ಬೆಂಗಳೂರು:
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನಾಯಕರ ನಡುವೆ ಪೈಪೋಟಿ ಆರಂಭಗೊಂಡಿದೆ.ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ನೂತನ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭಗೊಳ್ಳಲಿದ್ದು ಈಗಾಗಲೇ ಆಕಾಂಕ್ಷಿಗಳು ಪರಸ್ಪರ ಪೈಪೋಟಿಯಲ್ಲಿ ತೊಡಗಿ ವರಿಷ್ಠರ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮೂರು ಪ್ರಭಾವಿಗಳು ಪೈಪೋಟಿ ನಡೆಸುತ್ತಿದ್ದಾರೆ. ಒಕ್ಕಲಿಗ, ಭೋವಿ, ದಲಿತ ಸಮುದಾಯದ ನಾಯಕರ ನಡುವೆ ತ್ರಿಕೋನ ರೇಸ್ ನಡೆಯುತ್ತಿದ್ದು, ತೆರೆಮರೆಯಲ್ಲೇ ಕಸರತ್ತು ಆರಂಭವಾಗಿದೆ.ಒಂದೆಡೆ ಹಾಲಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತೊಂದೆಡೆ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ತಮ್ಮ ಆಪ್ತರನ್ನು ನೇಮಿಸಲು ಯತ್ನಿಸುತ್ತಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮತ್ತು ಹಿರಿಯ ನಾಯಕ ಗೋವಿಂದ ಕಾರಜೋಳ ರಾಜ್ಯಾಧ್ಯಕ್ಷ ಹುದ್ದೆಯ ರೇಸ್‍ನಲ್ಲಿದ್ದು,ಯಡಿಯೂರಪ್ಪ ನಂತರ ಹುದ್ದೆ ಅಲಂಕರಿಸುವ ಕನಸಿನಲ್ಲಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಸಧ್ಯ ಅಧ್ಯಕ್ಷ ಸ್ಥಾನ ಇರುವ ಕಾರಣ ಮತ್ತೊಂದು ಪ್ರಭಾವಿ ಸಮುದಾಯವಾದ ಒಕ್ಕಲಿಗ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಬೇಕು ಎನ್ನುವ ಮಾತು ಕೇಳಿ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಾಜಿ ಡಿಸಿಎಂ ಆರ್. ಅಶೋಕ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಾಬಿ ಆರಂಭಿಸಿದ್ದಾರೆ.
ಈಗಾಗಲೇ ಈ ಬಾರಿಯ ಲೋಕಸಭಾ ಚುನಾವಣೆ ಪ್ರಚಾರ ಸಮಿತಿ ರಾಜ್ಯ ಸಂಚಾಲಕರಾಗಿ ಯಶಸ್ವಿ ನಿರ್ವಹಣೆ ತೋರಿರುವ ಅಶೋಕ್ 24 ರ್ಯಾಲಿಗಳನ್ನು ಯಶಸ್ವಿಯಾಗಿ ನಡೆಸಿ ರಾಷ್ಟ್ರೀಯ ನಾಯಕರ ಮನ ಗೆದ್ದಿದ್ದಾರೆ. ಯಡಿಯೂರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡು ಬಂದಿರುವ ಅವರು ಕೋರ್ ಕಮಿಟಿ, ಪಕ್ಷದ ಪ್ರಮುಖ ಸಭೆಗಳು ನಡೆದರೆ ಅದರ ಸುದ್ದಿಗೋಷ್ಟಿಗಳನ್ನು ನಡೆಸಿ ಪಕ್ಷದ ಪ್ರಮುಖ ನಿರ್ಣಯಗಳನ್ನು ಪ್ರಕಟಿಸುವ, ವಿವರಗಳನ್ನು ನೀಡುವ ಗುರುತರ ಜವಾಬ್ದಾರಿ ವಹಿಸಿಕೊಂಡಿದ್ದು ಯಡಿಯೂರಪ್ಪ ನಂತರ ಹುದ್ದೆ ಅಲಂಕರಿಸುವ ತಂತ್ರ ಮಾಡುತ್ತಿದ್ದಾರೆ.
