ದೋಸ್ತಿ ಸರ್ಕಾರಕ್ಕೆ ಐಟಿ ಭರ್ಜರಿ ಶಾಕ್ ….!!!

ಬೆಂಗಳೂರು

       ಲೋಕಸಭೆ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಸಿದ್ದತೆ ನಡೆಸುತ್ತಿರುವ ಬೆನ್ನಲ್ಲೇ ಆದಾಯ ಇಲಾಖೆ(ಐಟಿ) ಅಧಿಕಾರಿಗಳು ಇಂದು ಸಚಿವರು, ಗುತ್ತಿಗೆದಾರರು, ಉದ್ಯಮಿಗಳು ಸೇರಿದಂತೆ ಒಟ್ಟು 20 ಕ್ಕೂ ಹೆಚ್ಚು ಕಡೆ ದಾಳಿ ನಡೆಸುವ ಮೂಲಕ ದೋಸ್ತಿ ಸರ್ಕಾರಕ್ಕೆ ಭರ್ಜರಿ ಶಾಕ್ ನೀಡಿದ್ದಾರೆ.

       ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಲೋಕೋಪಯೋಗಿ ಸಚಿವ .ಡಿ.ರೇವಣ್ಣ ಆಪ್ತರು, ವಿಧಾನಪರಿಷತ್ ಸದಸ್ಯ ಫಾರೂಕ್ ಸೇರಿದಂತೆ ಮತ್ತಿತರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸುವ ಮೂಲಕ ಐಟಿ ಇಲಾಖೆ ಬಿಸಿ ಮುಟ್ಟಿಸಿದೆ.

        ವಿಶೇಷವೆಂದರೆ ನಿನ್ನೆಯಷ್ಟೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಮ್ಮ ಪಕ್ಷದ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಕೆಲವು ಬೆಂಬಲಿಗರ ಮೇಲೆ ಐಟಿ ಇಲಾಖೆ ಯಾವುದೇ ಸಂದರ್ಭದಲ್ಲಿ ದಾಳಿ ನಡೆಸಬಹುದೆಂದು ಭವಿಷ್ಯ ನುಡಿದಿದ್ದರು. ಈ ಬೆನ್ನಲ್ಲೇ ಐಟಿ ದಾಳಿ ನಡೆದಿರುವುದನ್ನು ಗಮನಿಸಬಹುದು.
ಇನ್ನು ಐಟಿ ದಾಳಿ ನಡೆದಿರುವುದು ರಾಜಕೀಯ ಕೆಸರೆರಚಾಟಕ್ಕೆ ಎಡೆ ಮಾಡಿಕೊಟ್ಟಿದೆ.

       ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು ಸೇರಿದಂತೆ ಮತ್ತಿತರರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.

ಎಲ್ಲೆಲ್ಲಿ ದಾಳಿ:

        ರಾಜಧಾನಿ ಬೆಂಗಳೂರು, ಮಂಡ್ಯ, ಹಾಸನ, ಮೈಸೂರು ,ಚಿಕ್ಕಮಗಳೂರು, ಶಿವಮೊಗ್ಗ ,ಕನಕಪುರ ಸೇರಿದಂತೆ 15ಕ್ಕೂ ಹೆಚ್ಚು ಕಡೆ ದಿಢೀರ್ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಗದು ಮತ್ತು ಕೆಲವು ದಾಖಲೆಗಳನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.

        ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಇರುವ ಜೋಳ ಮತ್ತು ಪಾಪ್ಕಾರ್ನ್ ವ್ಯಾಪಾರಿ ಸಿದ್ದಿಕ್ ಸೇಠ್ ಮನೆ, ಕಚೇರಿ ಸೇರಿದಂತೆ ಅನೇಕ ಕಡೆ ದಾಳಿ ನಡೆಸಲಾಗಿದೆ.ಒಟ್ಟು ನಾಲ್ಕು ವಾಹನಗಳಲ್ಲಿ ಬಂದ ಐಟಿ ಅಧಿಕಾರಿಗಳು ಎಚ್‍ಎಸ್‍ಆರ್ ಲೇಔಟ್, ಜಯನಗರ, ಬಸವನಗುಡಿ, ಸೌತ್‍ಎಂದಡ್ ಸರ್ಕಲ್ ಮತ್ತಿತರ ಕಡೆ ದಾಳಿ ನಡೆಸಿ ತೆರಿಗೆ ವಂಚನೆ ಮಾಡಿರುವ ಕುರಿತಂತೆ ದಾಖಲೆಗಳನ್ನು ಪತ್ತೆ ಹಚ್ಚಿದ್ದಾರೆ.

