ಡಿ ಕೆ ಶಿವಕುಮಾರ್ ಗೆ ಪಟ್ಟ ತಪ್ಪಿಸಲು ಪ್ರಯತ್ನಿಸುತ್ತಿದ್ದಾರಾ ಜೆಡಿಎಸ್ ನಾಯಕರು..!?

ಬೆಂಗಳೂರು:

      ಒಕ್ಕಲಿಗ ಸಮುದಾಯದ ಪ್ರಬಲ ಮುಖಂಡ, ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಹುದ್ದೆಗೆ ಪ್ರಬಲ ಆಕಾಂಕ್ಷಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇವರ ಹಾದಿಗೆ ಅನಿರೀಕ್ಷಿತವಾಗಿ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ ಎನ್ನಲಾಗಿದೆ.

     ಚುನಾವಣೆಗಳಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಜೆಡಿಎಸ್, ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟ ತಪ್ಪಿಸಲು ನೋಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದರೆ ದಕ್ಷಿಣ ಕರ್ನಾಟಕ ಭಾಗದ ಒಕ್ಕಲಿಗ ಮತದಾರರನ್ನು ಭದ್ರಕೋಟೆಯನ್ನಾಗಿ ಮಾಡಿಕೊಳ್ಳಬಹುದು ಎಂಬುದು ಜೆಡಿಎಸ್ ನಾಯಕರ ಸಂದೇಹ, ಆತಂಕವಾಗಿದೆ ಎಂದು ಹೇಳಲಾಗುತ್ತಿದೆ.

    ರಾಜಕೀಯದಲ್ಲಿ ಕಾಲ ಸ್ಥಿತ್ಯಂತರದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದುವೇ ನಿದರ್ಶನ. ಕೆಲ ತಿಂಗಳ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿದ್ದಾಗ ಡಿ ಕೆ ಶಿವಕುಮಾರ್ ಅವರು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಯವರನ್ನು ಬಹಿರಂಗವಾಗಿಯೇ ಬೆಂಬಲಿಸಿ ಒಕ್ಕಲಿಗರ ಒಗ್ಗಟ್ಟನ್ನು ಸಂಪೂರ್ಣವಾಗಿ ಪ್ರದರ್ಶಿಸಿದ್ದರು.ಅದು ಮುಂಬೈಯ ಖಾಸಗಿ ಹೊಟೇಲ್ ನಲ್ಲಿ ಉಳಿದುಕೊಂಡಿದ್ದ ಎರಡೂ ಪಕ್ಷಗಳ ಶಾಸಕರನ್ನು ಮನವೊಲಿಸಿ ಕರೆತರುವ ವಿಚಾರದಲ್ಲಿಯಾಗಿರಬಹುದು ಅಥವಾ ಕಾಂಗ್ರೆಸ್ ನೊಳಗೆ ಕೆಲವರಲ್ಲಿದ್ದ ಅಸಮಾಧಾನವನ್ನು ಶಮನಗೊಳಿಸಿ ಸಮ್ಮಿಶ್ರ ಸರ್ಕಾರವನ್ನು ಉಳಿಸಲು ಪ್ರಯತ್ನಿಸಿದ್ದ ವಿಚಾರದಲ್ಲಿಯಿರಬಹುದು ಡಿ ಕೆ ಶಿವಕುಮಾರ್ ಅವರು ಮಾಡಿದ್ದ ಪ್ರಯತ್ನ ಅಷ್ಟಿಷ್ಟಲ್ಲ, ಆದರೆ ಆ ಪ್ರಯತ್ನ ಫಲಿಸಲಿಲ್ಲ, ಮೈತ್ರಿ ಸರ್ಕಾರ ಮುರಿದುಬಿತ್ತು.

     ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಆರು ತಿಂಗಳ ಮೇಲಾಗಿದೆ. ಪರಿಸ್ಥಿತಿ ಬದಲಾಗಿದೆ. ಡಿ ಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಮಾಡಿದರೆ ಅವರು ಕೆಲವು ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಸಮಸ್ಯೆ, ಮುಜುಗರ ಉಂಟಾಗಬಹುದು ಎಂದು ಜೆಡಿಎಸ್ ನ ಕೆಲವು ನಾಯಕರು ಕಾಂಗ್ರೆಸ್ ನಾಯಕರ ಕಿವಿಯಲ್ಲಿ ಊದಿ ಅದು ಕಾಂಗ್ರೆಸ್ ಹೈಕಮಾಂಡ್ ಗೆ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

    ಈಗ ಕುಮಾರಸ್ವಾಮಿಯವರು ಕೂಡ ಶಿವಕುಮಾರ್ ಬಗ್ಗೆ ಒಳ್ಳೆಯ ಮಾತುಗಳನ್ನು ತಮ್ಮ ಆಪ್ತ ವಲಯಗಳಲ್ಲಿ ಹೇಳಿಕೊಳ್ಳುತ್ತಿಲ್ಲ .ಇದರಿಂದ ಒಂದಂತೂ ಸ್ಪಷ್ಟವಾಗಿದೆ. ಒಕ್ಕಲಿಗ ನಾಯಕರ ನಡುವಿನ ಒಗ್ಗಟ್ಟು ಹಳೆಯ ಮರೆತು ಹೋದ ವಿಷಯವಾಗಿದೆ ಎನ್ನಲಾಗುತ್ತಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ   

Recent Articles

spot_img

Related Stories

Share via
Copy link
Powered by Social Snap