ದಾವಣಗೆರೆ :
ಹಿಂದೂ ಧರ್ಮಗಳಲ್ಲಿನ ಮೂಢನಂಬಿಕೆ ಬಗ್ಗೆ ಪ್ರಶ್ನಿಸುವವರು ಅನ್ಯ ಧರ್ಮಗಳಲ್ಲಿನ ಮೂಢನಂಬಿಕೆಯನ್ನು ಏಕೆ ಪ್ರಶ್ನಿಸಲ್ಲ. ಬೇರೆ ಧರ್ಮಗಳಲ್ಲಿ ಮೂಢನಂಬಿಕೆಗಳೇ ಇಲ್ಲವೇ ಎಂದು ಜ್ಯೋತಿಷ್ಯಿ ಮಹರ್ಷಿ ಆನಂದ ಗುರೂಜಿ ಪ್ರಶ್ನಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದು ಮೂಢನಂಬಿಕೆ ಎನ್ನುವುದರ ಬಗ್ಗೆ ಮೊದಲು ಸ್ಪಷ್ಟತೆ ಇರಬೇಕು. ಅಮಾಯಕರನ್ನು ಬಲಿಕೊಡುವುದು ಮೂಢನಂಬಿಕೆಯಾಗಿದೆ. ಆದರೆ, ಭಾರತೀಯರಾದ ನಾವು ಮೌಢ್ಯವನ್ನು ಪ್ರಶ್ನಿಸುವ ಭರದಲ್ಲಿ ನಮ್ಮ ತಲೆಯ ಮೇಲೆ ನಾವೇ ಮಣ್ಣು ಹಾಕಿಕೊಳ್ಳುತ್ತಿದ್ದೇವೆ ಮಾರ್ಮಿಕವಾಗಿ ನುಡಿದರು.
ದೇವಸ್ಥಾನ ಕಟ್ಟಿದ ತಕ್ಷಣ ಜೆಸಿಬಿ ತಂದು ಪ್ರಶ್ನೆ ಮಾಡುವ ಮೂಲಕ ದೇವಸ್ಥಾನ ಕೆಡವುವ ಸರ್ಕಾರ, ಅನ್ಯ ಧರ್ಮಿಯರ ಎಷ್ಟು ಆಲಯ, ಪ್ರಾರ್ಥನಾ ಮಂದಿರವನ್ನು ಕೆಡವಿದೆ. ಆದರೆ, ಹಿಂದೂ ಧರ್ಮಿಯ ಗಣೇಶ ದೇವಸ್ಥಾನ, ಹನುಮ ಮಂದಿರ ಕೆಡವಿರುವ ಬಗ್ಗೆ ಸಾಕಷ್ಟು ನಿದರ್ಶನಗಳಿವೆ ಎಂದು ಹೇಳಿದರು.
ಶಬರಿಮಲೈಗೆ ತನ್ನದೇಯಾದಂಥಹ ಇತಿಹಾಸವಿದೆ. ಇಲ್ಲಿಯ ವರೆಗೆ ಪಾವಿತ್ರತೆಯನ್ನು ಕಾಪಾಡಿಕೊಂಡು ಬಂದಿದೆ. ಎಷ್ಟೋ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಒಂದೊಂದು ಆಚರಣೆಯ ಹಿಂದೆ ಒಂದೊಂದು ನಂಬಿಕೆ ಇದೆ. ಆದರೆ, ಸುಪ್ರೀಂ ಕೋರ್ಟ್‍ನ ತೀರ್ಪು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿದರು.
ಭಾರತೀಯ ಸಂಸ್ಕತಿಯಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನಮಾನ ನೀಡಿದ್ದೇವೆ. ತಾಯಿ, ಮಡದಿ, ಅಕ್ಕ, ತಂಗಿ ಹೀಗೆ ಎಲ್ಲಾ ರೀತಿಯ ಸ್ಥಾನ ನೀಡಲಾಗಿದೆ. ಆದರೆ, ಮಹಿಳೆಯರಿಗೆ ಋತು ಚಕ್ರ ಆಗುವುದು ಮೈಲಿಗೆ ಎಂಬ ಕಲ್ಪನೆ ಇರುವುದರಿಂದ ಶಬರಿಮಲೈ ಪ್ರವೇಶವನ್ನು ಮಹಿಳೆಯರಿಗೆ ನಿರಾಕರಿಸುವುದು ಒಳ್ಳೆಯದು ಎಂದು ಸಮರ್ಥಿಸಿಕೊಂಡರು.
ಮಸೀದಿಯ ಒಳಗಡೆ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಕಟ್ಟುಪಾಡುಗಳಿವೆ. ನಾವು ಶಬರಿಮಲೈಗೆ ಹೋಗುವಾಗ ಯರಿಮಲೈಗೆ ಹೋಗಿ ಅಲ್ಲಿರುವ ದರ್ಗಾಕ್ಕೆ ಭೇಟಿ ನೀಡಿ, ನಂತರ ಪಂಪದ ಮೂಲಕ ಸ್ನಾನ ಮಾಡಿ ಹೋಗಬೇಕಾಗಿದೆ. ಈಗ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ದರ್ಗಾಕ್ಕೆ ಮಹಿಳೆಯರನ್ನು ಕರೆದೊಯ್ದಾಗ ಏನಾದರೂ ಸಮಸ್ಯೆಯಾದರೆ ಯಾರು ಹೊಣೆ?, ಅಲ್ಲದೆ, ಮಲೆ ಏರುವ ದಟ್ಟ ಕಾನನದಲ್ಲಿ ಶೌಚಾಲಯ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಅಲ್ಲದೆ, ಮಹಿಳೆಯರಿಗೆ ಸುರಕ್ಷತೆಯೂ ಇಲ್ಲ. ಹೀಗಾಗಿ ಮಹಿಳೆಯರು ಶಬರಿಮಲೈಗೆ ಹೋಗದಿರುವುದೇ ಒಳ್ಳೆಯದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