ಒರಾಯನ್ ಮಾಲ್‍ನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು

        ಪ್ರಸಕ್ತ ಸಾಲಿನ 11ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಗರದ ಒರಾಯನ್ ಮಾಲ್‍ನಲ್ಲಿ ಫೆಬ್ರವರಿ 7ರಿಂದ 14ರವರೆಗೆ ನಡೆಯಲಿದೆ. ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಅದ್ಧೂರಿತನಕ್ಕೆ ಕಡಿವಾಣ ಹಾಕಲಾಗಿದ್ದು, ಅರ್ಥಪೂರ್ಣ ಚಿತ್ರಗಳಿಗೆ ಒತ್ತು ನೀಡಲು ಸರ್ಕಾರ ನಿರ್ಧರಿಸಿದೆ.

        ನಗರದ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿ ಚಲನಚಿತ್ರೋತ್ಸವದ ಲಾಂಛನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಈ ಬಾರಿಯ ಚಿತ್ರೋತ್ಸವವನ್ನು ಶೇ.50ರಷ್ಟು ಕಡಿಮೆ ವೆಚ್ಚದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ಉತ್ಸವದ ಗುಣಮಟ್ಟಕ್ಕೆ ಯಾವುದೇ ಧಕ್ಕೆ ಬಾರದಂತೆ ಎಚ್ಚರವಹಿಸಲಾಗುವುದು.

        ಜಗತ್ತಿನ ವಿವಿಧ ಭಾಷೆಗಳ ಗುಣಾತ್ಮಕ ಚಿತ್ರಗಳನ್ನು ಉತ್ಸವದಲ್ಲಿ ಪ್ರದರ್ಶಿಸಲಾಗುತ್ತಿದ್ದು, ಜನ ಸಾಮಾನ್ಯರು ಇದರ ಲಾಭ ಪಡೆಯಬೇಕು ಎಂದರು. ಕಳೆದ ವರ್ಷದ ಚಲನಚಿತ್ರೋತ್ಸವಕ್ಕೆ ಸುಮಾರು 7 ಕೋಟಿ ರೂಪಾಯಿ ವೆಚ್ವವಾಗಿತ್ತು. ಇದಕ್ಕೆ ಸಾಹಿತ್ಯ ವಲಯ ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ಷೇಪ ಕೇಳಿಬಂದಿದ್ದರಿಂದ ಹಾಗೂ ಸರ್ಕಾರದ ಮೇಲಿನ ಹೊರೆ ತಪ್ಪಿಸುವ ಸಲುವಾಗಿ ಪ್ರಸಕ್ತ ಸಾಲಿನಲ್ಲಿ ವೆಚ್ಚ ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ.

        ಉತ್ಸವದ ಮುಖ್ಯಸ್ಥ ವಿದ್ಯಾಶಂಕರ್ ಮಾತನಾಡಿ, ನಗರದ ಒರಾಯನ್ ಮಾಲ್ ನ 11 ಸ್ಕ್ರೀನ್‍ಗಳಲ್ಲಿ ವಿಶ್ವದ 60 ದೇಶಗಳ 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ ಕನ್ನಡ, ಭಾರತೀಯ ಹಾಗೂ ಏಷ್ಯಾ ಚಿತ್ರಗಳ ವಿಭಾಗದಲ್ಲಿ ಮೂರು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.7ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಚಲನಚಿತ್ರ ಉದ್ಘಾಟನೆ ಹಾಗೂ ಫೆ.14ರಂದು ಸಮಾರೋಪ ಸಮಾರಂಭಗಳನ್ನು ಏರ್ಪಡಿಸಲಾಗಿದೆ. ‘ನೈಸರ್ಗಿಕ ವಿಕೋಪ’ ಈ ಉತ್ಸವದ ಪ್ರಮುಖ ವಿಷಯವಾಗಿರಲಿದೆ. ಚಲನಚಿತ್ರೋತ್ಸವದಲ್ಲಿ 7 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

       ಮೊದಲ ಗುರುವಾರ ನಿಗದಿ: ಇದಕ್ಕೂ ಮುನ್ನ ಮಾತನಾಡಿದ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಚಲನಚಿತ್ರೋತ್ಸವದ ಸಿದ್ಧತೆಗೆ ಅನುಕೂಲ ಮಾಡಿಕೊಡಲು ಹಾಗೂ ಉತ್ಸವಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಒದಗಿಸುವ ದೃಷ್ಟಿಯಿಂದ ಪ್ರತಿ ವರ್ಷ ಫೆಬ್ರವರಿಯ ಮೊದಲ ಗುರುವಾರದಂದು ಚಲನಚಿತ್ರೋತ್ಸವದ ಆರಂಭದ ದಿನವಾಗಿ ನಿಗದಿಪಡಿಸಲಾಗಿದೆ ಎಂದರು. ಆನ್‍ಲೈನ್ ನೋಂದಣಿ ಕಡ್ಡಾಯ: ಚಿತ್ರೋತ್ಸವದಲ್ಲಿ ಪಾಲ್ಗೊಂಡು ಚಿತ್ರ ವೀಕ್ಷಿಸುವವರಿಗೆ ಆನ್‍ಲೈನ್ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಚಿತ್ರೋದ್ಯಮಿಗಳು, ಫಿಲಂ ಸೊಸೈಟಿ ಸದಸ್ಯರು, ಚಲನಚಿತ್ರ ಅದ್ಯಯನ ಮಾಡುತ್ತಿರುವ ಉಪನ್ಯಾಸಕರು, ಸಿನಿಮಾ ವಿದ್ಯಾರ್ಥಿಗಳಿಗೆ 400 ರೂ. ಹಾಗೂ ಸಾರ್ವಜನಿಕರಿಗೆ 800 ರೂ. ದರ ನಿಗದಿಪಡಿಸಲಾಗಿದೆ. ನೋಂದಣಿಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap