ದಾವಣಗೆರೆ:
ತೀವ್ರ ಕುತೂಹಲ ಕೆರಳಿಸಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ವಿಷಯ ಇನ್ನೂ ಕಗ್ಗಂಟಾಗಿಯೇ ಮುಂದುವರೆದಿದ್ದು, ಇದು ಸೋಮವಾರ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಇದೆ.
ಹೌದು… ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರವು ದಾವಣಗೆರೆ ಕ್ಷೇತ್ರದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇನ್ನೂ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿಲ್ಲ ಎಂಬುದಾಗಿ ಮಾಧ್ಯಮಗಳಿಗೆ ತಿಳಿಸಿರುವ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಟಿಕೆಟ್ ಕಗ್ಗಂಟು ಮುಂದುವರೆದಿದೆ ಎಂಬುದಕ್ಕೆ ಪುಷ್ಠಿ ನೀಡಿದೆ.
ಶುಕ್ರವಾರ ರಾತ್ರಿ ಕಾಂಗ್ರೆಸ್ ಹೈಕಮಾಂಡ್ ಶಾಮನೂರು ಶಿವಶಂಕರಪ್ಪನವರ ಬದಲು ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ದಾವಣಗೆರೆ ಕ್ಷೇತ್ರದಿಂದ ಕಣಕ್ಕಿಳಿಸಲು ಮುಂದಾಗಿದ್ದು, ಅದಕ್ಕೆ ಮಲ್ಲಿಕಾರ್ಜುನ್ ಸಹ ಒಪ್ಪಿಗೆ ಸೂಚಿಸಿದ್ದಾರೆಂಬ ಸುದ್ದಿ ಹರಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಲ್ಲಿಕಾರ್ಜುನ್ ಅವರ ಪರ ಪ್ರಚಾರಕ್ಕೆ ಇಳಿದಿದ್ದರು. ಆದರೆ, ಶನಿವಾರ ಮತ್ತೆ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಮಲ್ಲಿಕಾರ್ಜುನ್ ಅಭ್ಯರ್ಥಿಯಾಗಿದ್ದಾರೆಂಬುದು ಕೇವಲ ಮಾಧ್ಯಮಗಳ ಸೃಷ್ಟಿಯಷ್ಟೇ ಎಂದು ಹೇಳುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತೆ ಗೊಂದಲಕ್ಕೆ ತಳ್ಳಿದ್ದಾರೆ.
ಶುಕ್ರವಾರ ಬೆಂಗಳೂರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪನವರನ್ನು ತಮ್ಮ ಜೊತೆಗೆ ಕರೆದೊಯ್ದಿದ್ದ ಮಲ್ಲಿಕಾರ್ಜುನ್ ಅವರು ಮಂಜಪ್ಪನವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದರು. ಆದರೆ, ಇದಕ್ಕೆ ಒಪ್ಪದ ಕಾಂಗ್ರೆಸ್ ವರಿಷ್ಠರು ಈಗಾಗಲೇ ಕುರುಬ ಸಮುದಾಯದವರಿಗೆ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗಿದ್ದು, ದಾವಣಗೆರೆ ಕ್ಷೇತ್ರದಿಂದಲೂ ಕುರುಬ ಸಮಾಜದ ಹೆಚ್.ಬಿ.ಮಂಜಪ್ಪನವರಿಗೆ ಟಿಕೆಟ್ ನೀಡಲಾಗುವುದಿಲ್ಲ. ಬೇಕಾದರೆ, ನಿಮ್ಮ ತಂದೆ(ಶಾಮನೂರು ಶಿವಶಂಕರಪ್ಪನವರ)ಯ ಬದಲು ನೀವೇ ಸ್ಪರ್ಧಿಸಿ ಎಂಬುದಾಗಿ ಮಲ್ಲಿಕಾರ್ಜುನ್‍ಗೆ ಸೂಚಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಮೊದಲೇ ಮೂರು ಲೋಕಸಭಾ ಚುನಾವಣೆಯಲ್ಲಿ ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕ್ಷೇತ್ರದಿಂದ ಸೋತಿರುವ ಎಸ್.ಎಸ್.ಮಲ್ಲಿಕಾರ್ಜುನ್ ಸ್ಪರ್ಧೆಯನ್ನು ನಿರಾಕರಿಸಿದ್ದರು. ಆದರೂ ಮತ್ತೆ ಕಾಂಗ್ರೆಸ್ ವರಿಷ್ಠರು ಅವರಿಗೇ(ಮಲ್ಲಿಕಾರ್ಜುನ್‍ರವರಿಗೆ) ಸ್ಪರ್ಧಿಸುವಂತೆ ಸೂಚನೆ ನೀಡಿರುವುದರಿಂದ ಇನ್ನೂ ಸ್ಪಷ್ಟವಾಗಿ ತಮ್ಮ ನಿರ್ಧಾರ ಹೈಕಮಾಂಡ್‍ಗೆ ತಿಳಿಸದೇ, ನಮ್ಮ ತಂದೆಯವರ ಜೊತೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿ, ಸೋಮವಾರದ ವರೆಗೂ ಕಾಲಾವಕಾಶ ಪಡೆದು ಬಂದಿದ್ದಾರೆಂದು ಕಾಂಗ್ರೆಸ್ ಪಕ್ಷದ ಬಲ್ಲ ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಈ ಬಾರಿ ಕಾಂಗ್ರೆಸ್ ಟಿಕೆಟ್ ಅಂತಿಮ ವಿಚಾರವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಿರಾಸೆಯ ಜೊತೆಗೆ ತೀವ್ರ ಕುತೂಹಲವನ್ನೂ ಸಹ ಉಂಟು ಮಾಡಿದ್ದು, ಸೋಮವಾರ ಸಂಜೆಯ ವೇಳೆಗೆ ಕಾಂಗ್ರೆಸ್ ಟಿಕೆಟ್ ಅಂತಿಮವಾಗುವ ಸಾಧ್ಯತೆ ಇದೆ.