ಜಿಪಂ ಅಧ್ಯಕ್ಷರ ಪದಚ್ಯುತಿ ಹಿಂದೆ ಶಿರಾ ಉಪ ಚುನಾವಣೆ ಹುನ್ನಾರ?

ತುಮಕೂರು

     ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್ ಅವರ ವಿರುದ್ಧ ಅವಿಶ್ವಾಸ ಮಂಡನೆ ಪ್ರಯತ್ನದ ಹಿಂದೆ ಶಿರಾ ಉಪ ಚುನಾವಣೆಯ ರಾಜಕೀಯ ಹುನ್ನಾರ ಅಡಗಿದೆಯೆ? ಎರಡು ವರ್ಷಗಳಿಂದ ಅಧ್ಯಕ್ಷರ ಪದಚ್ಯುತಿಗೆ ಸದಸ್ಯರಿಗೆ ಸಿಗದ ಬೆಂಬಲ ಈಗ ಸಿಗಲು ಕಾರಣವೇನು? ಬಾಕಿ ಉಳಿದಿರುವೆ ಕೇವಲ ಎಂಟು ತಿಂಗಳ ಅಧಿಕಾರವಧಿಗೆ ಅಧ್ಯಕ್ಷರ ಬದಲಾವಣೆ ಅನಿವಾರ್ಯವೆ? ಎನ್ನುವ ಮಾತುಗಳು ಜಿಲ್ಲಾ ಪಂಚಾಯ್ತಿ ಸದಸ್ಯರ ಬಳಗದಲ್ಲೇ ಚರ್ಚಿತವಾಗುತ್ತಿವೆ.

     ಈ ಬಾರಿಯ ಜಿಲ್ಲಾ ಪಂಚಾಯ್ತಿಯಲ್ಲಿ ಯಾವುದೇ ಪಕ್ಷಕ್ಕೆ ಆಡಳಿತ ಹಿಡಿಯುವಷ್ಟು ಬಹುಮತ ಇಲ್ಲದ ಕಾರಣ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು, ಜೆಡಿಎಸ್‍ಗೆ ಅಧ್ಯಕ್ಷ ಸ್ಥಾನ, ಬಿಜೆಪಿಗೆ ಉಪಾಧ್ಯಕ್ಷ ಸ್ಥಾನ ಹಂಚಿಕೆ ಮಾಡಿಕೊಳ್ಳಲು ಆಗ ಎರಡು ಪಕ್ಷಗಳ ಮುಖಂಡರು ತೀರ್ಮಾನ ಮಾಡಿದ್ದರು. ಅದರಂತೆ ಜೆಡಿಎಸ್‍ನ ಲತಾ ರವಿಕುಮಾರ್ ಅಧ್ಯಕ್ಷರಾಗಿ, ಬಿಜೆಪಿಯ ಶಾರದಾ ನರಸಿಂಹಮೂರ್ತಿ ಉಪಾಧ್ಯಕ್ಷರಾಗಿದ್ದಾರೆ.

     ಈ ನಡುವೆ, ಜಿಲ್ಲಾ ಪಂಚಾಯ್ತಿ ಸದಸ್ಯರಲ್ಲಿ ಉಂಟಾದ ಅಸಮಾಧಾನಗಳಿಂದಾಗಿ ಎರಡು ವರ್ಷಗಳಿಂದ ಅಧ್ಯಕ್ಷರ ಬದಲಾವಣೆಗೆ ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿದ್ದವು. ಇದೇ ಕಾರಣಕ್ಕೆ ಸದಸ್ಯರು ಎರಡು ಸಭೆಗೆ ಗೈರು ಹಾಜರಾಗಿ, ಆ ಸಭೆಗಳು ಕೋರಂ ಕೊರತೆಯಿಂದ ರದ್ದಾಗಿದ್ದವು. ಆದರೆ, ಹೆಚ್ಚಿನ ಸದಸ್ಯರ ಬೆಂಬಲ ದೊರೆಯದೆ ಆ ಪ್ರಯತ್ನಗಳು ಅಷ್ಟಕ್ಕೇ ಸೀಮಿತವಾಗಿ ತಣ್ಣಗಾಗುತ್ತಿದ್ದವು. ಇನ್ನೇನು ಅಧಿಕಾರವಧಿ ಮುಗಿಯುವ ಸಮಯದಲ್ಲಿ ಅಧ್ಯಕ್ಷರ ಬದಲಾವಣೆಗೆ ಗಂಭೀರ ಪ್ರಯತ್ನಗಳಾಗುವುದಿಲ್ಲ ಹಾಗೂ ಈ ಬಗ್ಗೆ ಯಾವ ಸದಸ್ಯರೂ ಆಸಕ್ತಿ ತೋರುವುದಿಲ್ಲ ಎಂದೇ ಭಾವಿಸಲಾಗಿತ್ತು.