       ಮೂಲಗಳ ಪ್ರಕಾರ ಸಿದ್ದಿಕ್ ಸೇಠ್ ಮುಖ್ಯಮಂತ್ರಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಹಂಚಲು ಹಣ ಸಂಗ್ರಹಿಸಿದ್ದರ ಕುರಿತು ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

        ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಂಡ್ಯ ಜಿಲ್ಲೆ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಅವರ ಅಣ್ಣನ ಮಗನ ಕಚೇರಿ ಮತ್ತು ನಿವಾಸಗಳ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

          ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಪುಟ್ಟರಾಜು ಅವರ ಸ್ವಗ್ರಾಮ ಚಿನಕುರುಳಿಯ ನಿವಾಸದಲ್ಲಿ ಬೆಳಗ್ಗೆ 5 ಗಂಟೆಗೆ ಸಿಆರ್ಪಿಟಎಫ್ ಯೋಧರೊಂದಿಗೆ ಆಗಮಿಸಿದ 8ಕ್ಕೂ ಹೆಚ್ಚು ಮಂದಿ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ.

         ಇತ್ತೀಚೆಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ನಿಖಿಲ್ಕು?ಮಾರಸ್ವಾಮಿ ನಾಮಪತ್ರ ಸಲ್ಲಿಸುವ ವೇಳೆ ಹಣ ಹಂಚಿಕೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ತುಣುಕುಗಳು ಹರಿದಾಡಿದ್ದವು.

         ಅಲ್ಲದೆ ಮಂಡ್ಯದಲ್ಲಿ ಮತದಾರರಿಗೆ ಆಮಿಷವೊಡ್ಡಲು ಹಣ ಮತ್ತು ಹೆಂಡ ಹಂಚುವ ಸಾಧ್ಯತೆ ಇದೆ ಎಂದು ಐಟಿ ಇಲಾಖೆ ಅಧಿಕಾರಿಗಳಿಗೆ ಕೆಲವರು ಗೌಪ್ಯವಾಗಿ ಪತ್ರ ಬರೆದಿದ್ದರು ಎಂದು ತಿಳಿದುಬಂದಿದೆ.

         ಪುಟ್ಟರಾಜು ಜೊತೆಗೆ ಅವರ ಅಣ್ಣನ ಮಗ ಮೈಸೂರಿನ ವಿಜಯನಗರದಲ್ಲಿರುವ ಜಿಲ್ಲಾ ಪಂಚಾಯತ್ ಸದಸ್ಯ ಅಶೋಕ್ ಮನೆ ಮೇಲೂ ಐಟಿ ದಾಳಿ ನಡೆಸಿದೆ. ದಾಳಿ ಸಂದರ್ಭದಲ್ಲಿ ಮನೆಯಲ್ಲಿದ್ದ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.

        ಜೆಡಿಎಸ್ ಗೆ ಸಂಬಂಧಿಸಿದಂತೆ ಅಶೋಕ್ ನಿವಾಸದಲ್ಲಿ ಹಣವನ್ನೇನಾದರೂ ಸಂಗ್ರಹಿಸಿ ಇಡಲಾಗಿತ್ತೇ ಎಂಬುದರ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕಲಾಗಿದೆ. ದಾಳಿ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಅಶೋಕ್ ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.

        ರೇವಣ್ಣ ಬೆಂಬಲಿಗರ ಮೇಲೆ ದಾಳಿ : ಸಮ್ಮಿಶ್ರ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಸಚಿವರೆಂದೇ ಗುರುತಿಸಿಕೊಂಡಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಆಪ್ತರು ಸೇರಿದಂತೆ ಹಾಸನ ಜಿಲ್ಲೆಯಲ್ಲಿ ಒಟ್ಟು 8 ಕಡೆ ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

       ರೇವಣ್ಣನವರ ಆಪ್ತರು ಹಾಗೂ ಗುತ್ತಿಗೆದಾರರಾದ ರಾಯಿಗೌಡ, ಅಶ್ವಥ್, ನಾರಾಯಣ ರೆಡ್ಡಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಮನೆ ಮೇಲೆ ದಾಳಿ ನಡೆಸಲಾಗಿದೆ.

