ವಿಶ್ವ ಮಹಿಳಾ ದಿನಾಚರಣೆ

ತುಮಕೂರು:

       ಚಲನಶೀಲತೆಯುಳ್ಳ ಹೆಣ್ಣು, ಪ್ರಕೃತಿಯ ಕಣ್ಣು : ಡಾ. ಕವಿತಾಕೃಷ್ಣ ಚಲನಶೀಲತೆ ನವನವೋನ್ವೇಷಶಾಲಿನಿಯಾದುದು. ಅಂತಹ ಚಲನಶೀಲತೆಯುಳ್ಳ ಹೆಣ್ಣು, ಪ್ರಕೃತಿಯ ಕಣ್ಣು ಎಂದು ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಅಭಿಪ್ರಾಯಪಟ್ಟರು.

       ನಗರದ ಕ್ಯಾತಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರವು ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ನುಡಿದರಲ್ಲದೆ ಭಾರತೀಯ ಮಹಿಳೆ ಇಡೀ ವಿಶ್ವದಲ್ಲಿಯೇ ಪೂಜನೀಯಳು. ವೇದಗಳ ಕಾಲದಲ್ಲಿ ಬ್ರಹ್ಮವಾದಿನಿಯಾಗಿ, ದೇಶ ರಕ್ಷಿಸುವಲ್ಲಿ ವೀರಾಘ್ರಣಿಯಾಗಿ, ಜನಹಿತ ತೋರುವಲ್ಲಿ ಸಮಾಜ ಸುಧಾರಕಳಾಗಿ, ಮನೆಯ ಹಿತಕೋರುವ ನಾರಿಯಾಗಿ, ಜಗದ ಬೆಳಕಾದ ಹೆಣ್ಣು ಅರ್ಥಪೂರ್ಣ ಬದುಕು ಸಾಗಿಸಿದ್ದಾಳೆ. ಅನ್ಯದೇಶೀಯರ ಧಾಳಿಯಿಂದ ಅಜ್ಞಾತ ಬದುಕು ನಡೆಸಿದ ಹೆಣ್ಣು ಸ್ವಾತಂತ್ರ್ಯಾ ನಂತರ ರಾಷ್ಟ್ರದ ಪ್ರಧಾನಿಯಾಗಿ, ವೈದ್ಯಳಾಗಿ, ಗುರುಮಾತೆಯಾಗಿ, ದೇಶಕಾಯುವ ಸೈನಿಕಳಾಗಿ ರಾಜಕೀಯರಂಗದಲ್ಲಿ ನಾಯಕಿಯಾಗಿ ವಿಜೃಂಭಿಸುತ್ತಿದ್ದಾಳೆ.

        ಮನೆಯೆ ಮೊದಲ ಪಾಠಶಾಲೆಯಾದರೇ ಜನನಿಯೇ ಮೊದಲ ಗುರುವು. ಹೆಣ್ಣಾದ ತಾಯಿಯಿಂದ ಪಾಠಕಲಿತ ಲೋಕದ ಜನರೇ ಧನ್ಯರು. ತಾಯಿ-ಅತ್ತೆ-ಅಕ್ಕ-ತಂಗಿ-ಅತ್ತಿಗೆ ಇವು ಹೆಣ್ಣಿನ ಬಗೆಬಗೆಯ ರೂಪಗಳು. ಇಂದು ರಾಜಕೀಯ ರಂಗದಲ್ಲಿ ಹೆಣ್ಣು ಗಂಡನ, ಸೋದರರ ರಿಮೋಟ್ ಕಂಟ್ರೋಲ್‍ನಲ್ಲಿರುವುದು ವಿಷಾದನೀಯ ಸಂಗತಿ. ಹೆಣ್ಣು ಚಲನಶೀಲ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜದ ಬೆಳಕಾಗಬೇಕೆಂದು ಕರೆ ನೀಡಿದರು.

         ಕತೆಗಾರ್ತಿ ಕಮಲಾ ಸುಬ್ಬರಾವ್ ಕಾರ್ಯಕ್ರಮ ಉದ್ಘಾಟಿಸಿ ಹೆಣ್ಣು ಗಂಡಿಗೆ ಸಮಾನಳು. ಆಕೆ ಅಬಲೆಯಲ್ಲ ಸಬಲೆ ಎಂದು ನುಡಿದರೆ ಕವಿ ಸಿದ್ದಾಪುರ ನರಸಿಂಹಯ್ಯ ಮಾತನಾಡಿ ಹೆಣ್ಣಿನ ಭ್ರೂಣಹತ್ಯೆಯಂತಹ ಮಹಾ ಕ್ರೂರಹತ್ಯೆಗೆ ಹೆಣ್ಣು ಮಕ್ಕಳು ಸಹಕರಿಸಬಾರದು ಎಂದರೆ, ಬಲಿಜ ಬಿಂಬ ಪತ್ರಿಕೆಯ ಸಂಜೀವನ ಅವರು ಮಾತನಾಡಿ ಗಂಡು-ಹೆಣ್ಣುಗಳೆರಡು ಸೃಷ್ಟಿಯ ಕಣ್ಣುಗಳು. ಎರಡು ಮುಖ್ಯ. ಒಂದಕ್ಕೆ ಪೆಟ್ಟಾದರು ಬದುಕು ಬರಡು ಎಂದು ನುಡಿದರು. ಕ್ಯಾತ್ಸಂದ್ರ ಮಲ್ಲೇಶ್, ಪಿಗ್ಮಿ ಗೋಪಾಲ್ ಮಾತನಾಡಿದರು. ವಿಠಲ, ರಾಜೇಶ್, ಮಧು, ವರದರಾಜು, ಅದಲಗೆರೆ ಮೋಹನ್ ಉಪಸ್ಥಿತರಿದ್ದರು.

         ರತ್ನಕೃಷ್ಣ ಅವರು ಶ್ರೀಸಾಮಾನ್ಯರ ಆಶಾಕಿರಣವೆನಿಸಿರುವ ಖ್ಯಾತ ವೈದ್ಯರಾದ ಎಸ್.ವಿಜಯ ಅವರನ್ನು ಶಾಲುಹೊದಿಸಿ, ಫಲತಾಂಬೂಲಗಳೊಂದಿಗೆ ಗೌರವಿಸಿ, ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿದ ಡಾಕ್ಟರ್ ವಿಜಯ ಅವರು ಸರಳತೆಯೆ ಹೆಣ್ಣಿಗೆ ಅಲಂಕಾರ ಪ್ರಾಯ, ಎಲ್ಲರಲ್ಲೂ ದೇವರನ್ನು ಕಂಡರೆ ನಮ್ಮೆಲ್ಲರ ಬಾಳು ಬಂಗಾರವಾಗುತ್ತದೆ. ಕವಿತಾಕೃಷ್ಣ ಸಾಹಿತ್ಯ ಮಂದಿರ ಜಿಲ್ಲೆಯಲ್ಲಿ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

         ಯುವ ಮುಂದಾಳು ಉಪೇಂದ್ರಕುಮಾರ್ ಅಭಿನಂದನಾ ನುಡಿಗಳನ್ನಾಡಿದರು ವೈದ್ಯದೇವೋಭವ ಎಂಬ ಮಾತಿಗೆ ಡಾ. ವಿಜಯ ಸೋದಾಹರಣವಾಗಿದ್ದರೆ ಎಂದು ಶ್ಲಾಘಿಸಿದರಲ್ಲದೆ ನೆನಪಿನ ಕಾಣಿಕೆ ಅರ್ಪಿಸಿದರು. ಗಿರಿಜಮ್ಮ ಪ್ರಾರ್ಥಿಸಿ, ನಿರೂಪಿಸಿದರು. ಅದಲಗೆರೆ ಮೋಹನ್ ಸ್ವಾಗತಿಸಿದರು ಮಲ್ಲೇಶ್ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap