ದಾವಣಗೆರೆ:
ಬಿಲ್ವಾ ಕ್ರಿಯೇಷನ್ಸ್‍ನಲ್ಲಿ ನಿರ್ಮಾಣವಾಗಿರುವ ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟುಕೊಳ್ಳುವುದೇ ಜೀವನ ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಚಿತ್ರದ ನಿರ್ಮಾಪಕ ದೇವರಾಜ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.21ರಂದು ರಾಜ್ಯದ 100 ಚಿತ್ರ ಮಂದಿರಗಳಲ್ಲಿ ಹಾಗೂ ಕ್ಯಾಲಿಫೋರ್ನಿಯದಲ್ಲಿ 3 ಸ್ಕ್ರೀನ್‍ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾಡಿನ ಜನತೆ ಚಿತ್ರವನ್ನು ನೋಡಿ ಹಾರೈಸಬೇಕೆಂದು ಮನವಿ ಮಾಡಿದರು.
ನಿರ್ದೇಶಕ ಕಾಂತರಾಜ್ ಮಾತನಾಡಿ, ಚಿತ್ರದ ಬಗ್ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಹಾಗೂ ವಿಶ್ಲೇಷಣೆ ಬರುತ್ತಿದೆ. ಕವಿ ಗೋಪಾಲಕೃಷ್ಣ ಅಡಿಗರ ಯಾವಮೋಹನ ಮುರುಳಿ ಕರೆಯಿತೋ, ದೂರ ತೀರದಿ ನನ್ನನು ಎಂಬ ಹಾಡಿನಲ್ಲಿಬರುವ ಇರುವದೆಲ್ಲವ ಬಿಟ್ಟು, ಇರುದುದರ ಕಡೆಗೆ ಹೋಗುವುದೇ ಜೀವನ ಎಂಬ ಅದ್ಭುತ ಸಾಲುಗಳಿಂದ ಪ್ರೇರಣೆ ಪಡೆದು, ಚಿತ್ರಕ್ಕೆ ಇರುವುದೆಲ್ಲವಾ ಬಿಟ್ಟು, ಇರುವೆ ಬಿಟ್ಟುಕೊಳ್ಳುವುದೇ ಜೀವನ ಎಂಬ ಟೈಟಲ್ ಇಡಲಾಗಿದೆ ಎಂದು ಹೇಳಿದರು.
ಈ ಕಾರ್ಪೋರೇಟ್ ಜಗತ್ತಿನಲ್ಲಿ ನಾವು ನಮ್ಮ ಗುರಿ ಮುಟ್ಟಲು ಕೈಗೊಳ್ಳುವ ನಿರ್ಧಾರಗಳು ಹೇಗಿರಬೇಕು? ನಮ್ಮ ನಿರ್ಧಾರಗಳಿಂದ ನಮ್ಮ ಬಗ್ಗೆ ಕನಸುಗಳನ್ನು ಕಟ್ಟಿಕೊಂಡಿರುವ ಪೋಷಕರು ಖುಷಿಯಾಗಿರ್ತರಾ? ಮಕ್ಕಳ ಬಗ್ಗೆ ಪೋಷಕರ ಕನಸುಗಳು ಹೇಗಿವೆ ಎಂಬುದರ ಬಗ್ಗೆ ಚಿತ್ರಕಥೆಯನ್ನು ಹಣೆಯಲಾಗಿದೆ. ಪ್ರಸ್ತುತ ಸಂಬಂಧಗಳಲ್ಲಿ ನಮ್ಮ ತಪ್ಪು ನಿರ್ಧಾರಗಳಿಂದ ಕೌಟುಂಬಿಕ ಸಂಬಂಧಗಳು ಹೇಗೆ ಅಧಃಪತನಗೊಳ್ಳುತ್ತಿವೆ ಎಂಬುದನ್ನು ಚಿತ್ರದ ಮೂಲಕ ಅನಾವರಣಗೊಳಿಸಲು ಪ್ರಯತ್ನಿಸಲಾಗಿದೆ ಎಂದರು.
ನಾಯಕ ನಟ ಶ್ರೀ ಮಾತನಾಡಿ, ಕಿರುತೆರೆಯಲ್ಲಿ ಅಭಿನಯಿಸುತ್ತಿದ್ದ ನನಗೆ ಹಿರಿತೆರೆಗೆ ಈ ಚಿತ್ರದ ಮೂಲಕ ಪರಿಚಯಿಸಲಾಗಿದೆ. ಈ ಚಿತ್ರವನ್ನು ನಾನೊಬ್ಬ ಪ್ರೇಕ್ಷಕನಾಗಿ ವೀಕ್ಷಣೆ ಮಾಡಿದ ಮೇಲೆ, ಸಿನೆಮಾ ರಂಗದ ಕೆಲ ಕೊರಗುಗಳನ್ನು ಈ ಚಿತ್ರ ನಿಭಾಯಿಸಿದೆ ಎಂಬ ಖುಷಿಯಾಗುತ್ತಿದೆ ಎಂದರು.
ನಟಿ ಮೇಘನಾರಾಜ್ ಮಾತನಾಡಿ, ಇದು ಕನ್ನಡದಲ್ಲಿ ನನ್ನ 13ನೇ ಚಿತ್ರವಾಗಿದ್ದು, ಈ ಚಿತ್ರ ನೀಡಿದಷ್ಟು ಖುಷಿಯನ್ನು ಯಾವ ಚಿತ್ರಗಳು ನೀಡಿಲ್ಲ. ಚಿತ್ರ ಅಧ್ಬುತವಾಗಿ ಮೂಡಿ ಬಂದಿದ್ದು, ಕುಟುಂಬದ ಎಲ್ಲಾ ಸದಸ್ಯರೂ ಜೊತೆಗೆ ಸೇರಿ ನೋಡಬೇಕಾದ ಚಿತ್ರ ಇದಾಗಿದೆ. ಪ್ರೇಕ್ಷಕರು ಚಿತ್ರ ನೋಡಿ ಇನ್ನಷಟ್ಟು ಬೆಂಬಲಿಸಬೇಕೆಂದು ಮನವಿ ಮಾಡಿದರು.
