ತುರುವೇಕೆರೆ:
ಪಟ್ಟಣದ ಶಾಲೆಯೊಂದರ ಪಕ್ಕ ಕಸದ ರಾಶಿಯೇ ಸುರಿದಿದ್ದು ಪರಿಸರ ಮಾಲಿನ್ಯ ಉಂಟುಮಾಡುತ್ತಿದೆ ಎಂದು ನಾಗರೀಕರು ಅರೋಪಿಸಿದ್ದಾರೆ.
ಜಿ.ಜೆ.ಸಿ.ಕ್ರೀಡಾಂಗಣದಲ್ಲಿ ಪ್ರತಿದಿನ ನೂರಾರು ನಾಗರೀಕರು ವಾಯು ವಿಹಾರಕ್ಕೆಂದು ಬರುತ್ತಾರೆ. ಕ್ರೀಡಾಂಗಣದಲ್ಲಿ ಶುದ್ದ ಗಾಳಿ ಸಿಗಲಿದೆ ಎಂದು ಮುಂಜಾನೆಯಿಂದ ಸಂಜೆವರೆವಿಗೂ ನಾಗರೀಕರು ವಿಧ್ಯಾರ್ಥಿಗಳು, ಪುಟಾಣಿ ಮಕ್ಕಳು, ಪೋಷಕರು ಹಾಗೂ ವಯೋ ವೃದ್ದರು ಸೇರಿದಂತೆ ನೂರಾರು ಜನ ಇಲ್ಲಿಗೆ ಪ್ರತಿದಿನ ಭೇಟಿ ಕೊಡುತ್ತಾರೆ.
ಆದರೆ ಕ್ರೀಡಾಂಗಣಕ್ಕೆ ಹೊಂದಿಕೊಂಡಂತಿರುವ ಕಾನ್ವೆಂಟ್ ಹಿಂಭಾಗ ಕಸದ ರಾಶಿಯೇ ಬಿದ್ದಿದ್ದು ಪಟ್ಟಣ ಪಂಚಾಯಿತಿಯಾಗಲೀ, ಶಾಲಾ ಆಡಳಿತ ವರ್ಗವಾಗಲೀ ಇತ್ತ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ. ಶಾಲಾ ಮಕ್ಕಳು ಬಳಸುವ ಪೇಪರ್, ನೀರಿನ ಬಾಟಲ್ ಸೇರಿದಂತೆ ಅನೇಕ ಅನುಪಯುಕ್ಯ ವಸ್ತುಗಳನ್ನು ಕಿಟಕಿಯಿಂದಾಚೆ ಬೇಕಾಬಿಟ್ಟಿ ಬಿಸಾಡುವುದರಿಂದ ಕಟ್ಟಡದ ಹಿಂಭಾಗ ಕಸದ ರಾಶಿಯೇ ಬಿದ್ದಿದೆ.
ಮದ್ಯಬಾಟಲಿಗಳು ಹಾಗೂ ಅದರ ಬಾಕ್ಸ್‍ಗಳು ಸಹಾ ಅಲ್ಲಿ ಬಿದ್ದಿದ್ದು ಕೆಲವೊಮ್ಮೆ ಬಿದ್ದಿರುವ ಕಸಕ್ಕೆ ಬೆಂಕಿ ಹಚ್ಚುವುದರಿಂದ ಕ್ರೀಡಾಂಗಣದ ತುಂಬ ವಾಯು ಮಾಲಿನ್ಯ ಉಂಟಾಗಿ ಜನರ ಮೇಲೆ ದುಷ್ಪರಿಣಾಮ ಬೀರಲಿದೆ. ಅಲ್ಲದೆ ಶಾಲಾ ಆವರಣ ಸ್ವಚ್ಚಗೊಳಿಸದಿರುವುದರಿಂದ ಪರಿಸರ ಮಾಲಿನ್ಯ ಹೆಚ್ಚಾಗಿ ಮಕ್ಕಳ ಆರೋಗ್ಯದ ಮೇಲೂ ಸಹಾ ದುಷ್ಪರಿಣಾಮ ಬೀಳುವ ಸಾದ್ಯತೆ ಹೆಚ್ಚಿದೆ ಎಂಬುದು ಪರಿಸರ ಪ್ರೇಮಿಗಳ ಅರೋಪವಾಗಿದೆ.
