ಪಾವಗಡ
ಸುಮಾರು 25 ವರ್ಷಗಳಿಂದ ಪಾವಗಡ ತಾಲ್ಲೂಕಿನ ರೈತರು ಬರವನ್ನು ಎದುರಿಸುತ್ತಿದ್ದಾರೆ. ಪ್ರತಿ ವರ್ಷ ಮಳೆ ಬೆಳೆಯಿಲ್ಲದೆ ರೈತರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ಜಮೀನು ವಿಸ್ತೀರ್ಣ 1,43,843.17 ಹೆಕ್ಟೇರ್ ಇದ್ದು, ನಿವ್ವಳ ಸಾಗುವಳಿ 1,06,838.51 ಹೆಕ್ಟೇರ್ ಇದೆ. ಇದರಲ್ಲಿ ನೀರಾವರಿ ಸಾಗುವಳಿ ವಿಸ್ತೀರ್ಣ 14,049.5 ಹೆಕ್ಟೇರ್, ಮಳೆ ಆಶ್ರಿತ ಭೂಮಿ 92,789 ಹೆಕ್ಟೇರ್ ಆಗಿದ್ದು, ಪಾವಗಡ ತಾಲ್ಲೂಕಿನಲ್ಲಿ ಸುಮಾರು ಹತ್ತು ವರ್ಷಗಳಿಂದ ಮಳೆ ಇಲ್ಲದೆ ಬೆಳೆ ಆಗದೆ, ತಾಲ್ಲೂಕಿನ ರೈತರು ಕಂಗಾಲಾಗಿದ್ದಾರೆ. ರೈತ ಜೀವನ ನಿರ್ವಹಿಸಲು ಸಹ ಸಾಮಥ್ರ್ಯ ಇಲ್ಲದೆ ಕೈಕಟ್ಟಿ ಕುಳಿತಿದ್ದು, ಕೆಲವು ರೈತರು ಸಾಲ ಸೋಲ ಮಾಡಿ ಜೀವನ ನಡೆಸುತ್ತಿದ್ದಾರೆ.
ಕೆರೆ ಕುಂಟೆ ಒಣಗಿವೆ
ತಾಲ್ಲೂಕಿನಲ್ಲಿ 2-3 ಹದ ಬಿಟ್ಟರೆ ಇದುವರೆಗೂ ಮಳೆ ಬೀಳದೆ ಕೆರೆ ಕಟ್ಟೆಗಳು ಒಣಗಿವೆ. ಕುಡಿಯಲು ನೀರಿಲ್ಲದೆ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ. ರೈತರ ಜೀವನ ಮಟ್ಟ ಸುಧಾರಿಸಲು ಪರ್ಯಾಯವಾಗಿ ಸರ್ಕಾರ ಕೃಷಿ ಮತ್ತು ತೋಟಗಾರಿ ಇಲಾಖೆ ವತಿಯಿಂದ ಬರದ ಹಿನ್ನೆಲೆಯ ಅನುಗುಣವಾಗಿ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಮುಂಗಾರು ಮಳೆ ಎರಡು ಮೂರು ಹದ ಸುರಿದ ನಂತರ, ರೈತರು ಸಾಲ ಸೋಲ ಮಾಡಿ, ಬಿತ್ತನೆ ಬೀಜ ಸಿದ್ದಪಡಿಸಿ ಕೊಂಡು ಕಾದು ಕುಳಿತು, ಕೆಲವು ರೈತರು ಬಿತ್ತನೆ ಮಾಡಿದರೆ, ಕೆಲ ರೈತರು ಬಿತ್ತನೆ ಮಾಡಿ ಮಳೆಗಾಗಿ ಕಾದು ಕುಳಿತಿದ್ದಾರೆ. ಇನ್ನು ಉಳಿದ ರೈತರು ಬೀಜವನ್ನು ಮಾರುಕಟ್ಟೆಗೆ ವಾಪಾಸ್ ತಂದು ಮಾರಿದ್ದಾರೆ. ಪಾವಗಡ ತಾಲ್ಲೂಕಿನಲ್ಲಿ ಪ್ರತಿವರ್ಷ ಇದೇ ಗೋಳಾದರೆ ರೈತ ಉದ್ದಾರ ಆಗುವುದಾದರೂ ಹೇಗೆ ಎಂಬುದು ರೈತರ ಗೋಳಾಗಿದೆ.
