ದಾವಣಗೆರೆ:
ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡಲು ಪ್ರತಿಭಾಪುರಸ್ಕಾರದಂಥಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ದಾವಣಗೆರೆ ವೀರಶೈವ ಲಿಂಗಾಯಿತ ನೌಕರರ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವಕ-ಯುವತಿಯರು ಇನ್ನೂ ಹೆಚ್ಚು ವಿದ್ಯಾಭ್ಯಾಸ ಮಾಡಲು ಪ್ರತಿಭಾ ಪುರಸ್ಕಾರ ಸ್ಫೂರ್ತಿ, ಪ್ರೇರಣೆ ನೀಡಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಅಧ್ಯಯನ ಉತ್ತಮ ಜೀವನಕ್ಕೆ ಮಾರ್ಗದರ್ಶಕವಾಗಿದ್ದು, ಹೆಚ್ಚಿನ ಆಸಕ್ತಿ ವಹಿಸಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಸಾಧನೆಗೆ ಪ್ರಯತ್ನಿಸಿದರೆ ಸಮಾಜಕ್ಕೆ ಮತ್ತು ಪೋಷಕರಿಗೆ ಕೀರ್ತಿ ತರಲು ಸಾಧ್ಯವಾಗಲಿದೆ ಎಂದರು.
ನೀವು ಆರಂಭಿಸುತ್ತಿರುವ ಪತ್ತಿನ ಸಹಕಾರ ಸಂಘದಲ್ಲಿ 600 ಸದಸ್ಯರು ಸೇರ್ಪಡೆಯಾಗಿ, ಸುಮಾರು 10 ಲಕ್ಷ ರೂ. ಷೇರು ಬಂಡವಾಳ ಸಂಗ್ರಹವಾಗಿರುವ ಬಗ್ಗೆ ಮಾಹಿತಿ ಇದ್ದು, ಈ ಸಂಘದ ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಸಮಾಜದ ಒಳಿತಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.
ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಓದಿನಲ್ಲಿ ಮುಂದಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಜೊತೆಗೆ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನೂ ಮೇಲೆತ್ತಲು ಪ್ರಯತ್ನಿಸಬೇಕು. ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುತ್ತಿರುವುದು ಒಳ್ಳೆಯ ಸಂಪ್ರದಾಯ. ಇದರಿಂದ ವಿದ್ಯಾರ್ಥಿಗಳ ಓದಿಗೆ ಹೆಚ್ಚಿನ ಸ್ಫೂರ್ತಿ ಸಿಗುತ್ತದೆ ಎಂದರು.
ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘ ಪ್ರಾರಂಭಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ನೌಕರರು ಮನೆಯಲ್ಲಿ ಹಣವನ್ನು ಕೂಡಿಡದೆ, ಸಂಘದಲ್ಲಿ ಬಂಡವಾಳ ಹೂಡಬೇಕು. ಬಡ್ಡಿ ಹಣಕ್ಕೆ ಆಸೆಪಡದೆ, ಸಹಕಾರ ಸಂಘವನ್ನು ಬೆಳೆಸುವತ್ತ ಗಮನ ಹರಿಸಬೇಕು. ಅಲ್ಲದೆ, ಕಾರ್ಯಕಾರಿ ಸಮಿತಿಯವರು ಯಾವುದೇ ಕಳಂಕ, ಲೋಪ ಬಾರದ ರೀತಿಯಲ್ಲಿ ಸಂಘವನ್ನು ಮುನ್ನಡೆಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ನಟರಾಜ್, ಆರಂಭದಲ್ಲಿ ಅಂದರೆ, 2006ರಲ್ಲಿ ಸಂಘ ಸ್ಥಾಪನೆಯಾದಾಗ ಕೇವಲ ಆರು ಜನ ಇದ್ದರು. ಈಗ 1800 ಜನ ಇದ್ದಾರೆ. ಪತ್ತಿನ ಸಹಕಾರ ಸಂಘದಲ್ಲಿ 12 ಲಕ್ಷ ರೂ. ಷೇರು ಬಂಡವಾಳ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ. ಶಿವಶಂಕರ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಬಿ. ನಿರಂಜನ್, ಡಾ|| ಕೆ. ಶಿವಪ್ರಸಾದ್, ಎ.ಆರ್. ಉಜ್ಜಿನಪ್ಪ, ಕಲ್ಪನಾ ರವೀಂದ್ರನಾಥ್, ಪ್ರಸಾದ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
