೆ ಮನವಿ ಮಾಡಿದ್ಧಾರೆ.