ಪಾವಗಡ ತಾಲ್ಲೂಕು ಶೇಂಗಾ ಬೆಳೆಗೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಳೆದ 20 ವರ್ಷಗಳಿಂದ ದಿನೆ ದಿನೆ ಶೇಂಗಾ ಬೆಳೆ ಕಣ್ಮರೆಯಾಗುತ್ತಿದೆ. ಮಳೆ ಆಶ್ರಿತ ಬೆಳೆಗಳಾದ ತೊಗರಿ, ಶೇಂಗಾ, ಜೋಳ, ಸಜ್ಜೆ, ಹಲಸಂದಿ, ಹುರುಳಿ, ನವಣೆ ಮುಂತಾದ ವಿವಿಧ ಬೆಳೆಗಳನ್ನು ಇಲ್ಲಿನ ರೈತರು ರೂಢಿಸಿಕೊಂಡಿದ್ದಾರೆ. ಸುಮಾರು ವರ್ಷಗಳಿಂದ ಮಳೆಯಿಲ್ಲದ ಕಾರಣ, ಬಿತ್ತನೆ ಬೀಜ ಕೂಡ ಸಿಗದೆ ಕಣ್ಮರೆ ಆಗುವ ಪರಿಸ್ಥಿತಿ ಉಂಟಾಗುತ್ತಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ 4 ಹೋಬಳಿಗಳು ಇದ್ದು, ಕಸಬಾ ಮತ್ತು ವೈ.ಎನ್.ಹೊಸಕೋಟೆ ಹೋಬಳಿಯಲ್ಲಿ ಪ್ರತಿ ವರ್ಷ ಮಳೆ ಕೈಕೊಟ್ಟರೂ ಸಹ, ನಿಡಗಲ್ ಹೋಬಳಿಯಲ್ಲಿ ಅಲ್ಪ ಸ್ವಲ್ಪವಾದರೂ ಬೆಳೆ ಸಿಗುತ್ತಿತ್ತು. ಆದರೆ ಈ ಸಾಲಿನಲ್ಲಿ ಇಲ್ಲಿಯೂ ಬೆಳೆ ನಾಶವಾಗಿದ್ದು, ನಾಗಲಮಡಿಕೆ ಹೋಬಳಿಯ 3 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಮೀನನ್ನು ಸೋಲಾರ್‍ಗೆ ರೈತರು ಲೀಸ್‍ಗೆ (ಭೋಗ್ಯಕ್ಕೆ) ನೀಡಿದ್ದಾರೆ. ಕೆಲ ರೈತರು ಮಾತ್ರ ಅಲ್ಪ ಸ್ವಲ್ಪ ಬೆಳೆ ಇಟ್ಟಿದ್ದು, ಕಸಬಾ ಮತ್ತು ವೈ.ಎನ್.ಹೊಸಕೋಟೆ ಹೋಬಳಿಯಲ್ಲಿ ಸಂರ್ಪೂಣ ಬೆಳೆ ನಾಶವಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ತಾಲ್ಲೂಕಿನಲ್ಲಿ ಕೆಲ ರೈತರು ಮಳೆ ಆಶ್ರಿತ ಬೆಳೆಗಳನ್ನು ಇಟ್ಟು ಕೈ ಸುಟ್ಟು ಕೊಂಡರೆ, ಇನ್ನೂ ಕೆಲ ರೈತರು ಕೊಳವೆ ಬಾವಿಗಳನ್ನು ಕೊರೆಸಿ ಟೊಮೊಟೊ, ಬದನೆ ಕಾಯಿ ಇನ್ನೂ ವಿವಿಧ ತರಿಕಾರಿ ಬೆಳೆಯಲು ಹೋಗಿ ಕೈ ಸುಟ್ಟುಕೊಂಡು ಸಾಲಗಾರರಾಗಿದ್ದಾರೆ.
