ನಗರದಲ್ಲಿ ನಿಯಂತ್ರಣಕ್ಕೆ ಬಂದಿದೆಯೇ ತಂಬಾಕು ನಿಯಂತ್ರಣ ?

     ಗುಟ್ಕಾ, ಖೈನಿ, ಪಾನ್ ಮಸಾಲ ಮೊದಲಾದ ತಿನಿಸುಗಳಲ್ಲಿ 4 ಸಾವಿರಕ್ಕಿಂತ ಹೆಚ್ಚು ರಸಾಯನಿಕ ಅಂಶ ಅಡಕವಾಗಿದ್ದು, ಇದನ್ನು ಸೇವಿಸುತ್ತಾ ಬಂದರೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ ಎಂದು ವರದಿಗಳು ತಿಳಿಸಿವೆ. ಈ ವರದಿಗಳ ಅನ್ವಯವೆ ಕಟ್ಟುನಿಟ್ಟಿನ ಸೂಚನೆಗಳನ್ನು ಸುಪ್ರೀಂಕೋರ್ಟ್ ನೀಡಿತ್ತು.

     ಸಿಗರೇಟ್, ಬೀಡಿ ಮತ್ತಿತರ ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಪಯೋಗಿಸುವುದನ್ನು ನಿಷೇಧಿಸುವಂತೆ ಈ ಹಿಂದೆಯೇ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ 2003 ರಲ್ಲಿ ಒಂದು ಕಾಯ್ದೆಯನ್ನು ಜಾರಿಗೆ ತರಲಾಯಿತು. 2012ರಲ್ಲಿ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಷೇಧ ಮತ್ತು ನಿಯಂತ್ರ ಕಾಯ್ದೆಗೆ ತಿದ್ದಪಡಿ ತರಲಾಗಿದೆ.

    ಈ ಕಾಯ್ದೆಯಲ್ಲಿ ದಂಡ ಹಾಗೂ ಶಿಕ್ಷೆ ವಿಧಿಸಲು ಅವಕಾಶವಿದೆ. 200ರೂಗಳ ದಂಡದಿಂದ ಹಿಡಿದು, 2 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷೇಧಿಸಲಾಗಿದೆ. ಇದರ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಜಿಲ್ಲಾಮಟ್ಟದಲ್ಲಿ ಇದಕ್ಕಾಗಿಯೆ ಸಮಿತಿ ರಚನೆಯಾಗಿದೆ. ಒಂದಷ್ಟು ದಿನಗಳ ಕಾಲ ಈ ಸಮಿತಿ ಸದಸ್ಯರು ಅಂಗಡಿಗಳಿಗೆ ತೆರಳಿ ತಂಬಾಕು ಉತ್ಪನ್ನಗಳನ್ನು ನಿಷೇಧಿಸಿರುವ ಬಗ್ಗೆ ಮಾಹಿತಿ ನೀಡಿದರು.

    ಅಂಗಡಿಗಳ ಮುಂದೆ ನಾಮ ಫಲಕ ಪ್ರದರ್ಶಿಸುವಂತೆ ಸೂಚಿಸಿದರು. ಈ ಎಲ್ಲ ಕಾರ್ಯಗಳು ನಡೆದವು. ಅಂಗಡಿಗಳು ಒಂದು ಫಲಕ ತೂಗು ಹಾಕಿಕೊಂಡವು. ಆದರೆ ಅಂಗಡಿಗಳ ಹಿಂಭಾಗದಲ್ಲಿ ಸ್ಥಳಾವಕಾಶ ಕಲ್ಪಿಸಿದ ಅಂಗಡಿಗಳು ತಮ್ಮ ವ್ಯಾಪಾರ ವಹಿವಾಟಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿವೆ. ಜಿಲ್ಲಾ ಮಟ್ಟದಲ್ಲಿರುವ ನಿಯಂತ್ರಣ ಸಮಿತಿಗಳು ಈ ಬಗ್ಗೆ ಎಚ್ಚರಗೊಳ್ಳಬೇಕಲ್ಲವೆ? ಸಾರ್ವಜನಿಕ ಸ್ಥಳ ಎಂದರೆ ನಾಲ್ಕಾರು ಜನ ಇರುವ ಪ್ರದೇಶಗಳು ಸೇರುವುದಲ್ಲವೆ? ಟೀ ಅಂಗಡಿಗಳು ಮತ್ತಿತರ ಸಾರ್ವಜನಿಕ ಉಪಯೋಗದ ಸ್ಥಳದಲ್ಲಿ ಸಿಗರೇಟ್ ಸೇವನೆಗೆ ಅವಕಾಶ ಮಾಡಿಕೊಡುವ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಜರುಗಬೇಕಲ್ಲವೆ?

