ಹೊನ್ನಾಳಿ:
ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಚುನಾವಣಾಧಿಕಾರಿಗಳು ಕೈಗೊಳ್ಳುತ್ತಿದ್ದಾರೆ. ಏ.23ರಂದು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ತಾಲೂಕಿನ ವಿವಿಧ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣಾ ಕಾರ್ಯ ತೀವ್ರ ಚುರುಕುಗೊಂಡಿದೆ.
ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಬೆನಕನಹಳ್ಳಿ ಕ್ರಾಸ್ ಬಳಿಯ ಚೆಕ್‍ಪೋಸ್ಟ್‍ನಲ್ಲಿ ಮಂಗಳವಾರ ತಪಾಸಣಾ ಕೇಂದ್ರದ ಮುಖ್ಯಸ್ಥ, ತಾಲೂಕಿನ ಕೂಲಂಬಿ ಗ್ರಾಪಂ ಪಿಡಿಒ ಜಗದೀಶ್ ಕಂಬಳಿ ಮತ್ತು ಇತರ ಸಿಬ್ಬಂದಿ ವಾಹನಗಳನ್ನು ಪರಿಶೀಲಿಸಿದರು. ಚೆಕ್‍ಪೋಸ್ಟ್ ಪರಿಶೀಲನೆ, ವಾಹನಗಳ ತಪಾಸಣೆ, ಅದರಲ್ಲಿನ ವಸ್ತುಗಳು ಹಾಗೂ ಅವುಗಳಿಗೆ ಸಂಬಂಧಿಸಿದ ವೋಚರ್‍ಗಳು, ಬಿಲ್‍ಗಳ ಪರಿಶೀಲನೆ ನಡೆಸಿದರು.
ಚುನಾವಣಾ ಅಕ್ರಮಗಳನ್ನು ತಡೆಯುವುದು ಚೆಕ್‍ಪೋಸ್ಟ್‍ಗಳ ಮೂಲ ಉದ್ದೇಶ. ಆದ್ದರಿಂದ, ಚೆಕ್‍ಪೋಸ್ಟ್‍ಗಳ ಮೂಲಕ ಹಾದುಹೋಗುವ ಎಲ್ಲಾ ವಾಹನಗಳನ್ನೂ ಪರಿಶೀಲಿಸಲಾಗುತ್ತಿದೆ. ಪ್ರತಿ ದಿನ ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸಹಾಯಕ ಚುನಾವಣಾಧಿಕಾರಿ ಸುರೇಶ್ ರೆಡ್ಡಿ, ತಹಸೀಲ್ದಾರ್ ಮಲ್ಲಿಕಾರ್ಜುನ್ ಮತ್ತಿತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಜಗದೀಶ್ ಕಂಬಳಿ ತಿಳಿಸಿದರು. ಗೊಲ್ಲರಹಳ್ಳಿ ಚೆಕ್‍ಪೋಸ್ಟ್ ತಪಾಸಣಾ ಕೇಂದ್ರದ ಸಹಾಯಕ, ತಾಲೂಕಿನ ತಿಮ್ಲಾಪುರ ಗ್ರಾಪಂ ಎಸ್‍ಡಿಎಎ ಎನ್. ವಿರೂಪಾಕ್ಷಪ್ಪ, ಹೊನ್ನಾಳಿ ಪೊಲೀಸ್ ಠಾಣೆಯ ಪಿಸಿ ಎಚ್.ಎಲ್. ಉಮೇಶ್ ಇದ್ದರು.