    ಆದರೆ, ಗುರುವಾರ ನಿಗಧಿಯಾಗಿದ್ದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಸಂದರ್ಭದಲ್ಲಿ ಅಧ್ಯಕ್ಷರ ಪದಚ್ಯುತಿ ವಿಚಾರ ದಿಢೀರನೆ ಮತ್ತೆ ಮುನ್ನೆಲೆಗೆ ಬಂದಿತು. ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗಿ ಸಹಜವಾಗಿ ನಡೆಯುತ್ತದೆ ಎಂದುಕೊಂಡು ಬಂದವರಿಗೆ ಜಿಲ್ಲಾ ಪಂಚಾಯ್ತಿ ಕಚೇರಿ ಅಂಗಳದಲ್ಲಿ ಶುರುವಾದ ರಾಜಕೀಯ ಚಟುವಟಿಕೆಗಳ ಅನಿರೀಕ್ಷಿತ ಬೆಳವಣಿಗೆ ಇತರೆ ಸದಸ್ಯರಿಗೇ ಆಶ್ಚರ್ಯ ತಂದಿತ್ತು.

    ಇದು ಕೇವಲ ಗುರುವಾರದ ಬೆಳವಣಿಗೆಯಲ್ಲ. ಅಧ್ಯಕ್ಷರ ಪದಚ್ಯುತಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‍ಗೌಡರು ಒಂದು ವಾರದಿಂದ ಮಾಡಿದ ರಾಜಕೀಯ ಪಿತೂರಿ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ಅವರ ಪತಿ, ಶಿರಾ ಜೆಡಿಎಸ್ ಮುಖಂಡ ಕಲ್ಕೆರೆ ರವಿಕುಮಾರ್ ಬಿಜೆಪಿ ಅಧ್ಯಕ್ಷರ ವಿರುದ್ಧ ಕಿಡಿಕಾರಿದ್ದಾರೆ.

    ಅಧ್ಯಕ್ಷೆ ಲತಾ ಅವರ ವಿರುದ್ಧ ಅವಿಶ್ವಾಸ ಮಂಡಿಸಲು ಜಿಲ್ಲಾ ಪಂಚಾಯ್ತಿಯ 14 ಜೆಡಿಎಸ್ ಸದಸ್ಯರ ಪೈಕಿ ಲತಾ ಅವರನ್ನು ಉಳಿದು ಉಳಿದ ಎಲ್ಲಾ 13 ಸದಸ್ಯರೂ ಸಹಿ ಹಾಕಿರುವುದು ವಿಶೇಷ. ಅಲ್ಲದೆ, ಮೈತ್ರಿ ಪಕ್ಷ ಬಿಜೆಪಿ ಸದಸ್ಯರೂ ಸಹಿ ಮಾಡಿದ್ದಾರೆ.ತಮ್ಮ ಪಕ್ಷದ ಅಧ್ಯಕ್ಷರ ಪದಚ್ಯುತಿಯಾಗುವ ಪರಿಸ್ಥಿತಿ ಬಂದಿರುವಾಗ ಎಚ್ಚೆತ್ತುಗೊಂಡಿರುವ ಜೆಡಿಎಸ್‍ನ ಕೆಲ ಸದಸ್ಯರು, ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ಬದ್ದ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ತಮಗೇನು ಅಸಮಾಧಾನವಿಲ್ಲ ಎಂದು ಕೋಳಾಲ ಕ್ಷೇತ್ರದ ಜೆಡಿಎಸ್ ಸದಸ್ಯ ಶಿವರಾಮಯ್ಯ ಹೇಳಿದ್ದಾರೆ.

    ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ನಾಯಕರು ತೆಗೆದುಕೊಳ್ಳುವ ತೀರ್ಮಾನವನ್ನು ತಾವು ಪಾಲಿಸುವುದಾಗಿ ಹೇಳಿದ ಅವರು, ಅವಿಶ್ವಾಸ ಮಂಡನೆ ಪತ್ರಕ್ಕೆ ತಾವೂ ಸಹಿ ಹಾಕಿದ್ದು, ಇದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದು ಗೊತ್ತಿರಲಿಲ್ಲ, ಅಧ್ಯಕ್ಷರ ಪದಚ್ಯುತಿ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆಯಗುವ ಸಂದರ್ಭ ಬಂದರೆ ತಾವು ನಮ್ಮ ಪಕ್ಷದ ಅಧ್ಯಕ್ಷರ ಬೆಂಬಲಕ್ಕೆ ನಿಲ್ಲುವುದಾಗಿ ಶಿವರಾಮಯ್ಯ ಹೇಳಿದರು.

    ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ಅವರನ್ನು ಅಧಿಕಾರದಿಂದ ಇಳಿಸಿ ಶಿರಾ ಉಪ ಚುನಾವಣೆಯಲ್ಲಿ ತಮ್ಮ ಶಕ್ತಿ ಕುಂದಿಸಲು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‍ಗೌಡರು ಷಡ್ಯಂತರ ಮಾಡುತ್ತಿದ್ದಾರೆ ಎಂದು ಶಿರಾ ಚುನಾವಣೆಯ ಜೆಡಿಎಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ, ಜಿಪಂ ಅಧ್ಯಕ್ಷೆ ಲತಾ ಅವರ ಪತಿ ಕಲ್ಕೆರೆ ರವಿಕುಮಾರ್ ಆಪಾದಿಸಿದ್ದಾರೆ.

   ಸುರೇಶ್ ಗೌಡರು ಈ ಹಿಂದೆ ನನ್ನನ್ನು ಬಿಜೆಪಿ ಸೇರಲು ಆಹ್ವಾನಿಸಿದ್ದರು, ಹೋಗಲಿಲ್ಲ. ಶಿರಾ ತಾಲ್ಲೂಕಿನ ಹಲವು ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಫೋನ್ ಮಾಡಿ ಬಿಜೆಪಿ ಸೇರಲು ಕೇಳಿದ್ದರು, ಯಾವ ಸದಸ್ಯರೂ ಇವರ ಮಾತಿಗೆ ಸೊಪ್ಪು ಹಾಕಲಿಲ್ಲ. ಅದಕ್ಕೆ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಿದರೆ ನಾನು ವಿಧಿಯಿಲ್ಲದೆ ಬಿಜೆಪಿ ಸೇರುತ್ತೇನೆ, ಅಹಿಂದ ಮತಗಳನ್ನು ಬಿಜೆಪಿಗೆ ಸೆಳೆಯಬಹುದು ಎಂದು ಸುರೇಶ್‍ಗೌಡರು ಭಾವಿಸಿದ್ದಾರೆ. ಅದು ಸಾಧ್ಯವಿಲ್ಲ ಎಂದು ಕಲ್ಕೆರೆ ರವಿಕುಮಾರ್ ಹೇಳಿದ್ದಾರೆ.

    ಐದು ವರ್ಷ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಬಹುದು, ನಾವು ಯಾರೂ ನಿಮಗೆ ತೊಂದರೆ ಮಾಡುವುದಿಲ್ಲ ಎಂದು ಹಿಂದೆ ಇದೇ ಸುರೇಶ್‍ಗೌಡರು ಹೇಳಿದ್ದರು. ಈಗ ಪದಚ್ಯುತಿಗೆ ಪ್ರಯತ್ನ ಮಾಡುತ್ತಿದ್ದಾರೆ. ರಾಜಿನಾಮೆ ಕೊಡಲು ಹೇಳಿದ್ದರೆ ಕೊಡಬಹುದಿತ್ತು, ನಾವು ಅಧಿಕಾರಕ್ಕೆ ಅಂಟಿ ಕೂರುವುದಿಲ್ಲ. ಆದರೆ, ಶಿರಾ ಉಪ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲಾ ಪಂಚಾಯ್ತಿಯಲ್ಲಿ ಅಧ್ಯಕ್ಷರ ಬದಲಾವಣೆಯ ರಾಜಕಾರಣ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.

