ಚಿಕ್ಕೋಡಿ:
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಹಾಗೂ ಕೊಲ್ಲಾಪೂರ ಜಿಲ್ಲೆಯ ವಿವಿಧ ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಪರಿಣಾಮ ಕೃಷ್ಣಾ, ವೇದಗಂಗಾ, ದೂದ್‌ಗಂಗಾ ಹಾಗು ಪಂಚಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ.
ಇದರಿಂದಾಗಿ ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯ ಅಥಣಿ, ಕಾಗವಾಡ, ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ನದಿತೀರದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ಮಹಾರಾಷ್ಟ್ರದಿಂದ ವೇದಗಂಗಾ, ದೂದಗಂಗಾ ಹಾಗು ಕೃಷ್ಣಾ ನದಿಗೆ 60 ಸಾವಿರ ಕ್ಯೂಸೆಕ್ಗಿಂತ ಹೆಚ್ಚು ನೀರು ಹರಿದು ಬರುತ್ತಿರುವುದರಿಂದ ಬೋಜ-ಹುನ್ನರಗಿ, ಕಾರದಗಾ-ಬೋಜ, ಸಿದ್ನಾಳ-ಅಕ್ಕೋಳ, ಭೋಜವಾಡಿ-ಕುನ್ನೂರ, ಮಲಿಕವಾಡ-ದತ್ತವಾಡ ಮತ್ತು ಕಲ್ಲೋಳ-ಯಡೂರ ಬ್ಯಾರೇಜ್ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ.
ನದಿಗಳ ನೀರಿನ ಒಳಹರಿವು ಹೆಚ್ಚಳ
ಚಿಕ್ಕೋಡಿ ಉಪವಿಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದರೂ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಕಾರಣ ಚಿಕ್ಕೋಡಿ ತಾಲೂಕಿನ ನದಿಗಳಿಗೆ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಬ್ಯಾರೇಜ್‌ಗೆ 56,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಬರುವ ನೀರಿನಷ್ಟೇ ಅವುಗಳನ್ನು ಹಿಪ್ಪರಗಿ ಬ್ಯಾರೇಜ್‌ನಿಂದ ಹೊರಗಡೆ ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.