       ಎರಡು ಇನ್ನೋವಾ ಕಾರಿನಲ್ಲಿ ಬಂದ 8 ಮಂದಿ ಅಧಿಕಾರಿಗಳ ತಂಡ ಹಾಸನ, ಚನ್ನರಾಯಪಟ್ಟಣ ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಸಿದ್ದಾರೆ. ಮೂವರು ಗುತ್ತಿಗೆದಾರರು ರೇವಣ್ಣನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಹೀಗಾಗಿಯೇ ದಾಳಿ ನಡೆಸಲಾಗಿದೆ ಎಂದು ಐಟಿ ಮೂಲಗಳು ಖಚಿತಪಡಿಸಿವೆ.

        ಕಳೆದ ತಿಂಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅಶ್ವಥ್, ನಾರಾಯಣ ಗೌಡರ ಮನೆಗೆ ಆಗಮಿಸಿದ್ದರು. ಚುನಾವಣಾ ಸಂದರ್ಭದಲ್ಲಿ ಹಣ ಸಂಗ್ರಹಣೆ ಮಾಡಲಾಗಿದೆಯೇ? ಇಲ್ಲವೇ ಗುತ್ತಿಗೆದಾರರಿಂದ ಹಣ ಪಡೆಯಲು ಮುಂದಾಗಿದ್ದರೆ ಎಂಬ ಶಂಕೆಯ ಮೇಲೆ ದಾಳಿ ನಡೆಸಲಾಗಿದೆ.

      ಹಾಸನದ ಆರ್ಸಿರ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಅವರ ಮಾವ ಜಯರಾಮ್ ಅವರ ಮನೆ ಮೇಲೂ ದಾಳಿ ನಡೆಸಲಾಗಿದೆ.

       ದಾಳಿ ಸಂದರ್ಭದಲ್ಲಿ ತನಿಖಾಧಿಕಾರಿಗಳು ಹಲವು ವರ್ಷಗಳಿಂದ ನಡೆಸಿರುವ ಗುತ್ತಿಗೆ ಕಾಮಗಾರಿ, ಬಿಲ್ಗಸಳು, ಯಾವ ಯಾವ ಸಂದರ್ಭದಲ್ಲಿ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ, ಹಣದ ವಹಿವಾಟು ಇತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

       ಇನ್ನು ಐಟಿ ತಂಡ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರ ಕಚೇರಿ ಮತ್ತು ನಿವಾಸದ ಮೇಲೂ ದಾಳಿ ನಡೆಸಿದೆ. ಮಂಗಳೂರು ಮತ್ತು ಬೆಂಗಳೂರು ಸೇರಿದಂತೆ ಅವರ ಸಂಬಂಧಿಕರ ಮನೆ ಮೇಲೂ ದಾಳಿ ಮಾಡಲಾಗಿದೆ. ಬಿ.ಎಂ.ಫಾರೂಕ್ ಸಿಎಂ ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುಸಿಕೊಂಡಿದ್ದರು.

        ಇತ್ತ ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲೂ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ .ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಸಿ.ವಿ.ಎನ್.ಎಚ್.ರೆಡ್ಡಿ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ. 

       ಚಿಕ್ಕಮಗಳೂರಿನ ಚೆನ್ನಾಪುರ ರಸ್ತೆಯಲ್ಲಿರುವ ರೆಡ್ಡಿ ಅವರ ಒಡೆತನಕ್ಕೆ ಸೇರಿದ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಶಿವಮೊಗ್ಗದಲ್ಲಿ ಶಂಕರಮಠ ರಸ್ತೆಯಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ಆಪ್ತ ಪರಮೇಶ್ವರ್ ಗೌಡ ಅವರ ಒಡೆತನಕ್ಕೆ ಸೇರಿದ ಶೃತಿ ಮೋಟಾರ್ಸ್ ಕಚೇರಿ ಮತ್ತು ಮನೆ ಮೇಲೂ ದಾಳಿ ಮಾಡಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

        ಇನ್ನೊಂದೆಡೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರ ಕನಕಪುರದ ತಾಲ್ಲೂಕು ಕಚೇರಿ ಮೇಲೆ ದಾಳಿ ನಡೆದಿದೆ. ಅಲ್ಲದೆ ಅವರ ಸಂಬಂಧಿಕರ ಮನೆಯಲ್ಲೂ ಕಡತಗಳನ್ನು ಪರಿಶೀಲನೆ ನಡೆಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap