ತುಮಕೂರು
ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸುವ ಸಿಸಿ ಕ್ಯಾಮರಾ ಹಾಗೂ ಬಯೋಮೆಟ್ರಕ್ ಖರೀದಿಯಲ್ಲಿ 136 ಲಕ್ಷ ರೂ ಹಗರಣ ನಡೆದಿದೆ ಎಂದು ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಸದಸ್ಯರು ಆಪಾದಿಸಿ, ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಲು ಒತ್ತಾಯಿಸಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಚಾರ ಪ್ರಸ್ತಾಪ ಮಾಡಿದ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ. ನವ್ಯಾ ಬಾಬು ಅವರು, ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆಯದೆ ಆರೋಗ್ಯ ಇಲಾಖೆ 138 ಲಕ್ಷ ರೂಗಳ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಳವಡಿಸಲು ಸಿಸಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಖರೀದಿ ಮಾಡಿದೆ. ಆದರೆ ಅಳವಡಿಸಿದಾಗಿನಿಂದ ಈವರೆಗೂ ಯಾವುದೇ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.
ಸಾರ್ವಜನಿಕರಿಗೆ ಅನುಕೂಲ ಆಗುವ ಉದ್ದೇಶದಿಂದ ಆಸ್ಪತ್ರೆಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ಗಂಟೆವರೆಗೆ ಸೇವಾವಧಿ ನಿಗಧಿ ಮಾಡಲಾಗಿತ್ತು. ಅದರಂತೆ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಬಯೋಮೆಟ್ರಿಕ್‍ನಲ್ಲಿ ತಮ್ಮ ಹಾಜರಾತಿ ದಾಖಲು ಮಾಡಬೇಕು ಹಾಗೂ ಈ ಎಲ್ಲವೂ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಬೇಕಾಗಿತ್ತು. ಆದರೆ ಯಾವ ಆಸ್ಪತ್ರೆಯ ಯಾವ ಉಪಕರಣಗಳೂ ಕೆಲಸ ಮಾಡುತ್ತಿಲ್ಲ, ಇದರಿಂದ ಇಲಾಖೆಯ ಉದ್ದೇಶ ಸಫಲವಾಗಿಲ್ಲ ಎಂದು ಡಾ. ನವ್ಯಾ ಬಾಬು ಸಭೆ ಗಮನಕ್ಕೆ ತಂದರು.
ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆಯದೆ ಆರೋಗ್ಯ ಇಲಾಖೆ ಖರೀದಿ ಮಾಡುವಂತಿಲ್ಲ, ನಿಯಮ ಮೀರಿ ಕಳೆದ ಮಾರ್ಚಿಯಲ್ಲಿ ಹಿಂದಿನ ಡಿಹೆಚ್‍ಓ ಡಾ. ಹೆಚ್ ವಿ ರಂಗಸ್ವಾಮಿ ಖರೀದಿ ಮಾಡಿದ್ದಾರೆ. ಖರೀದಿಸಿರುವ ಸಿಸಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಕಳಪೆ ಎಂಬ ಅನುಮಾನವಿದೆ. ಜೊತೆಗೆ ಅವು ಯಾವೂ ಕೆಲಸ ಮಾಡದೆ ಉಪಯೋಗಕ್ಕೆ ಬಾರದಂತಾಗಿವೆ. ಇದೆಲ್ಲವನ್ನು ಗಮನಿಸಿದರೆ ಮೇಲ್ನೋಟಕ್ಕೆ ಹಗರಣ ನಡೆದಿರುವುದು ಗೊತ್ತಾಗುತ್ತದೆ ಎಂದು ಹೇಳಿದರು
ಇತರೆ ಸದಸ್ಯರೂ ಡಾ. ನವ್ಯಾ ಅವರ ಅಭಿಪ್ರಾಯಕ್ಕೆ ದನಿಗೂಡಿಸಿ 138 ಲಕ್ಷ ರೂ.ಗಳ ಖರೀದಿಯಲ್ಲಿ ಹಗರಣವಾಗಿದೆ ಇದರ ತನಿಖೆಯಾಗಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಗಮನಕ್ಕೆ ಬಾರದೆ ಯಾವ ಖರೀದಿ ಮಾಡಲು ಸಾಧ್ಯವಿಲ್ಲ. ಈ ಹಗರಣದಲ್ಲಿ ಅವರೂ ಭಾಗಿಯಾಗಿರುವ ಶಂಕೆ ಇದೆ ಎಂದು ಕೆಲ ಸದಸ್ಯರು ಆರೋಪಿಸಿದರು. ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ಸಭೆ ಒತ್ತಾಯಿಸಿ ನಿರ್ಣಯ ಮಾಡಿತು.
ಅಕ್ಷರ ದಾಸೋಹ ಅವ್ಯವಹಾರ
ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಕ್ಷರ ದಾಸೋಹ ಸಮಿತಿಯಲ್ಲಿ ಐದು ವರ್ಷಗಳ ಹಿಂದೆ ನಡೆದಿದ್ದ ಸುಮಾರು 35 ಲಕ್ಷ ರೂ.ಗಳ ಹಣ ದುರುಪಯೋಗ ಪ್ರಕರಣ ಮಂಗಳವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದು ಅವ್ಯವಹಾರ ನಡೆಸಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು, ಅವರ ವಿರುದ್ಧ ಪೊಲೀಸ್ ಕೇಸು ದಾಖಲಿಸಬೇಕು ಹಾಗೂ ದುರುಪಯೋಗವಾದ ಹಣವನ್ನು ಅಧಿಕಾರಿಗಳಿಂದ ವಸೂಲಿ ಮಾಡಬೇಕು ಎಂದು ಸದಸ್ಯರು ಒತ್ತಾಯ ಮಾಡಿದರು.
ಈ ಸಂಬಂಧ ಸಭೆ ಸರ್ವಾನುಮತದ ನಿರ್ಣಯ ಮಂಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ವರದಿ ನೀಡುವಂತೆ ಸದಸ್ಯರು ಒತ್ತಾಯಿಸಿದರಲ್ಲದೆ ಜಿಲ್ಲೆಯ ಇತರೆ ತಾಲ್ಲೂಕುಗಳ ಅಕ್ಷರ ದಾಸೋಹ ಸಮಿತಿಯಲ್ಲಿ ಇಂತಹ ಅವ್ಯವಹಾರ ಆಗಿದೆಯೆ ಎಂಬ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಒತ್ತಾಯಿಸಿದರು.
ಹೊಯ್ಸಳ ಕಟ್ಟೆ ಕ್ಷೇತ್ರದ ಸದಸ್ಯ ಎಸ್ ಟಿ ಮಹಾಲಿಂಗಯ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಕ್ಷರ ದಾಸೋಹ ಸಮಿತಿಯಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಯ ಸುಮಾರು 40 ಲಕ್ಷ ರೂಗಳ ಅವ್ಯವಹಾರ ನಡೆದಿದೆ. 2015ರಿಂದ ಈ ಅವ್ಯವಹಾರ ನಡೆಸಲಾಗಿದೆ, ಈ ಪ್ರಕರಣ ಸಂಬಂಧ ವಿವಿಧ ಅಧಿಕಾರಿಗಳ ತಂಡ ಬಂದು ತನಿಖೆ ನಡೆಸಿದ್ದರೂ ಈವರೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರದ 40 ಲಕ್ಷ ರೂ ದುರುಪಯೋಗವಾಗಿರುವ ಗಂಭಿರ ಪ್ರಕರಣವನ್ನು ಅಧಿಕಾರಿಗಳು ಲಘುವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಅಕ್ಷರ ದಾಸೋಹದ ಆಗಿನ ಶಿಕ್ಷಣಾಧಿಕಾರಿ ಸಿದ್ಧಗಂಗಯ್ಯ, ಸಹಾಯಕ ನಿದೇರ್ಶಕ ತಿಮ್ಮರಾಜು, ಈಗಿನ ಸಹಾಯಕ ನಿರ್ದೇಶಕ ನಾಗಭೂಷಣ್ ಮತ್ತಿತರರು ಸೇರಿ ತಂಡವಾಗಿ ಈ ಅವ್ಯವಹಾರ ನಡೆಸಿದ್ದಾರೆ. ಅಕ್ಷರ ದಾಸೋಹ ಸಮಿತಿಯ ಕಂಪ್ಯೂಟರ್ ಆಪರೇಟರ್ ಶೃತಿ, ಅವರ ತಾಯಿ ಲಕ್ಷಮ್ಮ ಅವರ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ತೆರೆದು ಅಕ್ಷರ ದಾಸೋºದÀ ಹಣ ಜಮಾ ಮಾಡಿಸಿ, ಆಗಾಗ ಡ್ರಾ ಮಾಡಿಕೊಂಡು ಅಧಿಕಾರಿಗಳು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಮಹಾಲಿಂಗಯ್ಯ ಬ್ಯಾಂಕ್ ಸ್ಟೇಟ್‍ಮೆಂಟ್ ಮಾಹಿತಿಯನ್ನು ಸಭೆಯಲ್ಲಿ ಪ್ರದರ್ಶಿಸಿದರು.