ಈ ಇಬ್ಬರು ನಾಯಕರ ಪೈಪೋಟಿ ಜೊತೆ ದಲಿತ ಸಮುದಾಯದ ನಾಯಕ ಗೋವಿಂದ ಕಾರಜೋಳ ಕೂಡ ರೇಸ್ ಗಿಳಿದಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ನಾಯಕರ ನಡುವೆ ಕಲಹ ಎದುರಾದಾಗಲೆಲ್ಲಾ ತಮ್ಮ ನಿವಾಸದಲ್ಲಿ ಸಭೆ ನಡೆಸಿ ಸಮಸ್ಯೆ ಪರಿಹರಿಸುತ್ತಿದ್ದರು.
ಇದನ್ನೇ ಮುಂದಿಟ್ಟು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವೆ ಎನ್ನುವ ಸಂದೇಶವನ್ನು ಮುಂದಿಟ್ಟು, ಲಿಂಗಾಯತ, ಒಕ್ಕಲಿಗ ಅಲ್ಲದೆ ಇತರೆ ಸಮುದಾಯದ ವಿಷಯ ಬಂದಾಗ ಸಹಜವಾಗಿ ದಲಿತ ಸಮುದಾಯಕ್ಕೆ ಆದ್ಯತೆ ಎನ್ನುವುದನ್ನು ಮನಗಂಡಿರುವ ಕಾರಜೋಳ ತೆರೆಮರೆಯಲ್ಲೇ ತಂತ್ರಗಾರಿಕೆ ನಡೆಸುತ್ತಿದ್ದಾರೆ.
ಈ ಮೂವರ ರೇಸ್ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕೂಡ ತಮ್ಮ ತಮ್ಮ ಆಪ್ತರನ್ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲು ಪ್ರಯತ್ನ ನಡೆಸದೇ ಇರಲಾರರು. ಯಡಿಯೂರಪ್ಪ ಒಲವು ಯಾರ ಮೇಲಿದೆ ಎನ್ನುವುದು ಇನ್ನೂ ನಿಗೂಢವಾಗಿದ್ದರೂ ಲಿಂಬಾವಳಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಆದರೆ ಬಿ.ಎಲ್ ಸಂತೋಷ್ ಮಾತ್ರ ಮಾಜಿ ಸಚಿವ ಸಿ.ಟಿ ರವಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲು ಉತ್ಸುಕತೆ ತೋರಿದ್ದಾರೆ ಎಂದು ಪಕ್ಷದ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ರೇಸ್ ಲಿಸ್ಟ್‍ನಲ್ಲಿ ಸಿ.ಟಿ ರವಿ,ಶೋಭಾ ಕರಂದ್ಲಾಜೆ ಹೆಸರು ಕೂಡ ಆಗಾಗ ಕೇಳಿಬಂದಿದ್ದರೂ ಅಶೋಕ್,ಅರವಿಂದ ಲಿಂಬಾವಳಿ ನಡುವೆಯೇ ನೇರ ಪೈಪೋಟಿ ಇದ್ದರೂ ಮೂರನೇ ಆಯ್ಕೆಯಾಗಿ ಕಾರಜೋಳ ಹೆಸರಿದೆ.ಯಡಿಯೂರಪ್ಪ ಹಾಗೂ ಸಂತೋಷ ಯಾರ ಹೆಸರಿಗೆ ಸಮ್ಮತಿ ನೀಡುತ್ತಾರೆ ಎನ್ನುವುದನ್ನು ಅವಲಂಭಿಸಿ ನೂತನ ರಾಜ್ಯಾಧ್ಯಕ್ಷರ ನೇಮಕ ಅಂತಿಮಗೊಳ್ಳಲಿದೆ.
ಹುದ್ದೆ ನಿಯಮದ ಅನ್ವಯ ರಾಜ್ಯಾಧ್ಯಕ್ಷ ಇಲ್ಲವೇ ಪ್ರತಿಪಕ್ಷ ನಾಯಕನ ಸ್ಥಾನ ಎರಡರಲ್ಲಿ ಒಂದನ್ನು ಮಾತ್ರ ಯಡಿಯೂರಪ್ಪ ಹೊಂದಬೇಕಿದೆ. ಸರ್ಕಾರ ರಚನೆಯ ಅವಕಾಶ ಸಿಕ್ಕರೆ ಮುಖ್ಯಮಂತ್ರಿ ಆಗಲು ಮುಂದಾಗಿರುವ ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷ ಸ್ಥಾನ ತೊರೆಯುವುದು ಬಹುತೇಕ ಖಚಿತ ಎನ್ನಲಾಗ್ತಿದೆ.