ಚಿತ್ರದುರ್ಗ:
ಇರುವ ಸಂಪನ್ಮೂಲಗಳನ್ನೆ ಬಳಸಿಕೊಂಡು ಕುಡಿಯುವ ನೀರಿಗೆ ಬರಗಾಲವಾಗದಂತೆ ಶಾಶ್ವತ ಯೋಜನೆ ರೂಪಿಸಿಕೊಳ್ಳಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಪಿ.ಡಿ.ಓ.ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಕೆ.ಡಿ.ಪಿ.ಸಭೆಯಲ್ಲಿ 2010 ರಿಂದಲೂ ಚಿತ್ರದುರ್ಗ ಬರಗಾಲವನ್ನು ಎದುರಿಸುತ್ತಾ ಬರುತ್ತಿದೆ. ಈಗ ಬರವಿದೆ. ಮುಂದೆಯೂ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು. ಹಳ್ಳಿಗಾಡಿನ ಜನತೆಗೆ ಶಾಶ್ವತವಾಗಿ ಕುಡಿಯುವ ನೀರು ಕೊಡಬೇಕಾಗಿರುವುದು ನಮ್ಮ ಜವಾಬ್ದಾರಿ. ಹಾಗೂ ಎಲ್ಲಿಯೂ ಬೋರ್‍ವೆಲ್ ವಿಫಲವಾಗದಂತೆ ನಿಗಾಹರಿಸಿ. ರೈತರ ಬೋರ್ ಇಲ್ಲದ ಜಮೀನುಗಳನ್ನು ಗುರುತಿಸಿ ಅಲ್ಲಿ ಕೊಳವೆಬಾವಿಗಳನ್ನು ಕೊರೆಸಿ ಎಷ್ಟೆ ದೂರವಾದರೂ ಪೈಪ್‍ಲೈನ್ ಮೂಲಕ ಕುಡಿಯುವ ನೀರು ಕೊಡಿ ಎಂದು ಅಧಿಕಾರಿಗಳಿಗೆ ಮತ್ತು ಪಿ.ಡಿ.ಓ.ಗಳಿಗೆ ತಾಕೀತು ಮಾಡಿದರು.
ಸೊಂಡೆಕೊಳ ಸಮೀಪ ಅರಣ್ಯ ಪ್ರದೇಶದಲ್ಲಿ ನೀರು ಸಿಗುವ ಜಾಗವನ್ನು ಗುರುತಿಸಿ ಬೋರ್ ಕೊರೆಸಿ. ಅದೇ ರೀತಿ ಎಲ್ಲೆಲ್ಲಿ ಬೋರ್‍ವೆಲ್‍ಗಳನ್ನು ಕೊರೆಸಲು ಸಾಧ್ಯವೋ ಅಲ್ಲೆಲ್ಲ ಕೊಳವೆಬಾವಿಗಳನ್ನು ಕೊರೆಸಿ ಗ್ರಾಮೀಣ ಪ್ರದೇಶದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಕೊಡಿ ಎಂದು ಅಧಿಕಾರಿಗಳಿಗೆ ಕಟ್ಟಪ್ಪಣೆ ನೀಡಿದರು.
ಚಿತ್ರದುರ್ಗ ತಾಲೂಕಿನಾದ್ಯಂತ 2019-20 ನೇ ಸಾಲಿನಲ್ಲಿ ಕುಡಿಯುವ ನೀರಿಗೆ ಕ್ರಿಯಾ ಯೋಜನೆ ಹಮ್ಮಿಕೊಂಡಿದ್ದೀರಾ ಎಂದು ವಾಟರ್ ಸಪ್ಲೈ ಇಂಜಿನಿಯರ್ ಶಿವಮೂರ್ತಿಯನ್ನು ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ ಪ್ರಶ್ನಿಸಿದಾಗ 31 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದೇವೆಂದು ಉತ್ತರಿಸಿದಾಗ ನೀವುಗಳು ಸೂಪರ್‍ವೈಸಿಂಗ್ ಮಾಡುತ್ತಿಲ್ಲ.
ತುಂಬಾ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದೀರಿ, ಮೂರು ತಿಂಗಳಾದರೂ ಟ್ಯಾಂಕರ್ ನಿಲ್ಲಿಸಲ್ಲ ಎಂದು ಅಸಮಾಧಾನಗೊಂಡಾಗ ಒಂಬತ್ತು ಕೋಟಿ ರೂ.ಗಳಿಗೆ ಕ್ರಿಯಾ ಯೋಜನೆ ಅಲೋಕೇಷನ್ ಬಂದಿದೆ. ಕ್ರಿಯಾ ಯೋಜನೆ ಇಲ್ಲದೆಯೇ 240 ಬೋರ್‍ಗಳನ್ನು ಕೊರೆದಿದ್ದೇವೆ. ಅನಿವಾರ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಕ್ರಿಯಾ ಯೋಜನೆ ಹೊರತು ಪಡಿಸಿ ಎರಡುವರೆಯಿಂದ ಮೂರು ಕೋಟಿ ರೂ.ಗಳನ್ನು ಕುಡಿಯುವ ನೀರಿಗೆ ವ್ಯಯಿಸಲಾಗಿದೆ ಎಂದು ಇಂಜಿನಿಯರ್ ಶಿವಮೂರ್ತಿ ಸಭೆಗೆ ಮಾಹಿತಿ ನೀಡಿದರು.
