ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಚಳ್ಳಕೆರೆ

       ಸಮಾಜದಲ್ಲಿ ಆಳಾವಾಗಿ ಬೇರೂರಿದ್ದ ಕಂದಾಚಾರ ಕತ್ತಲನ್ನು ಬದಿಗೊತ್ತಿ ಬದುಕಿನಲ್ಲಿ ಬೆಳಕು ಮೂಡಿಸುವ ನಿಟ್ಟಿನಲ್ಲಿ ಮಹಿಳೆಯರು ಇಂದು ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಸರಿಸಮಾನವಾದ ಬದುಕನ್ನು ಸಾಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಅಭಿವೃದ್ಧಿ ಪಥದಲ್ಲಿ ಮಹಿಳೆ ಪಾತ್ರ ಹೆಚ್ಚು. ಯಾವ ಹಂತದಲ್ಲೂ ಮಹಿಳೆಯರನ್ನು ನಿರ್ಲಕ್ಷ್ಯೆಯಿಂದ ಕಾಣುವುದು ಸರಿಯಲ್ಲ. ಮಹಿಳೆ ಎಂದಿಗೂ ದೇವತೆ ಸಮಾನವೆಂಬ ಹಿರಿಯ ವಾಣಿ ಇಂದಿಗೂ ಪ್ರಸ್ತುತ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ತಿಳಿಸಿದರು.

          ಅವರು, ಶುಕ್ರವಾರ ನ್ಯಾಯಾಲಯ ಆವರಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಕಾನೂನು ಸಹ ಮಹಿಳೆಯರ ಸಮಸ್ಯೆಗಳ ನಿವಾರಣೆಗೆ ಪೂರಕವಾಗಿದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಮತ್ತು ಇತರೆ ಪ್ರಕರಣಗಳನ್ನು ಮಟ್ಟಹಾಕಲು ಕಾನೂನಿನಲ್ಲಿ ಉತ್ತಮ ಅವಕಾಶವಿದೆ. ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಮುಖಿಗಳಾಗಿ ಕಾರ್ಯನಿರ್ವಹಿಸಬೇಕಿದೆ. ಸಮಾಜ ಮತ್ತು ಬದುಕು ಎರಡನ್ನೂ ಸರಿಸಮಾನವಾಗಿ ಸಾಗಿಸಬಲ್ಲ ಛಲ ಮತ್ತು ಬಲ ಇರುವುದು ಮಹಿಳೆಯಲ್ಲಿ ಮಾತ್ರವೆಂದರು.

        ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಕರ್ತವ್ಯಕ್ಕೆ ಹಾಜರಾದ ಅಪರ ಸಿವಿಲ್ ನ್ಯಾಯಾಧೀಶ ಬಿ.ವೈ.ಮನುಪಾಟೇಲ್ ಮಾತನಾಡಿ, ಮಹಿಳೆಗೆ ಸಮಾನತೆ ಕೊಡಬೇಕು ಎನ್ನುವ ವಾದ ಎಲ್ಲರೂ ಒಪ್ಪುವಂತದ್ದು. ಆದರೆ, ಸಮಾನತೆಯನ್ನು ಪಡೆದುಕೊಳ್ಳಲು ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ನ್ಯಾಯಾಲಯದ ಉದ್ಯೋಗಾವಕಾಶಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಪಡೆಯುತ್ತಿಲ್ಲ. ಆದರೆ, ನಮ್ಮ ಹಿರಿಯರು ತಿಳಿಸಿದಾಗ ನಾವು ಮಹಿಳಾ ಸಮೂಹವನ್ನು ಗೌರವದಿಂದ ಕಾಣಲೇಬೇಕು ಎಂದರು.

         ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸುನಂದಪಂಡಿತ್, ಇಂದಿಗೂ ಸಹ ಮಹಿಳೆಯರು ಎಲ್ಲಾ ರೀತಿಯ ಸ್ವಾತಂತ್ರ್ಯದ ನಡುವೆಯೂ ಸಹ ನೋವನ್ನು ಅನುಭವಿಸುತ್ತಿದ್ದಾರೆ. ಇದು ಕೇವಲ ಮನೆಯಲ್ಲಿ ಕಾರ್ಯನಿರ್ವಹಿಸುವ ಮಹಿಳೆಗೆ ಮಾತ್ರ ಸೀಮಿತವಾಗಿರದೆ ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುವ ಮಹಿಳೆಯರೂ ಸಹ ಹಲವಾರು ರೀತಿಯಲ್ಲಿ ಕಿರುಕುಳಕ್ಕೆ ಒಳಗಾಗುತ್ತಿದ್ಧಾರೆ. ನೋವಿನ ಸಂಗತಿ ಎಂದರೆ ಶೇ.70ರಷ್ಟು ಮಹಿಳೆಯರು ಪ್ರತಿನಿತ್ಯ ಕುಡುಕ ಗಂಡನೊಂದಿಗೆ ಹಿಂಸೆಯ ಬದುಕನ್ನು ಅನುಭವಿಸುತ್ತಿದ್ದಾರೆ. ಹಲವಾರು ವಿಧದ ನೋವುಗಳನ್ನು ನುಂಗಿಕೊಂಡು ತಮ್ಮ ಬದುಕಿನ ಸಾರ್ಥಕತೆಗಾಗಿ ಹೋರಾಡುವ ಮಹಿಳೆಯರ ಮನೋಸ್ಥಿತಿಯನ್ನು ಪುರುಷ ಸಮಾಜ ಇನ್ನು ಅರಿಯಬೇಕು ಎಂದರು. ‘

         ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಂಎಫ್‍ಸಿ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ ಮಾತನಾಡಿ, ಮಹಿಳೆ ಸಹನಾಮೂರ್ತಿ, ಎಂತಹ ಸಂದರ್ಭವನ್ನು ಸಹ ಎದುರಿಸುವ ಶಕ್ತಿ ಹೊಂದಿದ್ದಾಳೆ. ಬದುಕಿನ ಸಾರ್ಥಕತೆಗಾಗಿ ತನ್ನ ಬದುಕನ್ನೇ ಮುಡಿಪಾಗಿಡುವ ಮುಗ್ಧ ಮನಸು ಆಕೆಯದ್ದು, ಬದುಕಿನ ಹಲವಾರು ಆಯಾಮಗಳಲ್ಲಿ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿ ಸಮಾಜವೇ ಬೆರಗಾಗುವಂತೆ ತನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳುವಲ್ಲಿ ಮಹಿಳೆ ಯಶಸ್ಸಿಯಾಗಿದ್ಧಾಳೆ. ಮಹಿಳಾ ಸಮುದಾಯದ ಮೇಲೆ ಇನ್ನೂ ಹೆಚ್ಚಿನ ವಿಶ್ವಾಸ ಹಾಗೂ ಗೌರವವನ್ನು ನಾವು ತೋರಬೇಕಿದೆ ಎಂದರು.

         ರಾಷ್ಟ್ರದ ರಕ್ಷಣಾ ಮಂತ್ರಿ, ವಿದೇಶಾಂಗ ಮಂತ್ರಿ, ಲೋಕಸಭೆಯ ಅಧ್ಯಕ್ಷಸ್ಥಾನದಲ್ಲಿ ನಾವು ಇಂದು ಮಹಿಳೆಯರನ್ನೇ ಕಾಣುತ್ತೇವೆ. ರಾಷ್ಟ್ರದ ಹಲವಾರು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿ ಮಹಿಳೆಯರು ಯಶಸ್ಸಿ ಆಡಳಿತ ನೀಡುತ್ತಿದ್ಧಾರೆ. ರಾಷ್ಟ್ರದ ಹಿತಕ್ಕಾಗಿ ಬಲಿದಾನ ಮಾಡಿದವರಲ್ಲಿ ನಮ್ಮ ಮಹಿಳೆಯರು ಇದ್ಧಾರೆಂಬ ಹೆಮ್ಮೆ ನಮ್ಮದು ಎಂದರು.

           ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು, ಉಪಾಧ್ಯಕ್ಷ ಡಿ.ಬಿ.ಬೋರಯ್ಯ, ವಕೀಲರಾದ ಮಧುಮತಿ, ಶ್ಯಾಮಲ, ಬಸವರಾಜೇಶ್ವರಿ ಮುಂತಾದವರು ಮಾತನಾಡಿದರು. ಇದೇ ಸಂದರ್ಭದಲ್ಲಿ ನ್ಯಾಯಾಲಯದ ಸಿಬ್ಬಂದಿ ವರ್ಗಕ್ಕೆ ಹಲವಾರು ಕ್ರೀಡೆಗಳನ್ನು ಹಮ್ಮಿಕೊಂಡಿದ್ದು, ವಿಜೇತರಾದ ನ್ಯಾಯಾಂಗ ಇಲಾಖೆ ಮಹಿಳೆಯರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರ ಪತ್ನಿಯರೂ ಸಹ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap