ಸಚಿವ ಜಮೀರ್ ವಿಚಾರಣೆಗೊಳಪಡಿಸಿ: ಅಶೋಕ್

ಬೆಂಗಳೂರು

     ಬಹುಕೋಟಿ ವಂಚನೆ ಮಾಡಿರುವ ಐಎಂಎ ಕಂಪನಿಯ ಮಾಲೀಕನ ಜೊತೆ ಹಣಕಾಸಿನ ವ್ಯವಹಾರ ನಡೆಸಿರುವ ಆಹಾರ ಸಚಿವ ಜಮೀರ್ ಅಹ್ಮದ್‍ನನ್ನು ಬಂಧಿಸಿ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕೆಂದು ಮಾಜಿ ಉಪಮುಖ್ಯಮಂತ್ರಿ ಆರ್.ಆಶೋಕ್ ಆಗ್ರಹಿಸಿದ್ದಾರೆ.

      ಜಿಂದಾಲ್‍ಗೆ ಭೂಮಿ ಮಾರಾಟ ಖಂಡಿಸಿ ನಗರದ ಮೌರ್ಯವೃತ್ತದ ಗಾಂಧಿ ಪ್ರತಿಮೆ ಮುಂಭಾಗ ಗುರುವಾರ ಬಿಜೆಪಿ
ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಐಎಂಎ ಕಂಪನಿಯ ವಂಚನೆಯಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

       ಐಎಂಎ ಮುಖ್ಯಸ್ಥ ರೊಂದಿಗೆ ಕಾಂಗ್ರೆಸ್ ನಾಯಕರು ಬಿರಿಯಾನಿ ತಿಂದು ವಂಚನೆ ಬಯಲಾದ ನಂತರ ಉಲ್ಟಾ ಒಡೆಯುತ್ತಿದ್ದಾರೆ. ಎಸ್‍ಐಟಿ ತನಿಖೆಯಿಂದ ಐಎಂಎ ವಂಚನೆ ಬಯಲಾಗಲಿದೆ ಎಂದು ಹೇಳಿದರು.

ಭಾರಿ ಲೂಟಿ :

        ಕಳೆದ ಒಂದು ವರ್ಷದಲ್ಲಿ ಭಾರಿ ಲೂಟಿ ಆಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಸಮ್ಮಿಶ್ರ ಸರ್ಕಾರದ ಸ್ಥಿತಿ. ಲೋಕೋಪಯೋಗಿ ಇಲಾಖೆಯಲ್ಲಿ ನಿಂಬೆಹಣ್ಣಿನ ರೇವಣ್ಣ ಕೊಳ್ಳೆ ಒಡೆದಿದ್ದಾರೆ. ಈ ಬಗ್ಗೆ ಸ್ವತಃ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ವಿಧಾನಸೌಧದಲ್ಲೇ ಈ ಮಾತನು ಹೇಳಿದ್ದಾರೆ ಎಂದು ಆರೋಪಿಸಿದರು.

       ಬೆಂಗಳೂರಿನಿಂದ ಬಳ್ಳಾರಿವರೆಗೂ ಸಿದ್ದರಾಮಯ್ಯ ಪಂಚೆ ಉಟ್ಕೊಂಡೆ ಹೋಗ್ತಾರೆ. ಅದೂ ಒಳ್ಳೆಯ ಶೂ ಇಲ್ಲದೆ ಅವರು ಮನೆಯಿಂದ ಹೊರಗೆ ಬರೋದಿಲ್ಲ. ಈಗ ಇಷ್ಟು ಹಗರಣವಾದರೂ, ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನೆ ಮಾಡಿದರು.

        ಸರ್ಕಾರ ಸಾಲಮನ್ನಾ ಮಾಡಿದೆ ಎಂದು ಎಲ್ಲಾ ಕಡೆ ಜಾಹೀರಾತು ಪ್ರದರ್ಶನ ಮಾಡಿದರು. ಸಂಪೂರ್ಣ ಸಾಲಮನ್ನಾ ಮಾಡಿದ್ದೇವೆ ಎನ್ನುತ್ತಾರೆ. ಆದರೆ ಈಗ ಬಾಕಿ ಇರುವುದು ಏಕೆ? ಸಾವಿರ ಕೋಟಿ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಸಿಬಿಐ ತನಿಖೆ ಸೂಕ್ತ

        ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, ಈ ಪ್ರಕರಣದ ನಂಬರ್ ಒನ್ ಆರೋಪಿ ಸಚಿವ ಜಮೀರ್ ಅಹ್ಮದ್. ಹೀಗಾಗಿ ಎಸ್‍ಐಟಿ ತನಿಖೆಗೆ ಸಿಬಿಐಗೆ ವಹಿಸಿದರೆ ಆಗ ಮಾತ್ರ ಇದರ ಸತ್ಯ ಹೊರಬರಲು ಸಾಧ್ಯ ಎಂದು ತಿಳಿಸಿದರು.

        ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಾವು ಅಲ್ಪಸಂಖ್ಯಾತರ ಹಿತರಕ್ಷಕರು ಎಂದು ಬಿಂಬಿಸಿಕೊಳ್ಳುತ್ತಿದ್ದರು.ಆದರೆ, ಇದೀಗ ನಾಪತ್ತೆಯಾಗಿದ್ದಾರೆ.ಮುಸ್ಲಿಮರನ್ನು ಮೋಸ ಮಾಡಿರುವುದು ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.

       ಐಎಂಎ ಸಮೂಹ ಸಂಸ್ಥೆ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ವಂಚನೆಯ ಮುಖವಾಡ ಇಟ್ಟುಕೊಂಡು ಶಾಸಕ ರೋಶನ್ ಬೇಗ್, ಸಚಿವ ಜಮೀರ್ ಅಹ್ಮದ್ ಜನರ ದುಡ್ಡು ಲೂಟಿ ಮಾಡಿದ್ದಾರೆ. ಈ ಸಂಬಂಧ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

       ಶಾಸಕ ಆರ್.ಅಶೋಕ್ ಮಾತನಾಡಿ, ಐಎಂಎ ಮುಖ್ಯಸ್ಥ ರೊಂದಿಗೆ ಕಾಂಗ್ರೆಸ್ ನಾಯಕರು ಬಿರಿಯಾನಿ ತಿಂದರು. ಈಗ ಕಾಂಗ್ರೆಸ್ ನಾಯಕರು ಉಲ್ಟಾ ಆಗಿದ್ದಾರೆ. ಎಸ್‍ಐಟಿ ತನಿಖೆಯಿಂದ ಐಎಂಎ ವಂಚನೆ ಬಯಲಾಗಲಿದೆ ಎಂದು ಹೇಳಿದರು.

        ಸಚಿವ ಜಮೀರ್ ಅಹ್ಮದ್ ಐಎಂಎ ವಂಚನೆ ಪ್ರಕರಣವು ಮೊದಲು ಎಸ್‍ಐಟಿ ತನಿಖೆ ನಡೆಸಲಿ ಎಂದು ಹೇಳಿರುವುದನ್ನು ನೋಡಿದರೆ ಕೋಳಿ ಕೇಳಿ ಮಸಾಲೆ ಹಾಕುವಂತೆ ಇದೆ ಎಂದು ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.
ಸರ್ಕಾರ ಸಾಲ ಮನ್ನಾ ಎಂಬ ನೆಪ ಮಾಡಿದೆ. ಇದರಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಎಂಬ ನಾಟಕ ಮಾಡಲು ಹೊರಟಿದ್ದಾರೆ. ಇನ್ನೂ ಜಿಂದಾಲ್ ಭೂಮಿ ವಿಚಾರ ಸಂಬಂಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡರ ಬಂಧನ

        ಜಿಂದಾಲ್ ಕಂಪನಿಗೆ ಭೂಮಿ ಹಸ್ತಾಂತರ ಖಂಡಿಸಿ, ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೋಲೀಸರು ಬಂಧಿಸಿದರು. ನಗರದಲ್ಲಿ ಗುರುವಾರ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ, ಬಿಜೆಪಿ ನಾಯಕರಾದ ಆರ್.ಅಶೋಕ್, ರವಿಕುಮಾರ್, ಬಿ.ವೈ.ವಿಜಯೇಂದ್ರ, ತೇಜಸ್ವಿ ಸೂರ್ಯ, ತಮ್ಮೇಶ್ ಗೌಡ ಸೇರಿದಂತೆ ಪ್ರಮುಖರು ಘೋಷಣೆ ಕೂಗಿ ವಿಧಾನಸೌಧದ ಮಾರ್ಗ ಕಡೆ ಹೊರಟಾಗ ಪೋಲೀಸರು ವಶಕ್ಕೆ ಪಡೆದು ತಮ್ಮ ವಾಹನದಲ್ಲಿ ಕರೆದೊಯ್ದರು.

      ಬಿ.ವೈ.ವಿಜಯೇಂದ್ರ ಮಾತನಾಡಿ, ಸರ್ಕಾರ ಸಾಲ ಮನ್ನಾ ಎಂಬ ನೆಪ ಮಾಡಿದೆ. ಇದರಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಎಂಬ ನಾಟಕ ಮಾಡಲು ಹೊರಟಿದ್ದಾರೆ. ಇನ್ನೂ ಜಿಂದಾಲ್ ಭೂಮಿ ವಿಚಾರ ಸಂಬಂಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