ಹುಳಿಯಾರು:
ಈ ಚಿತ್ರಗಳನ್ನು ನೋಡಿದ ತಕ್ಷಣ ಕಾಡುವ ಕಟ್ಟ ಕಡೆಯ ಪ್ರಶ್ನೆ ಏನೆಂದರೆ, ಇದೇನು ರಸ್ತೆಯೋ, ಕೃಷಿ ಹೊಂಡವೋ? ಹೌದು , ನಿತ್ಯ ಸಾವಿರಾರು ವಾಹನಗಳು ಓಡಾಡುವ ರಸ್ತೆಯ ದುಸ್ಥಿತಿ ಇದಾಗಿದೆ. ಆಳೆತ್ತರದ ಗುಂಡಿಗಳು ಬಿದ್ದು ವಾಹನ ಸವಾರರು ಭಯದಿಂದ ಓಡಾಡುವಂತ್ತಾಗಿದೆ. ರಸ್ತೆಯಲ್ಲಿ ಜಲ್ಲಿಗಳು ಮೇಲೆದ್ದು ದಾರಿ ಹೋಕರಿಗೆ ಬಡಿದು ಗಾಯಗಳಾಗುವ ಆತಂಕ ಕಾಡುತ್ತಿದೆ. ಅಕ್ಕಪಕ್ಕದ ಮನೆಗಳಿಗೆ ರಸ್ತೆಯ ಧೂಳು ನುಗ್ಗಿ ಖಾಯಿಲೆಗೆ ಕಾರಣವಾಗುತ್ತಿದೆ. ಆದರೂ ಅಧಿಕಾರಿಗಳು ಮಾತ್ರ ಕುಂಬಕರ್ಣ ನಿದ್ರೆಯಿಂದ ಎದ್ದಂತ್ತೆ ಕಾಣುತ್ತಿಲ್ಲ.
ಈ ರಸ್ತೆ ಇರೋದು ಹುಳಿಯಾರಿನ ಕೇಶವಾಪುರದ ಬಳಿ. ಈ ರಸ್ತೆಯಲ್ಲಿ ಹೊಸದುರ್ಗದಿಂದ ಬೆಂಗಳೂರು ಕಡೆ ಹಾಗೂ ಪಂಚನಹಳ್ಳಿ, ಅರಸೀಕೆರೆಯಿಂದ ಹುಳಿಯಾರಿಗೆ ನಿತ್ಯ ನೂರಾರು ಬಸ್, ಆಟೋ, ಲಾರಿ ಸೇರಿದಂತೆ ಇತರೆ ವಾಹನಗಳು ಬಹುಪ್ರಯಾಸದಿಂದ ತಿರುಗಾಡುತ್ತಿವೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ತುಂಬೆಲ್ಲಾ ನೀರು ತುಂಬಿಕೊಂಡು ರಸ್ತೆಯೇ ಕಾಣದಂತಾಗಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಈ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 234 ಹಾದು ಹೋಗಲಿದ್ದು ಆ ರಸ್ತೆಯ ಕಾಮಗಾರಿಗೆ ಚಾಲನೆ ದೊರೆತಿರುವ ಹಿನ್ನಲೆಯಿಂದ ಗುಂಡಿ ಮುಚ್ಚುವ ಗೋಜಿಗೆ ಹೋಗದೆ ನಿರ್ಲಕ್ಷ್ಯಿಸಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಕಾರ್ಯ ಇನ್ನೂ 25 ಕಿ.ಮೀ.ದೂರದ ಪಂಚನಹಳ್ಳಿ ಭಾಗದಲ್ಲಿ ನಡೆಯುತ್ತಿದ್ದು ಈ ಭಾಗಕ್ಕೆ ಬರಲು ಇನ್ನೂ ಆರೇಳು ತಿಂಗಳುಗಳು ಬೇಕಾಗುತ್ತದೆ.
ಅಷ್ಟು ತಿಂಗಳುಗಳ ಕಾಲ ಜನ ಪ್ರಾಣಾಪಾಯದಿಂದ ಓಡಾಡುವುದನ್ನು ತಪ್ಪಿಸುವ ಸಲುವಾಗಿಯಾದರೂ ಈಗ ಬಿದ್ದಿರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








