ತೋವಿನಕೆರೆ
ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದ್ದ ಕರಡಿಯೊಂದು ಕಂಬಿಯನ್ನು ಬಗ್ಗಿಸಿ ತೂರಿಕೊಂಡು ಹೊರಬಂದು ಓಡಿಹೋಗಿರುವ ಘಟನೆ ಶನಿವಾರ ರಾತ್ರಿ ತೋವಿನಕೆರೆಯಲ್ಲಿ ನಡೆದಿದೆ.
ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೂರೇನಹಳ್ಳಿ ಎಸ್.ಎನ್. ಸಿದ್ಧಪ್ಪನಿಡಗಲ್ಲಯ್ಯನವರ ಸಪೋಟ ತೋಟದಲ್ಲಿ ಹಣ್ಣುಗಳು ಸಮೃದ್ಧಿಯಾಗಿ ಬಿಟ್ಟಿವೆ. ಕಳೆದ ತಿಂಗಳಿಂದ ಕರಡಿಯೊಂದು ಪ್ರತಿದಿನ ಸಪೋಟ ಹಣ್ಣಿಗಾಗಿ ಬರುವುದನ್ನು ರೈತರು ನೋಡಿದ್ದರು. ಅಲ್ಲದೆ ಕಳೆದ ತಿಂಗಳು ಸಮೀಪದಲ್ಲಿರುವ ಕಾಕಡ ಹೂವಿನ ತೋಟದಲ್ಲಿ ಕರೀಂಸಾಬ್ ಮತ್ತು ಅವರ ಪತ್ನಿ ಮೇಲೆ ಕರಡಿ ದಾಳಿ ಮಾಡಿ ಇಬ್ಬರೂ ಗಾಯಗೊಂಡು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲದರ ಬಗ್ಗೆ ರೈತರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರು. ಹಾಗಾಗಿ ಇಲಾಖೆಯವರು ಕರಡಿ ಹಿಡಿಯಲು ಬೋನ್ ಇಟ್ಟಿದ್ದರು.
ಶನಿವಾರ ರಾತ್ರಿ ಬೋನಿಗೆ ಬಿದ್ದಿರುವ ಕರಡಿ ಹಲವು ಗಂಟೆಗಳ ಕಾಲ ಒದ್ದಾಟ ನಡೆಸಿದೆ. ಬೋನನ್ನು ಪರಚಿರುವುದು, ಪ್ಲಾಸ್ಟಿಕ್ ವೈರನ್ನು ಕಿತ್ತಿರುವುದು, ಮಲ, ಮೂತ್ರ ವಿಸರ್ಜಿಸಿರುವುದು ಬೋನ್ ಒಳಗಡೆ ಕಂಡು ಬಂದಿದೆ. ಬೋನಿನ ಗೇಟ್ ಕಂಬಿಯನ್ನು ಬಗ್ಗಿಸಿ ಕರಡಿ ಹೊರಬಂದು ತಪ್ಪಿಸಿಕೊಂಡು ಓಡಿ ಹೋಗಿದೆ. ಕರಡಿಯು ಹಲವು ದಿನಗಳಿಂದ ತೋಟಕ್ಕೆ ಬಂದು ಸಪೋಟ ಗಿಡಗಳ ಕೊಂಬೆಯನ್ನು ಮುರಿದು ಹಾಕುತ್ತಿತ್ತು.
ಕರಡಿ ತಪ್ಪಿಸಿಕೊಂಡ ಸ್ಥಳಕ್ಕೆ ನೂರಾರು ಜನ ಗುಂಪು ಗುಂಪಾಗಿ ಆಗಮಿಸಿ ಕರಡಿಯ ಕೂದಲಿಗಾಗಿ ಹುಡುಕುತ್ತಿದ್ದುದು ಕಂಡು ಬಂದಿತು. ಕರಡಿಯ ಓಡಾಟವನ್ನು ಅರಿತಿದ್ದ ರೈತರು ಅರಣ್ಯ ಇಲಾಖೆಗೆ ನಿಖರ ಮಾಹಿತಿಯನ್ನು ನೀಡುತ್ತಿದ್ದರು. ಅದು ಈಗ ಸತ್ಯವಾಗಿದೆ. ಅರಣ್ಯ ಇಲಾಖೆಯವರು ಅತಿ ಶೀಘ್ರವಾಗಿ ತಪ್ಪಿಸಿಕೊಂಡಿರುವ ಕರಡಿಯನ್ನು ಹಿಡಿದು ಜನರ ಪ್ರಾಣ ರಕ್ಷಣೆ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








