ಪತಿಯ ಅನುಮಾನ ಪ್ರವೃತ್ತಿಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು

       ಮನೆಯಲ್ಲಿ 22 ಸ್ಪೈಕ್ಯಾಮೆರಾಗಳನ್ನು ಅಳವಡಿಸಿ ಯಾವಾಗಲೂ ನಡತೆ ಬಗ್ಗೆ ಶಂಕಿಸುತ್ತಿದ್ದ ಸಾಫ್ಟ್‍ವೇರ್ ಇಂಜಿನಿಯರ್ ಪತಿಯ ತಲೆಗೆ ಬ್ಯಾಟ್‍ನಿಂದ ಹೊಡೆದು ಪತ್ನಿ ಸರಿಯಾಗಿಯೇ ಬುದ್ಧಿ ಕಲಿಸಿರುವ ಘಟನೆ ಜಯನಗರದಲ್ಲಿ ನಡೆದಿದೆ.ಸಾಫ್ಟ್ ವೇರ್ ಎಂಜಿನಿಯರ್ 44 ವರ್ಷದ ಸುದರ್ಶನ್ ಮೇಲೆ ಪತ್ನಿ ವಿನಯ (ದಂಪತಿಯ ಹೆಸರು ಬದಲಾಯಿಸಲಾಗಿದೆ )ಜಯನಗರದಲ್ಲಿ ವಾಸಿಸುತ್ತಿದ್ದರು.

       ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ ಆತ ಆಕೆಯ ಕಣ್ಣಿಡಲು ಮನೆಯಲ್ಲಿ 22 ಸ್ಪೈಕ್ಯಾಮೆರಾಗಳನ್ನು ಅಳವಡಿಸಿದ್ದಲ್ಲದೇ ಪತ್ನಿಯ ಫೋನ್‍ನಲ್ಲಿ ಸ್ಪೈವೇರ್ ಪ್ರೋಗ್ರಾಮ್‍ನನ್ನು ಹಾಕಿದ್ದನು.ಪತಿ ಯ ಅತಿಯಾದ ಅನುಮಾನದಿಂದ ಬೇಸತ್ತಿದ್ದ ಪತ್ನಿ ಕ್ಯಾಮಾರ ಹಾಕಿರುವುದು ಗೊತ್ತಾಗಿ ಅತನ ತಲೆಗೆ ಬ್ಯಾಟ್‍ನಿಂದ ಹೊಡೆದು ಆಕ್ರೋಶ ತೀರಿಸಿಕೊಂಡಿದ್ದು ಗಾಯಗೊಂಡಿದ್ದ ಪತಿಯ ತಲೆಗೆ ಹೊಲಿಗೆಗಳನ್ನು ಚಿಕಿತ್ಸೆ ನೀಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಇವರಿಬ್ಬರ ಜಗಳ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

        ಕಾಲೇಜಿಗೆ ಹೋಗುತ್ತಿದ್ದ ವಿನಯಳನ್ನು ಇಷ್ಟಪಟ್ಟಿದ್ದ ಸುದರ್ಶನ್ ಮದುವೆಗೆ ಮುಂದಾದಾಗ ಆಕೆಯ ಮನೆಯವರು ಒಪ್ಪಿರಲಿಲ್ಲ. ಅವರಿಬ್ಬರ ನಡುವೆ 11 ವರ್ಷಗಳ ವಯಸ್ಸಿನ ಅಂತರವಿದ್ದರೂ, ಮೂರು ವರ್ಷ ಕಾದ ಸುದರ್ಶನ್ 2010ರಲ್ಲಿ ವಿನಯಾಳನ್ನು ಮದುವೆ ಆಗಿದ್ದನು.

        ದಂಪತಿಗೆ ಒಬ್ಬ ಮಗನಿದ್ದಾನೆ. ಅವರ ಜೀವನ ಸರಿಯಾಗಿಯೇ ಸಾಗುತ್ತಿತ್ತು. ಆದರೆ ಕೆಲ ವರ್ಷಗಳಿಂದ ಸುದರ್ಶನ್ ಪತ್ನಿ ಮೇಲೆ ಅನುಮಾನ ಪಡಲು ಶುರುಮಾಡಿದ್ದಾನೆ. ಆದ್ದರಿಂದ ಮನೆಯಲ್ಲಿ ಸ್ಪೈ ಕ್ಯಾಮೆರಾಗಳನ್ನು ಅಳವಡಿಸಿ ಪತ್ನಿ ಹೊರಗಡೆ ಹೋದಾಗ ಆಕೆಯ ಮೇಲೆ ಕಣ್ಣಿಡಲು ಕೆಲವರನ್ನು ಪತ್ನಿಗೆ ಗೊತ್ತಾಗದಂತೆ ಕಳುಹಿಸುತ್ತಿದ್ದನು.ಈ ಅನುಮಾನದ ಬುದ್ಧಿಯಿಂದಲೇ ದಂಪತಿ ಮಧ್ಯೆ ಹಲವಾರು ಬಾರಿ ಜಗಳ ನಡೆದಿದೆ.

        ಆದರೂ ಪತಿ ಅನುಮಾನದ ಬುದ್ಧಿಯನ್ನು ಬಿಟ್ಟಿರಲಿಲ್ಲ. ಕೆಲವು ದಿನಗಳ ಹಿಂದೆ ತಾನು ಬದಲಾಗಿದ್ದೇನೆ ಎಂದು ನಂಬಿಸಿ ಪತ್ನಿಗೆ ಪ್ರೀತಿಯಿಂದ ಮೊಬೈಲ್‍ವೊಂದನ್ನು ಉಡುಗೊರೆ ನೀಡಿ ಅದರಲ್ಲಿ ಸ್ಪೈವೇರ್ ಪ್ರೋಗ್ರಾಮ್ ಅಳವಡಿಸಿ ಪತ್ನಿಯ ಕರೆ, ಮೆಸೆಜ್‍ಗಳ ಮೇಲೆ ಕಣ್ಣಿಟ್ಟಿದ್ದನು.

        ಮನೆಯಲ್ಲೂ ಕ್ಯಾಮೆರಾ ಅಳವಡಿಸಿರುವುದು ಗೊತ್ತಾಗಿ ಕೋಪಗೊಂಡ ಪತ್ನಿ ಮಗನ ಕ್ರಿಕೆಟ್ ಬ್ಯಾಟಿಂದ ಪತಿಯ ತಲೆಗೆ ಹೊಡೆದಿದ್ದಾಳೆ.ಪತ್ನಿ ತನ್ನ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಅಲ್ಲದೆ ತನ್ನ ಮುಖದ ಆಕಾರವನ್ನೇ ಬದಲಿಸಿದ್ದಾಳೆ ಎಂದು ದೂರಿ ವಿಚ್ಛೇದನಕ್ಕೆ ಅರ್ಜಿಯನ್ನೂ ಕೂಡ ಸಲ್ಲಿಸಿದ್ದಾನೆ.ಈ ಸಂಬಂಧ ದಂಪತಿಯನ್ನು ಒಂದು ಮಾಡಲು ಹಲವು ಬಾರಿ ಕೌನ್ಸ್‍ಲಿಂಗ್ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ದಂಪತಿ ಮಾತ್ರ ಇಬ್ಬರೂ ಮತ್ತೆ ಒಂದಾಗಲು ಒಪ್ಪುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