ಹಣ ಇಲ್ಲ ಎಂದು ನೆಪ ಹೇಳಿ ನಿಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಬೇಡ. ನಾವು ಯಾರದಾದರೂ ಕೈಕಾಲು ಹಿಡಿದು ಅನುದಾನ ತರುತ್ತೇವೆ. ಹಳ್ಳಿಗಳಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಿಮ್ಮ ಹೊಣೆ. ಪಿ.ಡಿ.ಓ.ಮೇಲೆ ಅಧಿಕಾರಿಗಳು, ಅಧಿಕಾರಿಗಳ ಮೇಲೆ ಪಿ.ಡಿ.ಓ.ಗಳು ಹೇಳಿಕೊಂಡು ಸಮಯ ವ್ಯರ್ಥ ಮಾಡಬೇಡಿ. ಇಬ್ಬರು ಸಹಕಾರದಿಂದ ಕೆಲಸ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ.ಲಿಂಗರಾಜು ಅಧಿಕಾರಿಗಳು ಹಾಗೂ ಪಿ.ಡಿ.ಓ.ಗಳನ್ನು ಎಚ್ಚರಿಸಿದರು.
ನಗರದಲ್ಲಿ ಸಕ್ಕರೆ ಕಾಯಿಲೆಗೆ ತುತ್ತಾಗಿರುವವರ ಮಾಹಿತಿ ತಿಳಿದುಕೊಂಡು ಪ್ರತಿ ತಿಂಗಳ ಸಭೆಯಲ್ಲಿ ಸಿರಿಧಾನ್ಯಗಳ ಆಹಾರ ಪದ್ದತಿಯ ಉಪಯೋಗಗಳ ಕುರಿತು ಜನರಿಗೆ ತಿಳಿಸಿ. ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವ್ಯಾವ ರೀತಿ ಸೌಲಭ್ಯಗಳಿವೆ ಎಂಬುದನ್ನು ಕರಪತ್ರಗಳ ಮೂಲಕ ಮಾಹಿತಿ ಕೊಡಿ. ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷರು, ಸದಸ್ಯರು ಹಾಗೂ ಪಿ.ಡಿ.ಓ.ಗಳನ್ನಿಟ್ಟುಕೊಂಡು ಕಾರ್ಯಕ್ರಮ ರೂಪಿಸಿ ಸರ್ಕಾರದ ಯೋಜನೆಗಳು ಬಡವರಿಗೆ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ ತಿಳಿಸಿದರು.
ಹಣ ಬಿಡುಗಡೆಗೊಳಿಸಿ ಒಂದು ವರ್ಷವಾದರೂ ಕೆಲವು ಅಂಗನವಾಡಿಗಳಲ್ಲಿ ಇನ್ನು ಶೌಚಾಲಯಗಳು ಏಕೆ ನಿರ್ಮಾಣವಾಗಿಲ್ಲ. ಶೌಚಾಲಯ ಕಟ್ಟಲು ವಾದ ಬೇಡ. ಒಬ್ಬರ ಮೇಲೆ ಒಬ್ಬರು ನೆಪ ಹೇಳುವುದರಲ್ಲಿ ನಿಸ್ಸೀಮರು ಎಂದು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಿ.ಡಿ.ಓ.ಗಳ ಮೇಲೆ ಕಾರ್ಯನಿರ್ವಹಣಾಧಿಕಾರಿ ಗರಂ ಆದರು.
ಚಿತ್ರದುರ್ಗ ತಾಲೂಕಿನಲ್ಲಿ 247 ಅಂಗನವಾಡಿ ಕೇಂದ್ರಗಳಿದ್ದು, 114 ಬಾಡಿಗೆ ಕಟ್ಟಡದಲ್ಲಿವೆ. 11 ಕೇಂದ್ರಗಳು ಶಾಲೆಯಲ್ಲಿವೆ. ಪಂಚಾಯಿತಿ ಕಟ್ಟಡದಲ್ಲಿ ಎರಡು, ಸಮುದಾಯ ಭವನದಲ್ಲಿ 11, ಇತರೆ ಮೂರು ಕಡೆ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಗರ್ಭಿಣಿ, ಬಾಣಂತಿಯರಿಗೆ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮಾತೃವಂದನಾ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸಿ.ಡಿ.ಪಿ.ಓ. ಸಭೆಗೆ ಮಾಹಿತಿ ನೀಡಿದರು.ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಭೆಯಲ್ಲಿ ಭಾಗವಹಿಸಿದ್ದರು.
ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಿ.ಡಿ.ಓ.ಗಳು ಸಭೆಯಲ್ಲಿದ್ದರು.