ತಿಪಟೂರು 

ವಿಶ್ವದಾದ್ಯಂತ ರುದ್ರತಾಂಡವವಾಡುತ್ತಿರುವ ಕೊರೊನಾ ಮಹಾಮಾರಿಯು ಕಲ್ಪತರು ನಾಡಿನ ರೈತರನ್ನು ಅವರ ಬೆನ್ನೆಲುಬಾಗಿರುವ ಕೊಬ್ಬರಿಯ ಬೆಲೆ ಕುಸಿತದ ಮೂಲಕ ಆಹುತಿ ತೆಗೆದುಕೊಳ್ಳಲು ತಯಾರಾಗಿದೆ. ಆದರೂ ಸರ್ಕಾರ ಮಾತ್ರ ನಫೆಡ್ ತೆರೆಯಲು ಮೀನಾಮೇಷ ಏಣಿಸುತ್ತಿದ್ದು, ಅನ್ನದಾತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಏಷ್ಯಾದ ದೊಡ್ಡ ಕೊಬ್ಬರಿ ಮಾರುಕಟ್ಟೆಯಾದ ತಿಪಟೂರು ಎ.ಪಿ.ಎಂ.ಸಿಯು ಕೊರೊನಾ ಮಹಾಮಾರಿಯ ಲಾಕ್ ಡೌನ್ ಮಧ್ಯೆ ಏಪ್ರಿಲ್ 29 ರಿಂದ ಕೊಬ್ಬರಿ ಖರೀದಿಯನ್ನು ಆರಂಭಿಸಿತು. ಕೊಬ್ಬರಿ ಖರೀದಿ ಆರಂಭವಾದಾಗಿನಿಂದಲೂ ಸತತವಾಗಿ ಕೊಬ್ಬರಿ ಧಾರಣೆಯು ಕುಸಿತ ಕಂಡು ಬರುತ್ತಿದೆ. ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಬೆಂಬಲ ಬೆಲೆಯನ್ನು ಘೋಷಿಸಿ ನಫೆಡ್ ಮುಖಾಂತರ ಕೊಬ್ಬರಿ ಖರೀದಿಯನ್ನು ಆರಂಭಿಸಬೇಕಾಗಿ ರೈತರು ಆಗ್ರಹಿಸುತ್ತಿದ್ದಾರೆ.
ಕೊರೊನಾ ಲಾಕ್‍ಡೌನ್ ನಡುವೆ ಏಪ್ರಿಲ್ 29 ರಂದು ಆರಂಭವಾಗಿ ಮೊದಲಿಗೆ 11,200 ರೂ. ಗರಿಷ್ಠ ಬೆಲೆ, ಮೇ 2 ರಂದು 10,950 ರೂ., ಮೇ 9 ರಂದು 10,100 ರೂ. ಹೀಗೆ ಸತತವಾಗಿ ಇಳಿಕೆ ಕಾಣುತ್ತಿದ್ದು ಶನಿವಾರ ಒಟ್ಟು ಒಟ್ಟು ಆವಕ 2222.24 ಕ್ವಿಂಟಾಲ್ ತೂಕದ 5168 ಚೀಲ ಬಂದಿದ್ದು, ಬೆಲೆ ತೀರ ಕನಿಷ್ಠ ಮಟ್ಟಕ್ಕೆ ತಲುಪಿ 9100 ರೂ. ಗೆ ಬಂದು ತಲುಪಿದ್ದು, ರೈತರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ.
ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯನ್ನೆ ಹೆÀಚ್ಚು ರೈತರು ನಂಬಿಕೊಂಡಿದ್ದಾರೆ. ಸರ್ಕಾರದ ನಿಯಮದಂತೆ ಸರ್ಕಾರದ ಬೆಂಬಲ ಬೆಲೆಗಿಂತ ಸತತವಾಗಿ 3 ಬಾರಿ ಬೆಲೆ ನಿಗದಿಯಾದರೆ ಕೂಡಲೇ ಸರ್ಕಾರವು ನಫೆಡ್ ತೆರೆಯಬೇಕು. ಆದರೆ ಇಲ್ಲಿ ಸತತವಾಗಿ ಒಂದು ತಿಂಗಳಿಂದಲೂ ಬೆಲೆ ಕಡಿಮೆಯಾಗುತ್ತಿದ್ದರೂ, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ರೈತರನ್ನು ಆಕ್ರೋಶ ಭರಿತರನ್ನಾಗಿಸಿದೆ.
ಇನ್ನೂ ಕಲ್ಪತರು ನಾಡಿನ ಜೀವನಾಡಿಯಾದ ತೆಂಗಿನ ಬೆಲೆಯನ್ನು ಹೆಚ್ಚಿಸಲು ಮತ್ತು ಬೆಂಬಲ ಬೆಲೆಯನ್ನು ನೀಡುವಂತೆ ಹಾಲಿ ಶಾಸಕ, ಮಾಜಿ ಶಾಸಕ ಮತ್ತು ಮಾಜಿ ಹಾಲಿ ಸಂಸದರು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರೂ ಸರ್ಕಾರ ಕೈ ಚೆಲ್ಲಿ ಕುಳಿತಿದೆ.
ಎ.ಪಿ.ಎಂ.ಸಿ ತಿದ್ದುಪಡಿ ಕಾಯಿದೆ :
ಇವೆಲ್ಲ ಸಂಕಷ್ಟಗಳ ನಡುವೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ರಾಜ್ಯ ಸರ್ಕಾರದ ಮೇಲೆ ಸವಾರಿ ಮಾಡಿ ಎ.ಪಿ.ಎಂ.ಸಿ ಕಾಯಿದೆಯನ್ನು ಜಾರಿಗೆ ತಂದಿದ್ದು, ಇದರಿಂದ ಎ.ಪಿ.ಎಂ.ಸಿ ಗಳು ಮುಚ್ಚುವುದರಿಂದ ರೈತರ ಬೆಂಬಲ ಬೆಲೆ ಎನ್ನುವ ಶವಪಟ್ಟಿಗೆಗೆ ಕೊನೆಯ ಮಳೆಯನ್ನು ಹೊಡೆದಿದೆ.
ಈ ಎ.ಪಿ.ಎಂ.ಸಿ ಕಾಯಿದೆಯು ಜಾರಿಯಾದರೆ ಎಲ್ಲಾ ಕಾರ್ಪೊರೇಟ್ ವಲಯದವರು ಬಂದು ಭೂಮಿಯನ್ನು ತೆಗೆದುಕೊಂಡು ತಮಗೆ ಬೇಕಾದ ಬೆಳೆಯನ್ನು ಬೆಳೆದು ತಮಗೆ ಬೇಕಾದ ಬೆಲೆಯನ್ನು ನಿಗದಿಪಡಿಸುವುದರಿಂದ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗುತ್ತದೆ. ಅಲ್ಲದೆ ರೈತರು ತಮ್ಮ ಬೆಲೆಗೆ ಮಾರುವುದಿರಲಿ, ಸಿಕ್ಕ ಬೆಲೆಗೆ ಮಾರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
