ಬೆಂಗಳೂರು
ತಮಿಳುನಾಡಿನಿಂದ ಒಂದು ಬೈಕ್‍ನಲ್ಲಿ ಬಂದು ಮತ್ತೊಂದು ಹೊಸ ಬುಲೆಟ್ ಇಲ್ಲವೇ ಪಲ್ಸರ್ ಬೈಕ್ ಕದ್ದು ಪರಾರಿಯಾಗಿ ತಮಿಳುನಾಡಿನಲ್ಲಿ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಇಬ್ಬರು ಅಂತರಾಜ್ಯ ಬೈಕ್ ಕಳ್ಳರನ್ನು ಬಂಧಿಸಿರುವ ಪರಪ್ಪನ ಅಗ್ರಹಾರ ಪೊಲೀಸರು 25 ಬೈಕ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಂತರಾಜ್ಯ ಬೈಕ್ ಕಳ್ಳರಾದ ತಮಿಳುನಾಡಿನ ವೇಲೂರು ಜಿಲ್ಲೆಯ ಚಿನ್ನಪಾಂಬಕುಟೈ (27), ಕೃಷ್ಣಗಿರಿ ಜಿಲ್ಲೆಯ ಅತುಪಾಲ್ಯಂನ ಪ್ರಭಾಕರನ್ (31)ನನ್ನು ಬಂಧಿಸಿ 15 ಲಕ್ಷ ಮೌಲ್ಯದ 25 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.
ಆರೋಪಿಗಳು ತಮಿಳುನಾಡಿನಿಂದ ಪರಪ್ಪನ ಅಗ್ರಹಾರ, ಹುಳಿಮಾವು, ಬೊಮ್ಮನಹಳ್ಳಿಗೆ ಒಂದೇ ಬೈಕ್‍ನಲ್ಲಿ ಬಂದು ಹೊಸ ಪಲ್ಸರ್ ಬುಲೆಟ್ ಬೈಕ್‍ಗಳನ್ನು ಗುರುತಿಸಿ, ಕ್ಷಣಾರ್ಧದಲ್ಲಿ ಹ್ಯಾಂಡಸ್ ಲಾಕ್ ಮುರಿದು ಬೈಕ್ ತೆಗೆದುಕೊಂಡು ತಮಿಳುನಾಡಿಗೆ ಪರಾರಿಯಾಗುತ್ತಿದ್ದರು.
ಅಲ್ಲಿ ಕಳವು ಮಾಡಿದ ಬೈಕ್‍ಗಳನ್ನು ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಆರೋಪಿಗಳು ಕಳವು ಮಾಡಿದ್ದ ಪರಪ್ಪನ ಅಗ್ರಹಾರದ 7, ಹುಳಿಮಾವು-ಹೆಚ್‍ಎಸ್‍ಆರ್‍ನ ತಲಾ 3, ಮೈಕೋ ಲೇಔಟ್-ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿಯ ತಲಾ 2, ಬೆಳ್ಳಂದೂರಿನ 1 ಸೇರಿ 20 ಬೈಕ್‍ಗಳು ಪತ್ತೆಯಾಗಿವೆ.
ಕ್ಷಣಾರ್ಧದಲ್ಲಿ ಕಳವು
ಆರೋಪಿಗಳಿಂದ ವಶಪಡಿಸಿಕೊಂಡಿರುವ ಇನ್ನು 5 ಬೈಕ್‍ಗಳ ವಾರಸುದಾರರ ಪತ್ತೆ ಕಾರ್ಯ ಮುಂದುವರೆಸಲಾಗಿದೆ. ಬಂಧಿತರು ತಾವು ತಂದಿದ್ದ ಬೈಕ್‍ನಲ್ಲಿ ಸುತ್ತಾಡುತ್ತ ಹೊಸ ಪಲ್ಸರ್ ಹಾಗೂ ಬುಲೆಟ್ ಬೈಕ್‍ಗಳನ್ನು ಗುರುತಿಸಿ ಕಳವು ಮಾಡುತ್ತಿದ್ದರು.
ಆರೋಪಿ ನಾರಾಯಣ್ ವಿರುದ್ಧ ರಾಚಮಂಗಲಂ ಹಾಗೂ ಪ್ರಭಾಕರನ್ ವಿರುದ್ಧ ಊತ್ತಂಗರೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ಕಳುವಾಗಿದ್ದ ಬುಲೆಟ್ ಬೈಕ್‍ವೊಂದರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಇನ್ಸ್‍ಪೆಕ್ಟರ್ ಕಿಶೋರ್ ಮತ್ತವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