ಈಗ ವಿಚಾರಣೆ ನೆಪದಲ್ಲಿ ಅಧಿಕಾರಿಗಳು ಸರ್ಕಾರದ ಹಣ ತುಂಬುವಂತೆ ಶೃತಿ ಹಾಗೂ ಆಕೆಯ ತಂದೆ ತಾಯಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ, ಜೊತೆಗೆ ಬಲವಂತವಾಗಿ ಶೃತಿ ಮನೆಯವರಿಂದ ಸುಮಾರು 16 ಲಕ್ಷ ರೂ ಹಣ ಜಮಾ ಮಾಡಿಸಿದ್ದಾರೆ. ಅಧಿಕಾರಿಗಳ ಬಲವಂತಕ್ಕಾಗಿ ಬ್ಯಾಂಕ್ ಅಕೌಂಟಿಗೆ ಹಣ ಜಮಾ ಮಾಡಿಕೊಂಡ ಶೃತಿ ಹಾಗೂ ಆಕೆಯ ತಾಯಿ ಈಗ ತೊಂದರೆಗೆ ಸಿಕ್ಕಿದ್ದಾರೆ. ಸೈಟು, ಒಡವೆ, ದನಕರು ಮಾರಾಟ ಮಾಡಿ ಆಕೆಯ ತಂದೆ 16 ಲಕ್ಷ ರೂ ಪಾವತಿ ಮಾಡಿದ್ದಾರೆ, ಇಷ್ಟಾದರೂ ಆಕೆಗೆ ಅಧಿಕಾರಿಗಳಿಂದ ಕಿರುಕುಳ ತಪ್ಪಿಲ್ಲ, ಶೃತಿ ಎರಡು ಮೂರು ಬಾರಿ ಆತ್ಮ ಹತ್ಯೆಗೂ ಪ್ರತ್ನಿಸಿದ್ದರೂ ಈ ಅವ್ಯವಹಾರಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲೇಬೇಕು ಎಂದು ಮಹಾಲಿಂಗಯ್ಯ ಒತ್ತಾಯ ಮಾಡಿದರು.
ಎಲ್ಲಾ ತಾಲ್ಲೂಕುಗಳ ಅಕ್ಷರ ದಾಸೋಹ ಸಮಿತಿಗಳಲ್ಲಿ ಇಂತಹ ಅವ್ಯವಹಾರ ಆಗಿರುವ ಸಾಧ್ಯತೆಗಳಿದ್ದು ತನಿಖೆ ನಡೆಸಬೇಕು ಎಂದು ಹಾಗಲವಾಡಿ ಕ್ಷೇತ್ರ ಸದಸ್ಯ ರಾಮಾಂಜನಪ್ಪ ಹೇಳಿದರು ಪ್ರಕರಣ ಕುರಿತು ಸಭೆಗೆ ಮಾಹಿತಿ ನೀಡಿದ ಅಕ್ಷರ ದಾಸೋಹ ಸಮಿತಿ ಶಿಕ್ಷಣಾಧಿಕಾರಿ ನಾಗರಾಜಪ್ಪ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಸಮಿತಿಯಲ್ಲಿ ಅಕ್ರಮವಾಗಿ ಸಮಿತಿಯ ಅಕ್ಷರ ದಾಸೋಹ ಕಂಪ್ಯೂಟರ್ ಆಪರೇಟರ್ ಶೃತಿ, ಆಕೆಯ ತಾಯಿ ಲಕ್ಷ್ಮಮ್ಮ ಹಾಗೂ ಇತರರ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ತೆರೆದು 34.35 ಲಕ್ಷ ರೂ. ಇಲಾಖೆ ಹಣ ಜಮಾ ಮಾಡಿ, ಡ್ರಾ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಈ ಪೈಕಿ 16.65 ಲಕ್ಷ ರೂಗಳನ್ನ ತುಂಬಲಾಗಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಸದಸ್ಯ ವೈ ಹೆಚ್ ಹುಚ್ಚಯ್ಯ, ಅವ್ಯವಹಾರ ಆಗಿರುವುದನ್ನು ಇಲಾಖೆ ಅಧಿಕಾರಿಯೇ ಖಚಿತಪಡಿಸಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಕ್ಷರ ದಾಸೋಹ ಸಮಿತಿಯಲ್ಲಿ 2015ರಿಂದ ಇದ್ದ ಅಧಿಕಾರಿಗಳನ್ನು ಈ ಕ್ಷಣದಿಂದಲೇ ಸಸ್ಪೆಂಡ್ ಮಾಡಿ, ಅವರ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಡಿ, ಪ್ರಕರಣದ ಸಂಪೂರ್ಣ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಸದಸ್ಯೆ ಶಾಂತಲಾ ರಾಜಣ್ಣ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಮಾಹಿತಿ ಆಧಾರ ಸಹಿತವಾಗಿದೆ, ಹಣ ದುರ್ಬಳಕೆಯಾಗಿರುವುದನ್ನು ಅಧಿಕಾರಿಗಳೇ ಒಪ್ಪಿದ್ದಾರೆ. ಒಬ್ಬ ಹೆಣ್ಣು ಮಗಳನ್ನು ಟಾರ್ಗೆಟ್ ಮಾಡಿ ಆಕೆಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ, ಸಂಧಿಸಿದ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಿ ಎಂದು ಒತ್ತಾಯಿಸಿದರು.
ಪಶು ಭಾಗ್ಯಕ್ಕೆ ಬ್ಯಾಂಕ್ ಸ್ಪಂದಿಸುತ್ತಿಲ್ಲ
ಫಲಾನುಭವಿಗಳಿಗೆ ಪಶುಭಾಗ್ಯ ಯೋಜನೆ ಪ್ರಯೋಜನವಾಗುತ್ತಿಲ್ಲ, ಆಯ್ಕೆ ಮಾಡಿದ ಫಲಾನುಭವಿಗಳಿಗೆ ಸಾಲ ನೀಡಲು ಬ್ಯಾಂಕ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸದಸ್ಯ ಕೆಂಚಮಾರಯ್ಯ ಆಪಾದಿಸಿದರು.ಜಿಲ್ಲೆಯಲ್ಲಿ ಸುಮಾರು 128 ಫಲಾನುಭವಿಗಳನ್ನು ಆಯ್ಕೆ ಮಾಡಿ ಆ ಬಾಬ್ತು ಸಬ್ಸಿಡಿ ಹಣವನ್ನು ಬ್ಯಾಂಕಿಗೆ ಪಾವತಿಸಿದ್ದರೂ ಬ್ಯಾಂಕ್‍ಗಳು ಫಲಾನುಭವಿಗಳಿಗೆ ಸಾಲದ ಹಣ ನೀಡುತ್ತಿಲ್ಲ. ಬ್ಯಾಂಕಿನವರು ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ ಎಂದರು.
ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಪ್ರಕಾಶ್ ಮಾತನಾಡಿ, ಈ ಬಗ್ಗೆ ತಾವು ಅನೇಕ ಬಾರಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ, ಜೊತೆಗೆ ಇಲಾಖೆ ಆಯುಕ್ತರೂ ರಾಜ್ಯ ಮಟ್ಟದಲ್ಲಿ ಬ್ಯಾಂಕಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಆದರೆ ಈ ವರೆಗೂ ಈ ಬಗ್ಗೆ ಸ್ಫಷ್ಟ ತೀರ್ಮಾನ ಆಗಿಲ್ಲ ಎಂದರು.ಜಿಪಂ ಉಪಾಧ್ಯಕ್ಷೆ ಶಾರದಾ ನರಸಿಂಹ ಮೂರ್ತಿ, ಸಿಇಓ ಶುಭಾ ಕಲ್ಯಾಣ್ ಸಭೆಯಲ್ಲಿದ್ದರು.