ಕ್ರೀಡಾಂಗಣದ ಸುರಕ್ಷತೆಗೆ ಸುತ್ತಲೂ ಹಾಕಿದ್ದ ಕಬ್ಬಿಣದ ಮೆಸ್ಸು ಈ ಶಾಲೆಗೆ ಹೊಂದಿಕೊಂಡಿದ್ದು ಶಾಲಾ ಪಕ್ಕದಲ್ಲಿ ಮೆಸ್ಸನ್ನು ತೆರವುಗೊಳಿಸಿರುವುದರಿಂದ ಬಳಸಿ ಬರಬೇಕಾಗಿದ್ದ ಶಾಲೆಗೆ ಮಕ್ಕಳು ಸಮೀಪವಾಗಲಿದೆ ಎಂಬ ದೃಷ್ಟಿಯಿಂದ ಕ್ರೀಡಾಂಗಣ ಒಳಗಡೆಯಿಂದಲೇ ಅನೇಕ ಮಕ್ಕಳು ತೆರಳುತ್ತಿರುವುದು ಸರ್ವೆಸಾಮಾನ್ಯವಾಗಿದೆ.
ಚಿತ್ರಕಲಾ ಸಮಿತಿ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಕ್ರೀಡಾಂಗಣದ ಸುತ್ತಲೂ ಪರಿಸರ ಸಂರಕ್ಷಣೆ ಸಲುವಾಗಿ ನೂರಾರು ಸಸಿಗಳನ್ನು ನೆಟ್ಟಿದ್ದು ಶಾಲಾ ಕಟ್ಟಡದ ಪಕ್ಕ ಕಬ್ಬಿಣದ ಮೆಸ್ಸು ತೆರೆವುಗೊಳಿಸಿದ ಜಾಗದಲ್ಲಿ ಕುರಿಮೇಕೆಗಳು ಬಂದು ಬೆಳೆಯುತ್ತಿರುವ ಸಸಿಗಳನ್ನು ಕಡಿದು ಹಾಳುಮಾಡುತ್ತಿವೆ ಎಂಬ ಅರೋಪವೂ ಸಹ ಪರಿಸರ ಪ್ರೇಮಿಗಳಿಂದ ಕೇಳಿಬರುತ್ತಿದೆ. ಅಲ್ಲದೆ ರಾತ್ರಿ ವೇಳೆ ಕ್ರೀಡಾಂಗಣದಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಿದ್ದು ಪೋಲೀಸರೂ ಸಹಾ ಇತ್ತ ಗಮನ ಹರಿಸಬೇಕಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ್ ಅಭಿಯಾನ ದೇಶದೆಲ್ಲೆಡೆ ಪ್ರತಿಧ್ವನಿಸುತ್ತಿದ್ದರೂ ಸಹಾ ಈ ಶಾಲೆ ಮಾತ್ರ ಅದರಿಂದ ಹೊರತಾದಂತಿದೆ. ಅದ್ದರಿಂದ ಪಟ್ಟಣ ಪಂಚಾಯಿತಿಯಾಗಲೀ ಇಲ್ಲವೆ ಶಾಲಾ ಅಡಳಿತವಾಗಲೀ ಈ ಬಗ್ಗೆ ಶೀಘ್ರ ಗಮನ ಹರಿಸಿ ಇದರ ಬಗ್ಗೆ ಕ್ರಮ ಕೈಗೊಳ್ಳುವುದರ ಮುಖಾಂತರ ಪರಿಸರ ಸಂರಕ್ಷಿಸಲಿ ಎಂಬುದು ನಾಗರೀಕರ ಆಶಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