ಟೊಮೋಟೊ ಬೆಲೆ ಕುಸಿತ ರೈತ ಕಂಗಾಲು
ಪಾವಗಡ ತಾಲ್ಲೂಕಿನಲ್ಲಿ ಸುಮಾರು 10 ಸಾವಿರ ಹೆಕ್ಟೇರ್‍ನಲ್ಲಿ ಟೊಮೊಟೊ ಬೆಳೆ ಇಟ್ಟು, ಈಗ ಬೆಳೆ ಬಂದಿದೆ. ಖರ್ಚಿಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೆಲೆ ಸಿಗದ ಕಾರಣ, ರೈತರು ರಸ್ತೆಗಳಲ್ಲಿ, ಹೊಲದ ಪಕ್ಕದಲ್ಲಿ ಟೊಮೊಟೊ ಸುರಿಯುವ ಪರಿಸ್ಥಿತಿ ನಿರ್ಮಾಣವಾಗಿ, ರೈತರು ಸಾಲಗಾರರಾಗಿದ್ದಾರೆ.
ಒಬ್ಬ ರೈತ 5 ರಿಂದ 10 ಎಕರೆ ತನಕ ಟೊಮೋಟೊ ಬೆಳೆ ಇಟ್ಟಿದ್ದು, ಬೆಳೆಗೆ ಅನುಗುಣವಾಗಿ ಬೆಲೆ ಸಿಗದ ಕಾರಣ ವಾಹನ ಮತ್ತು ಕೂಲಿ ಕಾರ್ಮಿಕರಿಗೆ ಕೂಲಿ ನೀಡಲೂ ಸಹ ಆಗಿಲ್ಲ. ಹೊಲದಲ್ಲಿ ಬೆಳೆಯನ್ನು ಹಾಗೆಯೆ ಬಿಟ್ಟಿದ್ದು, ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಲು ರೈತಾಪಿ ವರ್ಗದವರು ಒತ್ತಾಯಿಸಿದ್ದಾರೆ.
ಪಟ್ಟಣಕ್ಕೆ ಐದು ಕಿಲೋ ಮೀಟರ್ ದೂರದಲ್ಲಿರುವ ಚಂದ್ರಶೇಖರ್ ಎಂಬ ರೈತ 4 ಎಕರೆಯಲ್ಲಿ ಟೊಮೊಟೊ ಬೆಳೆ ಇಟ್ಟಿದ್ದು, ಎರಡು, ಮೂರು ಕಟಾವಿನಲ್ಲಿ 50 ಸಾವಿರ ರೂ.ನಷ್ಟು ಹಣ ಬಂದಿತ್ತು. ಇತ್ತೀಚೆಗೆ ಬೆಲೆ ಕುಸಿತದಿಂದ ಇಟ್ಟಿರುವ ಖರ್ಚು ಸಹ ಹೊರಡದೆ ಸಾಲಗಾರನಾಗಿದ್ದೇನೆ ಎಂದು ಅಲವತ್ತುಕೊಂಡಿದ್ದಾರೆ. ಇವರು ಹೇಳುವ ಪ್ರಕಾರ ಗೊಬ್ಬರ, ಡ್ರಿಪ್, ಔಷಧಿ ಸೇರಿದಂತೆ ಸುಮಾರು 2 ಲಕ್ಷ ರೂ. ಖರ್ಚಾಗಿದೆ.