    ಕೆಲವು ಕಡೆ ಪ್ರತ್ಯಕ್ಷವಾಗಿ ಮದ್ಯ ಸರಬರಾಜು ಮಾಡುವ ಅಂಗಡಿಗಳಿದ್ದರೆ ಮತ್ತೆ ಕೆಲವೆಡೆ ಪರೋಕ್ಷವಾಗಿ ಇದರ ಮಾರಾಟ ನಡೆಯುತ್ತದೆ. ಮಿನರಲ್ ವಾಟರ್‍ಗಳ ಬ್ರಾಂಡ್ ಲೇಬಲ್ ಅಂಟಿಸಿ ಮದ್ಯ ಮಾರಾಟ ಮಾಡುವ ಕಲೆ ಹೊಸದೇನಲ್ಲ. ವಿವಿಧ ಸ್ಥಳಗಳಿಗೆ ತೆರಳಿ ಗಮನಿಸಿದರೆ ಇದರ ಅರಿವಾಗುತ್ತದೆ.

   ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರಿಗೆ ಲೇಬಲ್‍ಗಳನ್ನು ನೋಡುತ್ತಲೇ ಅರ್ಥವಾಗುತ್ತದೆ. ಮದ್ಯ ಮಾರಾಟ ದಂತೆಯೆ ತಂಬಾಕು ಉತ್ಪನ್ನಗಳನ್ನು ಸಹ ಪರೋಕ್ಷವಾಗಿ ಮಾರಾಟ ಮಾಡಲಾಗುತ್ತದೆ. ಅದರ ಮೇಲೆ ಲೇಬಲ್ ಇಲ್ಲದೆ ಇರಬಹುದು ಆದರೆ ಸುಲಭವಾಗಿ ತಂಬಾಕು ಉತ್ಪನ್ನಗಳು, ಗುಟ್ಕ, ಕೈನಿ, ಪಾನ್ ಮಸಾಲ ಮೊದಲಾದವುಗಳು ದೊರಕುತ್ತವೆ.

    ಆರೋಗ್ಯಕ್ಕೆ ಹಾನಿಕಾರಕ ಎಂಬುದು ಗೊತ್ತಿದ್ದರೂ, ಇಂತಹವುಗಳ ಮಾರಾಟ ನಿಷೇಧಿಸಿದ್ದರೂ ಇಂದಿಗೂ ಈ ವಸ್ತುಗಳು ಸಿಗುತ್ತವೆ ಎಂದರೆ ಸರ್ಕಾರಗಳು ನಿಯಮಗಳಲ್ಲಿ ಬ್ಯಾನ್ ಮಾಡಿ ಪ್ರಯೋಜನವೇನು? ಯಾವುದೇ ಸರ್ಕಾರಗಳು ಈ ಬಗ್ಗೆ ಆಸಕ್ತಿ ತೋರುತ್ತಿಲ್ಲವೇಕೆ? ಇಂತಹ ವಸ್ತು, ಪದಾರ್ಥಗಳ ಮಾರಾಟದಿಂದಲೇ ಸರ್ಕಾರಗಳಿಗೆ ಅಧಿಕ ದೇಣಿಗೆ ಬರುತ್ತಿರುವಾಗ ಕಟ್ಟುನಿಟ್ಟಿನ ನಿರ್ಬಂಧ ಹೇಗೆ ಸಾಧ್ಯವಾದೀತು? ಇವುಗಳ ತಯಾರಿಕೆ ಮತ್ತು ಮಾರಾಟದ ಹಿಂದೆ ದೊಡ್ಡ ಶಕ್ತಿಗಳೆ ಇವೆ. ರಾಜಕಾರಣಿಗಳೆ ಇಂತಹ ತಯಾರಿಕಾ ಕಂಪನಿಗಳ ಮಾಲೀಕತ್ವ ವಹಿಸಿದ್ದಾರೆ. ಇವರಲ್ಲಿ ಅದೆಷ್ಟೋ ಮಂದಿ ಸರ್ಕಾರದ ಭಾಗವಾಗಿಯೂ (ಶಾಸಕರು, ಸಂಸದರು) ಇರುತ್ತಾರೆ. ಪರಿಸ್ಥಿತಿ ಹೀಗಿರುವಾಗ ಯಾವ ನಿಯಮಗಳು ಇದ್ದರೇನು ಪ್ರಯೋಜನ?!

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