ಬೆಂಗಳೂರು
ರಾಜ್ಯದಲ್ಲಿ ಬರಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಕೊರತೆ ಕಾಣಿಸಿಕೊಳ್ಳದಂತೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಇಂದು ಟಾಸ್ಕ್ ಫೋರ್ಸ್ ಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಬರಪರಿಸ್ಥಿತಿ ಗಂಭೀರವಾಗಿರುವುದರಿಂದ ತುರ್ತಾಗಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಟಾಸ್ಕ್ ಫೋರ್ಸ್ ಗಳನ್ನು ರಚನೆ ಮಾಡಿ ಅನುದಾನ ಒದಗಿಸಲಾಗಿದೆ. ಈ ಟಾಸ್ಕ್ ಫೋರ್ಸ್ ಗಳು ಸಮರೋಪಾದಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಂಡು ಅನುಷ್ಠಾನಗೊಳಿಸಬೇಕು.ಯಾವ ಕಾರಣದಿಂದಲೂ ನಿರ್ಲಕ್ಷಿಸಕೂಡದು ಎಂದಿದ್ದಾರೆ.
ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಇಂದು ಈ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನೊಳಗೊಂಡ ಉನ್ನತಾಧಿಕಾರಿಗಳ ಸಭೆಯನ್ನು ನಡೆಸಿದ ಸಚಿವರು, ರಾಜ್ಯದ 176 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಇಲ್ಲಿ ತುರ್ತಾಗಿ ನೀರು ಪೂರೈಕೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಇದರಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.
ಅವಶ್ಯ ಕಾಮಗಾರಿಗಳಿಗೆ ಟೆಂಡರ್ ಕರೆದು ಕಾರ್ಯಾದೇಶ ನೀಡಲು ಹಾಗೂ ಕಾಮಗಾರಿ ಅನುಷ್ಠಾನಗೊಳಿಸಲು ಚುನಾವಣಾ ಆಯೋಗ ಒಪ್ಪಿಗೆ ನೀಡಿರುವುದರಿಂದ ತುರ್ತಾಗಿ ಅಲ್ಪಾವಧಿ ಟೆಂಡರ್ ಗಳನ್ನು ಕರೆದು ಕುಡಿಯುವ ನೀರಿನ ಕಾಮಗಾರಿಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ಅವಶ್ಯಕತೆ ಇರುವ ಕಡೆ ಹೊಸ ಕೊಳವೆ ಬಾವಿಗಳನ್ನು ಕೊರೆಯುವ ಅಗತ್ಯತೆಯನ್ನು ಪರಿಗಣಿಸಿ ಪ್ರತಿ ತಾಲೂಕಿಗೆ ಒಂದು ಅಥವಾ ಎರಡು ಬೋರ್ ವೆಲ್ ಕೊರೆಯುವ ಏಜೆನ್ಸಿಗಳನ್ನು ಟೆಂಡರ್ ಮೂಲಕ ಗುರುತಿಸಲಾಗುತ್ತಿದೆ. ಅವಧಿಯನ್ನು 15 ತಿಂಗಳ ಅವಧಿಗೆ ಸಿದ್ದಪಡಿಸುವಂತೆ ಕೊಳವೆ ಬಾವಿಗಳಿಂದ ಸಂಪರ್ಕ ಕಲ್ಪಿಸಲು ಜಿಲ್ಲಾಧಿಕಾರಿಗಳ ಬಳಿ ಇರುವ ಎನ್ ಡಿಆರ್ ಎಫ್/ಎಸ್ ಡಿಆರ್ ಎಫ್ ಅಥವಾ ಗ್ರಾಮ ಪಂಚಾಯಿತಿಗಳ ಅನುದಾನವನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಈ ಹಣ ಸಾಕಾಗದೇ ಕೊರತೆ ಬಂದಲ್ಲಿ ಟಾಸ್ಕಪೋರ್ಸ್ ಗಳಿಗೆ ಒದಗಿಸಲಾದ ಅನುದಾನ ಬಳಸಿಕೊಳ್ಳಲು ಸೂಚಿಸಿದೆ. ಅಲ್ಲದೆ ಈ ಬಗ್ಗೆ ಅಗತ್ಯವಾದ ಸುತ್ತೋಲೆಯನ್ನು ಸಹ ಹೊರಡಿಸಿದೆ ಎಂದು ಹೇಳಿದ್ದಾರೆ.
ಒಣಗಿದ ಕೊಳವೆ ಬಾವಿಗಳಿಂದ ಬಂದಂತಹ ಸಾಮಾಗ್ರಿಗಳನನು ಶೇಖರಿಸಿ ಹೊಸ ಕೊಳವೆ ಬಾವಿಗಳಿಗೆ ಬೇಕಾಗುವ ಪಂಪ್ ಸೆಟ್, ಜಿಐ ಪೈಟ್ ಹಾಗೂ ಕೇಬಲ್ ಗಳನ್ನು ಕಡ್ಡಾಯವಾಗಿ ಉಪಯೋಗಿಸಲು ತಿಳಿಸಲಾಗಿದೆ. ಈ ಮೂಲಕ ಅನಗತ್ಯ ದುಂದುವೆಚ್ಚವನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ಈ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ರೀತಿಯ ಲೋಪ ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.