ಭಾನುವಾರ ಮಾರು ಕಟ್ಟೆಗೆ ತೆಗೆದುಕೊಂಡು ಹೋಗಿದ್ದ ಟೊಮೊಟೊ ವಾಪಸ್ ತಂದು ಸುರಿಸುತ್ತಿದ್ದೇನೆ. ಬೆಳೆ ಇಡಲು ಖರ್ಚು ಮಾಡಿದ ಹಣ ಸಹ ಬರುತ್ತಿಲ್ಲ. ನಾನು ಸಾಲಗಾರನಾಗಿದ್ದು, ಇಂದು ದಿಕ್ಕು ತೋಚದ ಸ್ಥಿತಿಯಲ್ಲಿ ಇದ್ದೇವೆ ಎಂದು ರೈತ ಚಂದ್ರಶೇಖರ್ ಮತ್ತು ತಾಡಮ್ಮ ತಮ್ಮ ನೋವು ತೋಡಿಕೊಂಡಿದ್ದಾರೆ.
ತಾಲ್ಲೂಕಿನಲ್ಲಿ ಟೊಮೊಟೊ ಬೆಳೆ ಇಟ್ಟ ಎಲ್ಲ ರೈತರ ಪಾಡು ಹೀಗೆಯೆ ಇದೆ. ಸರ್ಕಾರ ರೈತರಿಗೋಸ್ಕರ ಇದ್ದು, ಬೆಳೆ ಇಟ್ಟ ರೈತರು ಇಂತಹ ತೊಂದರೆಯಲ್ಲಿ ಇದ್ದಾಗ ಸಹಾಯ ಧನ ನೀಡಲು ಮುಂದಾಗಬೇಕಾಗಿದೆ ಎಂದು ರೈತರು ಪತ್ರಿಕೆಗೆ ತಿಳಿಸಿದ್ದಾರೆ.
ಮೂಕ ಪ್ರಾಣಿಗಳಿಗೆ ಮೇವಿಗೆ ಗೋಶಾಲೆಗಳನ್ನು ತೆರೆಯಲಿ
ತೀವ್ರ ಬರದ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರು ಮತ್ತು ಕೂಲಿ ಕಾರ್ಮಿಕರು ಸುಮಾರು 50 ಸಾವಿರಕ್ಕೂ ಹೆಚ್ಚು ಜನ ವಲಸೆ ಹೋಗಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ದನಕರುಗಳಿಗೆ, ಕುರಿ, ಮೇಕೆ, ಎಮ್ಮೆ ಸಾಕಾಣಿಕೆಗೆ ಮೇವಿಲ್ಲದೆ ರೈತರು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಿದ್ದರಾಗಿದ್ದಾರೆ.
ತಾಲ್ಲೂಕಿನಲ್ಲಿ ಬರದಿಂದ ಪರಿತಪಿಸುತ್ತಿದ್ದು, ದನ-ಕರುಗಳಿಗೆ ಮೇವು, ಕುಡಿಯುವ ನೀರು ಕೊರತೆಯಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ತೊಟ್ಟಿ ಮೂಲಕ ಗೋವು, ಎಮ್ಮೆ, ಕುರಿ, ಮೇಕೆಗಳಿಗೆ ನೀರುಣಿಸಲು ಮುಂದಾಗಬೇಕಾಗಿದೆ. ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಮಳೆ ಬರುವ ಕೊನೆಯಲ್ಲಿ ತರಾತುರಿಯಾಗಿ ಮೇವು ವಿತರಣೆ ಮಾಡಿ ಕೈ ತೊಳೆದು ಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಒಟ್ಟಾರೆ ಕೂಲಿ ಕಾರ್ಮಿಕರ ಹಾಗೂ ರೈತರಿಗೆ ಉದ್ಯೋಗ ಮತ್ತು ಕುಡಿಯುವ ನೀರು ವ್ಯವಸ್ಥೆ, ಮೂಕ ಪ್ರಾಣಿಗಳಿಗೆ ಮೇವು, ಕುಡಿಯುವ ನೀರಿನ ಬಗ್ಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಶ್ರಮಿಸಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
