ದಾವಣಗೆರೆ:
ಹರಿಹರ ತಾಲೂಕಿನ ದೇವರ ಬೆಳಕೆರೆ ಪಿಕಪ್ ಡ್ಯಾಮ್‍ಗೆ ಭೂಮಿ ಕಳೆದುಕೊಂಡಿದ್ದ ರೈತನಿಗೆ ಪರಿಹಾರದ ಹಣ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದ ನೀರಾವರಿ ಇಲಾಖೆಯ ವಾಹನವನ್ನು ಜಪ್ತು ಮಾಡಿದ ಘಟನೆ ಮಲೆಬೆನ್ನೂರು ಗ್ರಾಮದಲ್ಲಿ ಗುರುವಾರ ನಡೆದಿದೆ.
ಹರಿಹರ ತಾಲೂಕಿನ ಚಿಕ್ಕ ಬೂದಿಹಾಳ್ ಗ್ರಾಮದ ರೈತ ರುದ್ರಪ್ಪ ದೇವರ ಬೆಳಕೆರೆ ಪಿಕಪ್ ಡ್ಯಾಂ ನಿರ್ಮಾಣವಾದ ನಂತರ ತಮ್ಮ 3 ಎಕರೆ ಫಲವತ್ತಾದ ಕೃಷಿ ಜಮೀನನ್ನು ಕಳೆದುಕೊಂಡಿದ್ದರು. ಪಿಕಪ್ ಡ್ಯಾಂನ ಹಿನ್ನೀರಿನಿಂದ ಇವರ ಜಮೀನು ಮುಳುಗಡೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪರಿಹಾರ ಕೋರಿ ಸಂತ್ರಸ್ಥ ನ್ಯಾಯಾಲಯ ಮೊರೆ ಹೋಗಿದ್ದರು.
ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ದಾವಣಗೆರೆ ಸಿವಿಲ್ ನ್ಯಾಯಾಲವು ದೇವರ ಬೆಳಕೆರೆ ಪಿಕಪ್ ಡ್ಯಾಮ್‍ಗೆ 3 ಎಕರೆ ಜಮೀನು ಕಳೆದುಕೊಂಡಿದ್ದ ರೈತನಿಗೆ 18 ಲಕ್ಷ ರು. ಪರಿಹಾರ ನೀಡುವಂತೆ ನೀರಾವರಿ ಇಲಾಖೆಗೆ ಸೂಚನೆ ನೀಡಿ, ಆದೇಶ ನೀಡಿತ್ತು. ಆದರೆ, ಸಂತ್ರಸ್ಥ ರೈತನಿಗೆ ಇಲಾಖೆಯು 12 ಲಕ್ಷ ರೂ. ಮಾತ್ರ ಪರಿಹಾರ ನೀಡಿ, ಇನ್ನೂ ಆರು ಲಕ್ಷ ರೂ. ಪರಿಹಾರ ನೀಡಲು ಮೀನಾ-ಮೇಷ ಎಣಿಸುತಿತ್ತು.
ಆದ್ದರಿಂದ ರೈತ ರುದ್ರಪ್ಪ, ಸಿವಿಲ್ ನ್ಯಾಯಾಲಯದ ಆದೇಶದ ಪ್ರಕಾರ ತಮಗೆ ನೀಡಬೇಕಾದ ಪರಿಹಾರವನ್ನು ಪೂರ್ತಿ ನೀಡದೇ, 12 ಲಕ್ಷ ರೂ. ಮಾತ್ರ ನೀಡಿರುವ ನೀರಾವರಿ ಇಲಾಖೆಯ ಅಧಿಕಾರಿಗಳು ಇನ್ನೂ 6 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಾರೆ. ತಕ್ಷಣವೇ ಅಷ್ಟೂ ಪರಿಹಾರದ ಹಣ ಕೊಡಿಸುವಂತೆ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಲಯವು ಪರಿಹಾರದ ಉಳಿದ ಮೊತ್ತ ನೀಡದಿದ್ದರೆ, ವಾಹನ ಜಪ್ತು ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದರೂ ಅಧಿಕಾರಿಗಳು ರೈತನಿಗೆ ಪರಿಹಾರ ನೀಡಿರಲಿಲ್ಲ.
ಆದ್ದರಿಂದ ನ್ಯಾಯಾಲಯದ ಸೂಚನೆ ಮೇರೆಗೆ ಹರಿಹರ ನ್ಯಾಯಾಲಯದ ಅಮೀನರಾದ ಎಂ.ಎಸ್.ಶಿವಪ್ಪ, ಓಂಕಾರಪ್ಪ, ಶಿವಬಸವ ಅವರನ್ನು ಒಳಗೊಂಡ ತಂಡವು ನೀರಾವರಿ ಇಲಾಖೆ ಕಚೇರಿಗೆ ತೆರಳಿ, ನ್ಯಾಯಾಲಯದ ಆದೇಶದಂತೆ ನೀರಾವರಿ ಇಲಾಖೆಯ ವಾಹನವನ್ನು ಜಪ್ತು ಮಾಡಿದರು. 2011ರಿಂದಲೂ ಸುಧೀರ್ಘ ವಿಚಾರಣೆ ನಡೆಯುತ್ತಿದ್ದ ಪ್ರಕರಣದಲ್ಲಿ ತಮಗೆ ಪರಿಹಾರದ ಹಣ ನೀಡದ ಇಲಾಖೆ ವಾಹನ ಜಪ್ತು ಮಾಡಲು ಆದೇಶಿಸಿದ ನ್ಯಾಯಾಲಯದ ತೀರ್ಪಿಗೆ ರುದ್ರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