    ಕೊರೊನಾ ಸಮಯದಲ್ಲಿ ಶಿರಾ ತಾಲ್ಲೂಕಿನಲ್ಲಿ ತಾನು ಸಂಕಷ್ಟಕ್ಕೆ ಸಿಲುಕಿದವರಿಗೆ 45 ಸಾವಿರ ದಿನಸಿ ಕಿಟ್ ವಿತರಣೆ ಮಾಡಿದ್ದೇನೆ. 79 ದೇವಸ್ಥಾನಗಳ ಗೋಪುರ ನಿರ್ಮಾಣಕ್ಕೆ ನೆರವಾಗಿದ್ದೇನೆ. ಸುರೇಶ್‍ಗೌಡರು ಈಗ ಶಿರಾ ಕ್ಷೇತ್ರದ ಹಳ್ಳಿಗಳಿಗೆ ಹೋಗಿ ದೇವಸ್ಥಾನ ನಿರ್ಮಾಣಕ್ಕೆ ನೆರವಾಗುತ್ತೇನೆ ಎಂದು ಹೇಳಿ ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

    ಕೆಲವು ಸದಸ್ಯರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ನಾನು ಅಧ್ಯಕ್ಷೆಯಾಗಿ ಯಾವತ್ತೂ ಪಕ್ಷಬೇಧ ಮಾಡಿಲ್ಲ. ಅಭಿವೃದ್ಧಿಪರವಾಗಿ ಕೆಲಸ ಮಾಡುತ್ತಿದ್ದೇನೆ. ಉಳಿದ ಎಂಟು ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುವ ಬದಲು ಗೊಂದಲ ಮಾಡುತ್ತಾ ಕೆಲ ಸದಸ್ಯರು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್ ಅಸಮಾಧನ ವ್ಯಕ್ತಪಡಿಸಿದರು.

    ಗುರುವಾರ ಸಭೆ ನಡೆದಿದ್ದರೆ ಪ್ರಮುಖ ವಿಚಾರಗಳ ಚರ್ಚೆ ಆಗಬೇಕಾಗಿತ್ತು ಹಾಗೂ ಹಲವು ಕಾರ್ಯಕ್ರಮಗಳಿಗೆ ಸಭೆಯ ಅನುಮೋದನೆ ತೆಗೆದುಕೊಳ್ಳಬೇಕಾಗಿತ್ತು. 15ನೇ ಹಣಕಾಸು ಯೋಜನೆಯಡಿ 6.4 ಕೋಟಿ ರೂ ಅನುದಾನ ಬಂದಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಿ ಬಳಿಕ ಕ್ರಿಯಾ ಯೋಜನೆ ರೂಪಿಸಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಬೇಕಾಗಿತ್ತು. ಜೊತೆಗೆ ಲಿಂಕ್ ಡಾಕ್ಯುಮೆಂಟ್‍ಗೆ ಅನುಮೋದನೆ ನೀಡಬೇಕಾಗಿತ್ತು ಎಂದು ಹೇಳಿದರು.

    ಜಿಲ್ಲಾ ಪಂಚಾಯ್ತಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಕೋರಲು ಮುಖ್ಯಮಂತ್ರಿ ಬಳಿಗೆ ಜಿಲ್ಲಾ ಪಂಚಾಯ್ತಿ ಸದಸ್ಯರ ನಿಯೋಗ ಹೋಗುವ ಕುರಿತು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಉದ್ದೇಶ ತಮಗಿತ್ತು. ಸಭೆ ನಡೆಯದೆ ಅದಕ್ಕೆ ಅವಕಾಶವೇ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಬದಲಾವಣೆಗೆ ನಮ್ಮ ಬೆಂಬಲವಿಲ್ಲ, ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಯಾವುದೇ ಸೂಚನೆ ನಿಡಿಲ್ಲ, ನಾವು ಕೆ.ಎನ್.ಆರ್. ಬಳಗದವರು, ಅವರೇ ನಮ್ಮ ವರಿಷ್ಠರು, ಅವರು ಹೇಳಿದ್ದನ್ನು ಅನುಸರಿಸುತ್ತೇವೆ, ಕೆಎನ್‍ಆರ್ ಬಳಗದ ಯಾವ ಸದಸ್ಯರೂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಯ ಪತ್ರಕ್ಕೆ ಸಹಿ ಹಾಕಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ, ಕಾಂಗ್ರೆಸ್ ಸದಸ್ಯ ಕೆಂಪಚೌಡಪ್ಪ ಹೇಳಿದರು.ಉಳಿದಿರುವ ಎಂಟು ತಿಂಗಳ ಅಧಿಕಾರವಧಿಯಲ್ಲಿ ರಾಜಕೀಯ ಗೊಂದಲಗಳಿಗೆ ಅವಕಾಶ ನೀಡದೆ, ಅಭಿವೃದ್ಧಿ ಕೆಲಸಗಳಿಗೆ ಗಮನ ಕೊಡಬೇಕು ಎಂದು ಸಲಹೆ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link